ನವೆಂಬರ್ 09: ದಸರಾ, ದೀಪಾವಳಿ ಹಬ್ಬಗಳಿಗೆ ಸಾಲು ಸಾಲು ರಜೆ (holiday)ಜೊತೆಗೆ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆಯ ಬೋನಸ್ ರಜೆ, ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರ ತಲೆ ಬಿಸಿಗೆ ಕಾರಣವಾಗಿತ್ತು. ಸಾಲು ಸಾಲು ರಜೆಯಿಂದಾಗಿ ಸದ್ಯ ಪಾಠದ ಸಮಯ ಕಡಿಮೆಯಾಗಿದ್ದು, ಇದನ್ನು ಸರಿಪಡಿಸಲು ಶಿಕ್ಷಣ ಇಲಾಖೆಯಿಂದ ಹೊಸ ಸುತ್ತೋಲೆ ಹೊರಡಿಸಲಾಗಿದೆ.
ಶೈಕ್ಷಣಿಕ ಅವಧಿ ಕಡಿಮೆ
ಕಳೆದ ವರ್ಷ ಎಸ್ಎಸ್ಎಲ್ಸಿ ಫಲಿತಾಂಶ ಕುಸಿತದಿಂದ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರು. ಹೀಗಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದ್ದಂತೆ ಶಿಕ್ಷಣ ಇಲಾಖೆಗೆ ಟಾರ್ಗೆಟ್ ನೀಡಿದ್ದು, ಮುಂದಿನ ವರ್ಷ 75% ಫಲಿತಾಂಶ ಸಾಧಿಸುವ ಗುರಿ ನೀಡಿದ್ದಾರೆ. ಆದರೆ ಈ ನಡುವೆ ಶಾಲೆಗಳಿಗೆ ಸಮೀಕ್ಷೆಯಿಂದಾಗಿ ಹೆಚ್ಚುವರಿ ರಜೆ ನೀಡಲಾಗಿತ್ತು. ದಸರಾ ರಜೆಗೆ ಹೋದ ಮಕ್ಕಳು ದೀಪಾವಳಿ ಹಬ್ಬದ ಬಳಿಕ ಮರಳಿ ಶಾಲೆಗೆ ಆಗಮಿಸಿದ್ದು, ಇದರಿಂದ ಶೈಕ್ಷಣಿಕ ಅವಧಿ ಕಡಿಮೆಯಾಗಿದೆ.8 ಪೂರ್ಣ ದಿನಗಳು, 2 ಅರ್ಧ ದಿನಗಳು ಒಟ್ಟು 66 ಅವಧಿಗಳು ಲಾಸ್ ಆಗಿದೆ. ಇದನ್ನ ಸರಿಪಡಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. 8, 9 ಹಾಗೂ 10ನೇ ತರಗತಿಗಳಿಗೆ ವಿಶೇಷ ತರಗತಿ ನಡೆಸುವ ಬಗ್ಗೆ ಸುತ್ತೋಲೆ ಹೊರಡಿಸಲಾಗಿದ್ದು, 2025-26ನೇ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶೈಕ್ಷಣಿಕ ಕ್ಯಾಲೆಂಡರ್ ಕೊಂಚ ಬದಲಾವಣೆ ಮಾಡಿದ್ದು, ಪಾಠದ ಸಮಯ ಮತ್ತು ದಿನಾಂಕಗಳ ಬಗ್ಗೆ ಮಾಹಿತಿ ನೀಡಿದೆ.
ಶೈಕ್ಷಣಿಕ ಸಮೀಕ್ಷೆಯಿಂದ 8 ಪೂರ್ತಿ ದಿನ, ಜೊತೆಗೆ 2 ಅರ್ಧ ದಿನಗಳ ಅವಧಿ ಕಡಿತವಾಗಿದೆ. 8 ಪೂರ್ಣ ದಿನಗಳು: 8×7=56 ಕ್ಲಾಸ್ಗಳು. 2 ಅರ್ಧ ದಿನಗಳು: 2×5 = 10 ಕಾಸ್ಲ್ಗಳು, ಒಟ್ಟು: 66 ಕಾಸ್ಲ್ಗಳು ಕಡಿತವಾಗಿವೆ. ಹೀಗಾಗಿ 8, 9 ಹಾಗೂ 10ನೇ ತರಗತಿಗೆ 2026 ಜನವರಿ 24 ತನಕ ಹೆಚ್ಚುವರಿ ತರಗತಿ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದು, ಶಾಲೆಗಳಲ್ಲಿ ಹಬ್ಬ, ರಜೆ, ಸರ್ಕಾರಿ ಕಾರ್ಯಕ್ರಮಗಳಿಗೆ ಅನುಗುಣವಾಗಿ ಪಾಠ ಸಮಯದ ಮಾರ್ಪಾಡು ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಶಾಲೆಯ ಅವಧಿಗೂ ಮೊದಲು ಅಥವಾ ನಂತರ ಒಂದು ಹೆಚ್ಚುವರಿ ತರಗತಿ ನಡೆಸುವಂತೆ ಸೂಚನೆ ನೀಡಿದ್ದು ಶಾಲೆಗಳು ಈ ಬಗ್ಗೆ ಸಿದ್ಧತೆ ನಡೆಸಿವೆ.
ಎಸ್ಎಸ್ಎಲ್ಸಿ ಪರೀಕ್ಷೆಗೆ ಬ್ಲೂಪ್ರಿಂಟ್ ಸಿದ್ಧ
ಎಸ್ಎಸ್ಎಲ್ಸಿ ಪರೀಕ್ಷೆಗೆ ಬ್ಲೂಪ್ರಿಂಟ್ ಸಿದ್ದವಾಗಿದೆ. ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗೆ ಫಲಿತಾಂಶದ ಅಂಕ 33 ಇಳಿಸಿ ಕಡಿತ ಹಿನ್ನಲೆ ಪರೀಕ್ಷಾ ಪ್ಯಾಟರ್ನ್ ಏನು? 100 ಅಂಕಗಳ ಪ್ರಶ್ನೆ ಪತ್ರಿಕೆ ಹೇಗಿರಲಿದೆ?ಎಷ್ಟು ಪ್ರಶ್ನೆಗಳು ಇರಲಿದೆ? 100ಕ್ಕೆ ಎಷ್ಟು ಅಂಕ ಬಂದ್ರೆ ತೇರ್ಗಡೆ? ಎಷ್ಟು ಆತಂರಿಕ ಅಂಕಗಳನ್ನ ಪಡೆಯಬೇಕು? ಎಷ್ಟು ಲಿಖಿತ ಅಂಕ ಬಂದರೆ ಪಾಸ್ ಎಂಬ ಬಗ್ಗೆ ಸಂಪೂರ್ಣ ನೀಲಿ ನಕಾಶೆಯನ್ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧಪಡಿಸಿದ್ದು, ಈಗಾಗಲೇ ಶಾಲೆಗಳಿಗೆ ತಲುಪಿಸಿದೆ.
ಇದು ಮಕ್ಕಳಿಗೆ ಪರೀಕ್ಷೆಯ ತಯಾರಿ ಸಿದ್ಧತೆ ಮಾಡಿಕೊಳ್ಳಲು ನೆರವಾಗಲಿದೆ. ಬ್ಲೂಪ್ರಿಂಟ್ನಿಂದ ಮಕ್ಕಳಿಗೆ ಯಾವೆಲ್ಲಾ ವಿಷಯಕ್ಕೆ ಹೇಗೆ ತಯಾರಿ ಮಾಡಿಕೊಳ್ಳಬೇಕು? ಎಷ್ಟು ಪ್ರಶ್ನೆಗಳು ಬರಲಿದೆ? ಎಷ್ಟು ಅಂಕದ ಎಷ್ಟು ಪ್ರಶ್ನೆಗಳು ಇರಲಿದೆ ಅನ್ನೊ ಚಿತ್ರಣ ಸಿಗಲಿದೆ. SSLC ಮಕ್ಕಳಿಗೆ ಈ ನೀಲಿ ನಕಾಶೆಯಿಂದ ಪರೀಕ್ಷೆ ಸಿದ್ಧತೆ ಬಗ್ಗೆ ಮಾಹಿತಿ ಸಿಗಲಿದ್ದು ಶಿಕ್ಷಕರಿಗೂ ಅನಕೂಲವಾಗಲಿದೆ.
ಶಿಕ್ಷಕರ ಸಂಘದ ಕಾರ್ಯದರ್ಶಿ ದೇವರಾಜ್ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಮಾತನಾಡಿದ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ದೇವರಾಜ್, ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಪರೀಕ್ಷೆಯ ಮಾನದಂಡದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ಬ್ಲೂಪ್ರಿಂಟ್ ಯಾವುದೇ ಬದಲಾವಣೆ ಇಲ್ಲ. ಕಳೆದ ವರ್ಷದ್ದಂತೆ ರಚಿಸಿದ್ದು ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗೆ ನೆರವಾಗಲಿದೆ ಎಂದಿದ್ದಾರೆ.
ಎಸ್ಎಸ್ಎಲ್ಸಿ ಉತ್ತೀರ್ಣ ನಿಯಮದಲ್ಲಿ ಬದಲಾವಣೆ
- ಇದೀಗ 35 ಅಂಕಗಳ ಅವಶ್ಯಕತೆ ಇಲ್ಲ
- ಒಟ್ಟಾರೆ ಶೇ.35 ರ ಬದಲಿಗೆ ಶೇ.33 ಅಂಕಗಳನ್ನು ಗಳಿಸಿದರೆ ಉತ್ತೀರ್ಣ
- ಒಟ್ಟು 625 ಅಂಕಗಳಿಗೆ ಕನಿಷ್ಠ 206 ಅಂಕ ಗಳಿಸಿದ ವಿದ್ಯಾರ್ಥಿ ಉತ್ತೀರ್ಣ
SSLC ಪರೀಕ್ಷೆ 1 ಮತ್ತು 2ರ ಅಂತಿಮ ವೇಳಾಪಟ್ಟಿ ಪ್ರಕಟ
- ಎಸ್ಎಸ್ಎಲ್ಸಿ ಪರೀಕ್ಷೆ-1 ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯುಲಿದೆ.
- ಮೇ 18ರಿಂದ ಮೇ 25ವರೆಗೆ SSLC ಪರೀಕ್ಷೆ-2 ನಡೆಯಲಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿ
- ಮಾರ್ಚ್ 18 (ಪ್ರಥಮ ಭಾಷೆ)- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ
- ಮಾರ್ಚ್ 23- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ
- ಮಾರ್ಚ್ 25 (ದ್ವಿತೀಯ ಭಾಷೆ)- ಇಂಗ್ಲಿಷ್, ಕನ್ನಡ
- ಮಾರ್ಚ್ 28- ಗಣಿತ, ಸಮಾಜಶಾಸ್ತ್ರ
- ಮಾರ್ಚ್ 30) (ತೃತೀಯ ಭಾಷೆ)- ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ
- ಏಪ್ರಿಲ್ 01- ಅರ್ಥಶಾಸ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್, ಎಲಿಮೆಂಟ್ಸ್ ಆಫ್ ಮೆಕ್ಯಾನಕಲ್ ಇಂಜಿನಿಯರ್
- ಏಪ್ರಿಲ್ 2- ಸಮಾಜ ವಿಜ್ಞಾನ.
ಒಟ್ಟಿನಲ್ಲಿ ಶೈಕ್ಷಣಿಕ ಕ್ಯಾಲೆಂಡರ್ ಸರಿದೂಗಿಸಿ ಅಂತಿಮ ಪರೀಕ್ಷೆಗಳು ಮುಗಿಯುವ ಮುನ್ನವೇ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ಧತೆ ಶುರುವಾಗಿದೆ.
Views: 52