ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಡಿ. 23:
ಬಿಜೆಪಿ ಯಾವತ್ತೂ ಮಹಾತ್ಮ ಗಾಂಧಿಯನ್ನು ಒಪ್ಪಿಕೊಂಡಿಲ್ಲ. ಗಾಂಧೀಜಿ ಹೆಸರಿನಲ್ಲಿ ಬಿಜೆಪಿ ಕೇವಲ ಶೋ ಮಾಡುತ್ತದೆ ಎಂದು ರಾಜ್ಯ ಕಾರ್ಮಿಕ ಸಚಿವ ಎಸ್. ಸಂತೋಷ್ ಲಾಡ್ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಚರಕ ಹಿಡಿದು ಫೋಟೋಗೆ ಪೋಸ್ ಕೊಡುತ್ತಾರೆ. ವಿದೇಶ ಪ್ರವಾಸದ ವೇಳೆ ಗಾಂಧೀಜಿ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ವಾಸ್ತವದಲ್ಲಿ ಬಿಜೆಪಿಗೆ ಮಹಾತ್ಮ ಗಾಂಧಿ ಮಹತ್ವವಿಲ್ಲ. ಗಾಂಧೀಜಿ ನಮಗೂ ಕಾಂಗ್ರೆಸ್ಗೂ ಅತ್ಯಂತ ಪ್ರಮುಖರು ಎಂದು ಹೇಳಿದರು.
ಕೆನಡಾ, ಸಿಂಗಾಪುರ, ಯುಕೆ ಸೇರಿದಂತೆ ಕೆಲವು ದೇಶಗಳು ತಮ್ಮ ನಾಗರಿಕರಿಗೆ “ಭಾರತಕ್ಕೆ ಹೋಗಬೇಡಿ” ಎಂಬ ಎಚ್ಚರಿಕೆ ನೋಟಿಸ್ ನೀಡುತ್ತಿವೆ. ಇಂತಹ ಗಂಭೀರ ವಿಷಯಗಳ ಬಗ್ಗೆ ಪ್ರಧಾನಮಂತ್ರಿ ಏಕೆ ಮಾತನಾಡುತ್ತಿಲ್ಲ? ಇಂತಹ ವಿಚಾರಗಳನ್ನು ಬಿಟ್ಟು ಕೇವಲ ವಂದೇ ಮಾತರಂ ಬಗ್ಗೆ ಮಾತನಾಡುವುದೇ ಬುದ್ಧಿವಂತಿಕೆ ಎಂದು ಪ್ರಶ್ನಿಸಿದರು.
ನರೇಗಾ ಸೇರಿದಂತೆ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಹಲವು ಜನಪರ ಯೋಜನೆಗಳ ಹೆಸರನ್ನು ಎನ್ಡಿಎ ಸರ್ಕಾರ ಬದಲಾಯಿಸಿದೆ. ಆದರೆ ಎನ್ಡಿಎಯಿಂದ ಹೊಸದಾಗಿ ಜನಪರ ಕಾರ್ಯಕ್ರಮಗಳು ನಡೆದಿಲ್ಲ. ನರೇಗಾ ಹೆಸರನ್ನು ಬದಲಾಯಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ ಎಂದು ಸಚಿವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೈಕಮಾಂಡ್ ಕುರಿತು ಮಾಡಿದ ಹೇಳಿಕೆಗೆ ಪ್ರತಿಕ್ರಿಯಿಸದ ಸಂತೋಷ್ ಲಾಡ್, “ನಮಗೆ ಯಾರು ಹೈಕಮಾಂಡ್ ಎನ್ನುವುದು ಗೊತ್ತಿದೆ. ಬೇರೆಯವರಿಂದ ತಿಳಿದುಕೊಳ್ಳುವ ಅಗತ್ಯವಿಲ್ಲ” ಎಂದು ಹೇಳಿದರು.
ರಾಜ್ಯ ಅಭಿವೃದ್ಧಿ ನಿಷ್ಕ್ರಿಯವಾಗಿದೆ ಎಂಬ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, “ಈಗ ದೆಹಲಿಯಲ್ಲಿ ವಾತಾವರಣ ಹೇಗಿದೆ?” ಎಂದು ಪ್ರಶ್ನಿಸಿದರು.
Views: 21