ರಾಜ್ಯದಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ: 62.40 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

Health Care: ರಾಜ್ಯದಲ್ಲಿ ಪೋಲಿಯೊ ನಿರ್ಮೂಲನೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಆರೋಗ್ಯ ಇಲಾಖೆ ಭಾನುವಾರ (ಡಿ.21) ಪಲ್ಸ್ ಪೋಲಿಯೊ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದಡಿ ಐದು ವರ್ಷದೊಳಗಿನ 62.40 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.ಪೋಲಿಯೊ ಲಸಿಕೆ ವಿತರಣೆಗೆ ರಾಜ್ಯಾದ್ಯಂತ 33,258 ಲಸಿಕಾ ಬೂತ್‌ಗಳನ್ನು ಗುರುತಿಸಲಾಗಿದ್ದು, ಮಕ್ಕಳಿಗೆ ಸುಲಭವಾಗಿ ಲಸಿಕೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ನೀಡಲು 1,030 ಸಂಚಾರಿ ತಂಡಗಳು ಕಾರ್ಯನಿರ್ವಹಿಸಲಿವೆ. ಪ್ರಯಾಣಿಕರು ಹಾಗೂ ಸ್ಥಳಾಂತರಗೊಳ್ಳುವ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು 2,096 ಟ್ರಾನ್ಸಿಟ್ ತಂಡಗಳನ್ನೂ ರಚಿಸಲಾಗಿದೆ.

ಈ ಮಹತ್ವದ ಆರೋಗ್ಯ ಕಾರ್ಯಕ್ರಮಕ್ಕೆ 1.13 ಲಕ್ಷ ಕಾರ್ಯಕರ್ತರು ಮತ್ತು 7,322 ಮೇಲ್ವಿಚಾರಕರು ನಿಯೋಜಿತರಾಗಿದ್ದಾರೆ. ನಗರ, ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳನ್ನೂ ಒಳಗೊಂಡಂತೆ ರಾಜ್ಯದ ಎಲ್ಲ ಆಸ್ಪತ್ರೆಗಳು ಮತ್ತು ಲಸಿಕಾ ಕೇಂದ್ರಗಳಲ್ಲಿ ಪೋಲಿಯೊ ಹನಿ ಹಾಕುವ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರು ತಮ್ಮ ಹತ್ತಿರದ ಲಸಿಕಾ ಕೇಂದ್ರವನ್ನು ಹುಡುಕಲು ‘Nearby Vaccination Centre Karnataka’ ಆಪ್‌ ಅನ್ನು ಬಳಸಬಹುದು.ಡಿ.21ರಂದು ಯಾವುದೇ ಕಾರಣಕ್ಕೆ ಪೋಲಿಯೊ ಹನಿ ಪಡೆಯದ ಮಕ್ಕಳಿಗೆ, ಡಿ.22 ಮತ್ತು ಡಿ.23ರಂದು ಮನೆಮನೆಗೆ ತೆರಳಿ ಕಾರ್ಯಕರ್ತರು ಲಸಿಕೆ ಹಾಕಲಿದ್ದಾರೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, “ಐದು ವರ್ಷದೊಳಗಿನ ಎಲ್ಲಾ ಮಕ್ಕಳು ಕಡ್ಡಾಯವಾಗಿ ಪೋಲಿಯೊ ಲಸಿಕೆ ಪಡೆದುಕೊಳ್ಳಬೇಕು. ಇದರಿಂದ ಪೋಲಿಯೊ ವಿರುದ್ಧದ ಹೋರಾಟದಲ್ಲಿ ನಮ್ಮ ವಿಜಯವನ್ನು ಮುಂದುವರಿಸಬಹುದು” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *