ಸೆಂ 30: 2025ರಲ್ಲಿ ನಡೆಸಲಾದ ಎಸ್ಎಸ್ಎಲ್ಸಿ ಪರೀಕ್ಷೆ 1.2 ಮತ್ತು 2ರ ಉತ್ತೀರ್ಣ ಅಂಕಪಟ್ಟಿಯಲ್ಲಿ ತಪ್ಪಾಗಿ ನಮೂದಾದ ಮಾಹಿತಿಗಳನ್ನು ಸರಿಪಡಿಸಲು ವಿದ್ಯಾರ್ಥಿಗಳಿಗೆ ಅಕ್ಟೋಬರ್ 20ರೊಳಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
ಶಾಲಾಹಂತದಲ್ಲಿ ಅಭ್ಯರ್ಥಿಯ ಹೆಸರು, ತಂದೆ-ತಾಯಿ ಹೆಸರು, ಜನ್ಮ ದಿನಾಂಕ, ಲಿಂಗ, ಮಾಧ್ಯಮ ಸೇರಿದಂತೆ ಯಾವುದೇ ಮಾಹಿತಿಯಲ್ಲಿ ತಪ್ಪು ಕಂಡುಬಂದಿದ್ದರೆ, ನಿಗದಿಪಡಿಸಿರುವ ಶುಲ್ಕ ಪಾವತಿಸಿ ವಿದ್ಯಾರ್ಥಿಗಳು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಈ ಕುರಿತು ಆದೇಶ ಪ್ರಕಟಿಸಿ, ಈಗಾಗಲೇ ಅಂಕಪಟ್ಟಿಗಳನ್ನು ಬಿಇಒ ಕಚೇರಿಗೆ ಕಳುಹಿಸಲಾಗಿದೆ.
ಮಂಡಳಿ ಸೂಚನೆಯಂತೆ, ಶಾಲಾ ಮುಖ್ಯ ಶಿಕ್ಷಕರು ಸಂಬಂಧಿತ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿ ತಕ್ಷಣ ವಿತರಿಸಬೇಕು. ಯಾವುದೇ ಮಾಹಿತಿಯಲ್ಲಾದರೂ ತಪ್ಪು ಕಂಡುಬಂದಲ್ಲಿ, ಅಕ್ಟೋಬರ್ 20ರೊಳಗೆ ತಿದ್ದುಪಡಿ ಮಾಡಿ ಪರಿಷ್ಕೃತ ಅಂಕಪಟ್ಟಿ ಪಡೆಯಬಹುದು.
ತಿದ್ದುಪಡಿ ಶುಲ್ಕ ರೂ. 200 ನಿಗದಿಸಲಾಗಿದೆ ಮತ್ತು ಇದನ್ನು ಶಾಲಾ ಮುಖ್ಯ ಶಿಕ್ಷಕರು ಮಾತ್ರ ಮಂಡಳಿಯ ನೆಫ್ಟ್ ಚಲನ್ ಮೂಲಕ ಪಾವತಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯಲ್ಲಿನ ವೈಯಕ್ತಿಕ ವಿವರಗಳನ್ನು ತಕ್ಷಣ ಪರಿಶೀಲಿಸಿ, ಯಾವುದೇ ತೊಂದರೆ ಇರುವಲ್ಲಿ ತಿದ್ದುಪಡಿಗೆ ಮುಂದಾಗುವಂತೆ ತಿಳಿಸಲಾಗಿದೆ.
Views: 18