ರಾಜ್ಯದ ಗಡಿ ಜಿಲ್ಲೆಯಾದ ಚಾಮರಾಜನಗರ ದೇಶದಲ್ಲೇ ಅತ್ಯಂತ ಶುದ್ಧ ಗಾಳಿಯಿರುವ ನಾಲ್ಕನೇ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ. ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ (CREEA) ನವೆಂಬರ್‌ನಲ್ಲಿ ನಡೆಸಿದ ಗಾಳಿಯ ಗುಣಮಟ್ಟ ಸಮೀಕ್ಷೆಯಲ್ಲಿ ಈ ಸಾಧನೆ ದಾಖಲಾಗಿದೆ.
ಚಾಮರಾಜನಗರ ಜಿಲ್ಲೆಯ ಶೇ.51 ರಷ್ಟು ಅರಣ್ಯ ಪ್ರದೇಶ, ಕಡಿಮೆ ವಾಹನ ಸಂಚಾರ, ಕಡಿಮೆ ಕಾರ್ಖಾನೆಗಳು ಮತ್ತು ಹೆಚ್ಚಿನ ಹಳ್ಳಿ ಪ್ರದೇಶಗಳು ಶುದ್ಧ ಗಾಳಿಗೆ ಪ್ರಮುಖ ಕಾರಣಗಳಾಗಿವೆ. ಕಳೆದ ವರ್ಷ 6ನೇ ಸ್ಥಾನದಲ್ಲಿದ್ದ ಜಿಲ್ಲೆ, ಈ ಬಾರಿ ಎರಡು ಸ್ಥಾನಗಳನ್ನು ಏರಿ 4ನೇ ಸ್ಥಾನಕ್ಕೆ ತಲುಪಿದೆ.
ಸಮೀಕ್ಷಾ ವರದಿ ಪ್ರಕಾರ ಮೇಘಾಲಯದ ಶಿಲ್ಲಾಂಗ್ ಮೊದಲ ಸ್ಥಾನ, ಸಿಕ್ಕಿಂನ ಗ್ಯಾಂಗ್ಟಕ್ ಎರಡನೇ, ಕರ್ನಾಟಕದ ಕೊಪ್ಪಳ ಮೂರನೇ ಸ್ಥಾನ ಪಡೆದರೆ, ಚಾಮರಾಜನಗರ ನಾಲ್ಕನೇ ಸ್ಥಾನ ಪಡೆದು ರಾಜ್ಯಕ್ಕೆ ಮತ್ತೊಂದು ಹೆಗ್ಗಳಿಕೆ ತಂದಿದೆ. ಟಾಪ್ 10 ಪಟ್ಟಿಯಲ್ಲಿ ಕರ್ನಾಟಕದ ಶಿವಮೊಗ್ಗ 6ನೇ, ಗದಗ 8ನೇ, ಮೈಸೂರು 9ನೇ ಮತ್ತು ಬಾಗಲಕೋಟೆ 10ನೇ ಸ್ಥಾನದೊಂದಿಗೆ ಸ್ಥಾನ ಪಡೆದಿವೆ.
ಜಿಲ್ಲೆಯ ಮೂರುಭಾಗಗಳನ್ನು ಅರಣ್ಯ ಪ್ರದೇಶ ಸುತ್ತುವರೆದಿದ್ದು, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮುಂತಾದ ಪ್ರಾಕೃತಿಕ ಸಂಪತ್ತು ಶುದ್ಧ ಗಾಳಿಗೆ ಬಲವಾಗಿದೆ. ನಗರದಲ್ಲಿ ನಡೆದು ಬರುತ್ತಿರುವ ಗಿಡ-ಮರಗಳ ನೆಡುವ ಕಾರ್ಯಕ್ಕೆ ಹಾಗೂ ನಿರಂತರ ಸಂರಕ್ಷಣೆಗೆ ಅನೇಕ ಸ್ಥಳೀಯರು ಕೊಡುಗೆ ನೀಡುತ್ತಿರುವುದು ವಿಶೇಷ.
ಪ್ರಕೃತಿ ಸಂಪತ್ತಿನ ಮೌಲ್ಯವನ್ನು ಕಾಪಾಡಿಕೊಂಡಿರುವ ಚಾಮರಾಜನಗರ, ಶುದ್ಧ ಗಾಳಿಯ ಮಾದರಿ ಜಿಲ್ಲೆ ಎಂದು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತೋರಿಸಿದೆ.