ಚಿತ್ರದುರ್ಗ ನ. ೦7
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ನ.17ರಿಂದ 16ರವರೆಗೆ ಚಿತ್ರದುರ್ಗ ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಸ್ವದೇಶಿ ಜಾಗರಣ ಮಂಚ್ ಮೇಳವನ್ನು ಆಯೋಜಿಸಲಾಗಿದೆ ಇದರ ಅಂಗವಾಗಿ ಗ್ರಾಮ ದೇವತೆಯಾದ ಉಚ್ಚಂಗಿಯಲ್ಲಮ್ಮ ದೇವಸ್ಥಾನದಲ್ಲಿಂದು ಮೇಳದ ಯಶಸ್ವಿಗಾಗಿ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೇಳದ ಸಂಚಾಲಕರಾದ ಸೌಭಾಗ್ಯ ಬಸವರಾಜನ್ ಇದೇ ಮೊದಲ ಬಾರಿಗೆ ದೇಸಿ ಸಂಸ್ಕೃತಿ, ದೇಸಿ ಆಟ, ಆಹಾರ, ಕ್ರೀಡೆ, ಸಾವಯವ ಕೃಷಿ, ಆಯುರ್ವೇದ ಚಿಕಿತ್ಸೆ, ದೇಸಿ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನಗಳನ್ನೊಳಗೊಂಡ ಸ್ವಾವಲಂಬನೆಯ ಪರಿಕಲ್ಪನೆಯಾದ ಸ್ವದೇಶಿ ಮೇಳವನ್ನು ಕೋಟಿನಗರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ನಮ್ಮಲ್ಲಿ ಗುಡಿ ಕೈಗಾರಿಕೆಗಳು ಹೆಚ್ಚಾಗಿ ಬೆಳಕಿಗೆ ಬರಬೇಕಿದೆ, ಇವುಗಳು ತಯಾರು ಮಾಡಿದ ಉತ್ಪನ್ನಗಳನ್ನು ನಮ್ಮ ಜನತೆ ಖರೀದಿ ಮಾಡಬೇಕಿದೆ, ಇದಕ್ಕೆ ಮಾರುಕಟ್ಟೆಯನ್ನು ನಿರ್ಮಾಣ ಮಾಡಬೇಕಿದೆ ಈ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಈ ಮೇಳದಲ್ಲಿ ಕುಂಬಾರ, ಕಮ್ಮಾರ, ಚಮ್ಮಾರ, ಸಾವಯವ, ದೇಶಿ ವಸ್ತುಗಳ ತಯಾರಿ ಹಾಗೂ ಪ್ರದರ್ಶನ ನಡೆಯಲ್ಲಿದ್ದು ಹಲವು ರೀತಿಯ ಸ್ವದೇಶಿ ಗೋತಳಿ ಪ್ರದರ್ಶನ, ದೇಸಿ ಆಹಾರಗಳ ತಯಾರಿಕೆ ಮತ್ತು ಮಾರಾಟವೂ ಇರಲಿದೆ ಎಂದರು.
ಸ್ವಾವಲಂಬನೆ ಪರಿಕಲ್ಪನೆಯಡಿ ಸಿದ್ದಗೊಳ್ಳುತ್ತಿರುವ ಮೇಳದಲ್ಲಿ ದೇಶದ ವಿವಿಧೆಡೆಯಿಂದ ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವ ಕರಕುಶಲಕರ್ಮಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ ಸ್ಥಳೀಯರಿಗೆ ತರಬೇತಿ, ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಅದಕ್ಕಾಗಿ ಕ್ರೀಡಾಂಗಣದಲ್ಲಿ 2೦೦ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲೆಯ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು, ರೈತರು, ಯುವ ಉದ್ಯಮಿಗಳಿಗೆ ವಿವಿಧ ರೀತಿಯ ಚಟುವಟಿಕೆ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ರಾಷ್ಟ್ರ, ರಾಜ್ಯ ಮಟ್ಟದ ಹಾಗೂ ಸ್ಥಳೀಯ ಕಲಾವಿದರಿಂದ ಸಂಗೀತ, ನಾಟಕ, ಯಕ್ಷಗಾನ, ತೊಗಲು ಗೊಂಬೆಯಾಟ ನಡೆಯಲಿದೆ. ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುವವರಿಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆಯ ಮಾಹಿತಿಯನ್ನೂ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸ್ವದೇಶಿ ಮೇಳದ ಸಂಯೋಜಕರಾದ ಕೆ.ಎಸ್.ನವೀನ್ ಮಾತನಾಡಿ, ನ. 12ರಂದು ವಿಧ್ಯುಕ್ತವಾಗಿ ಮೇಳಕ್ಕೆ ಚಾಲನೆ ದೊರೆಯಲಿದೆ. ಅಂದು ಸ್ವಾವಲಂಬನೆ ಕಲ್ಪನೆಯ ಸ್ವದೇಶಿ ಮೇಳವನ್ನು ಪ್ಲಾಸ್ಟಿಕ್ ಮುಕ್ತವಾಗಿ ನಡೆಯುತ್ತಿರುವುದು ವಿಶೇಷವಾಗಿದೆ. ಒಂದೇ ವೇದಿಕೆಯಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು, ರೈತರು ಪಾಲ್ಗೊಳ್ಳಿದ್ದಾರೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೇಸಿ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಸಂಜೆ ಜಾನಪದ ಕಲಾವೈಭವದಲ್ಲಿ ಅಜಿತ್ ಬಸಾಪುರ ಹಾಗೂ ತಂಡದಿಂದ ಜನಪದ ಗೀತಾಗಾಯನವಿದೆ.
ನ.13ಕ್ಕೆ ಸಾರ್ವಜನಿಕರಿಗೆ ನಿತ್ಯ ಬಳಸುವ ವಸ್ತುಗಳ ತಯಾರಿಕಾ ಶಿಬಿರ ನಡೆಯಲಿದೆ. ನಂತರ ಮಹಿಳಾ ಸಮಾವೇಶ ನಡೆಯಲಿದ್ದು ಮಹಿಳಾ ಉದ್ಯಮಿಗಳು ಮಹಿಳೆಯರು ಉದ್ಯಮ ನಡೆಸಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಂಜೆ ’ಶ್ವೇತಕುಮಾರ ಚರಿತ್ರೆ’ ಯಕ್ಷಗಾನ ಪ್ರಸಂಗ ನಡೆಯಲಿದೆ.
ನ. 14ರಂದು ಆಯುರ್ವೇದ ಶಿಬಿರ ನಡೆಯಲಿದ್ದು ವಿವಿಧೆಡೆಯಿಂದ ಬರುವ ಆಯುರ್ವೇದ ವೈದ್ಯರು ಪಂಚಕರ್ಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡುವರು. ಮಧ್ಯಾಹ್ನ ಯುವ ಸಮಾವೇಶ ನಡೆಯಲಿದ್ದು, ನಿರುದ್ಯೋಗ ಸಮಸ್ಯೆ, ಪರಿಹಾರಗಳ ಬಗ್ಗೆ ತಜ್ಞರು ಉಪನ್ಯಾಸ ನೀಡುವರು. ಸಂಜೆ ಪಂ.ಪ್ರಕಾಶ್ ಹೆಗಡೆ ಕಲ್ಲಾರೆ ಮನೆ, ಪಂ.ವಿಜಯ್ ಗೋನಾಳ್, ಪಂ.ಮಹೇಶ್ ರಾಜ್ ಸಾಲೊಂಕೆ ಅವರಿಂದ ಕೊಳಲು- ಸಿತಾರ್ ಜುಗಲ್‌ಬಂದಿ ಕಾರ್ಯಕ್ರಮವಿದೆ.
ನ. 15ರಂದು ತಾರಸಿ ತೋಟ ರೂಪಿಸುವ ತರಬೇತಿ ನಡೆಯಲಿದೆ. ನಂತರ ರೈತರೊಂದಿಗೆ ಸಂವಾದ ನಡೆಯಲಿದ್ದು, ಸಾವಯವ ಕೃಷಿ, ಬಹುಬೆಳೆ ಪದ್ಧತಿ, ಮಾರುಕಟ್ಟೆ, ಸಹಕಾರ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯಲಿದೆ. ಸಂಜೆಯ ’ಲಯ ಲಾವಣ್ಯ’ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅವರ ತಾಳವಾದ್ಯ ಕಚೇರಿ ಇದೆ.
ನ.16ರಂದು ಬೆಳಿಗ್ಗೆ ರಂಗೋಲಿ ಸ್ಪರ್ಧೆ ಇದೆ.ಮಧ್ಯಾಹ್ನ ಪಂಚಗವ್ಯ ಚಿಕಿತ್ಸಾ ಶಿಬಿರ ನಡೆಯಲಿದೆ. ಸಂಜೆ ಶ್ರೀಕೃಷ್ಣ ಪಾರಿಜಾತ ಸೂತ್ರ ಸಲಾಕೆ ಗೊಂಬೆಯಾಟ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಉಚಿತ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ವದೇಶಿ ಮೇಳದ ಸಂಘಟಕರಾದ ರವೀಂದ್ರ, ಸಹ ಸಂಚಾಲಕರಾದ ಸಂಪತ್ ಕುಮಾರ್, ಯಶವಂತ, ಗುರು, ಶ್ರೀಮತಿ ರೀನಾ ವೀರಭದ್ರಪ್ಪ, ಶ್ರೀಮತಿ ಶಶಿಕಲಾ, ರವಿಶಂಕರ್, ಬಸಮ್ಮ, ಕೊಲ್ಲಿಲಕ್ಷ್ಮೀ, ಸೂರ್ಯ ನಾರಾಯಣ, ರೂಪ ಜನಾರ್ಧನ್, ಚಂದ್ರಿಕಾ ಲೋಕನಾಥ್, ರಾಜೇಶ್ವರಿ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 17