ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ ಕಠಿಣ: ಭಾರತಕ್ಕೆ ಉಳಿದ 10ರಲ್ಲಿ 7 ಜಯ ಅವಶ್ಯ

Sports News: ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲಿನಾಸ್ವಾದಿಸಿದ್ದು, ಇದರಿಂದ 2025–27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಹಾದಿ ಭಾರತಕ್ಕೆ ಇನ್ನಷ್ಟು ಕಠಿಣವಾಗಿ ಪರಿಣಮಿಸಿದೆ. ಈ ಸೋಲಿನಿಂದ ಭಾರತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಾರಿದೆ.

ಇಂಗ್ಲೆಂಡ್ ವಿರುದ್ಧ 2-2 ಡ್ರಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ 2-0 ಗೆಲುವು ಸಾಧಿಸಿದ್ದ ಭಾರತ, ಈಗ ದಕ್ಷಿಣ ಆಫ್ರಿಕಾ ವಿರುದ್ಧದ 2 ಟೆಸ್ಟ್‌ಗಳ ಸರಣಿಯಲ್ಲಿ 0-1ರಿಂದ ಹಿಂದೆಬಿದ್ದಿದೆ. ಮುಂದಿನ ಪಂದ್ಯಗಳು ಭಾರತದ ಭವಿಷ್ಯವನ್ನು ಬದಲಾಯಿಸುವಂತಿವೆ.

2025–27ರ ಅವಧಿಯಲ್ಲಿ ಭಾರತ ತಂಡಕ್ಕೆ ಇನ್ನೂ 10 ಟೆಸ್ಟ್‌ ಪಂದ್ಯಗಳು ಬಾಕಿ. ಶ್ರೀಲಂಕಾ ಹಾಗೂ ನ್ಯೂಜಿಲೆಂಡ್‌ನಲ್ಲಿ ತಲಾ 2, ಹಾಗೂ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳು ನಡೆಯಲಿವೆ. ಈ ಸರಣಿಯೇ ಟೀಂ ಇಂಡಿಯಾದ ಫೈನಲ್ ಅವಕಾಶವನ್ನು ನಿರ್ಧರಿಸಲಿದೆ.

ಸದ್ಯದ ಲೆಕ್ಕಾಚಾರದ ಪ್ರಕಾರ, ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪಬೇಕಾದರೆ ಉಳಿದ 10 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆಲುವು ದಾಖಲಿಸಲೇಬೇಕು. ವಿಶೇಷವಾಗಿ ತವರಿನಾಚೆ ನ್ಯೂಜಿಲೆಂಡ್ ಎದುರು ಹಾಗೂ ತವರಿನಲ್ಲಿ ಆಸ್ಟ್ರೇಲಿಯಾ ಎದುರಿನ ಪ್ರದರ್ಶನ ದೊಡ್ಡ ಸವಾಲಾಗಿ ಪರಿಣಮಿಸಬಹುದು.

ಹಿಂದಿನ ಮೂರನೇ ಆವೃತ್ತಿಯಲ್ಲೂ ಟೀಂ ಇಂಡಿಯಾ ಮೊದಲ ಸಲ ಫೈನಲ್ ಗೇರುವಲ್ಲಿ ವಿಫಲವಾಗಿದ್ದದ್ದು ಸ್ಮರಣೀಯ. ಈಗಿನ ಪ್ರದರ್ಶನ ಗಮನಿಸಿದರೆ, ಭಾರತ ಮತ್ತೊಮ್ಮೆ ಫೈನಲ್‌ ರೇಸ್‌ನಿಂದ ಹೊರಬೀಳುವ ಆತಂಕ ವ್ಯಕ್ತವಾಗಿದೆ.

Views: 16

Leave a Reply

Your email address will not be published. Required fields are marked *