ವಾಷಿಂಗ್ಟನ್:
ಅಕ್ರಮ ವಲಸಿಗರಿಗೆ ಅಮೆರಿಕಾ ಸರ್ಕಾರ ಬಂಪರ್ ಆಫರ್ ನೀಡಿದೆ. ಸ್ವಯಂಪ್ರೇರಿತರಾಗಿ ಅಮೆರಿಕಾ ತೊರೆದು ತಮ್ಮ ಸ್ವದೇಶಕ್ಕೆ ಮರಳುವ ಅಕ್ರಮ ವಲಸಿಗರಿಗೆ 3,000 ಡಾಲರ್ (ಸುಮಾರು ₹2.7 ಲಕ್ಷ) ನಗದು ಹಾಗೂ ಉಚಿತ ವಿಮಾನ ಟಿಕೆಟ್ ನೀಡಲಾಗುವುದು ಎಂದು ಅಮೆರಿಕದ ಗೃಹ ಭದ್ರತಾ ಇಲಾಖೆ (DHS) ಘೋಷಿಸಿದೆ.
ಈ ಯೋಜನೆಯ ಮೂಲಕ ದೇಶ ತೊರೆದವರು ಭವಿಷ್ಯದಲ್ಲಿ ಕಾನೂನುಬದ್ಧವಾಗಿ ಅಮೆರಿಕಾ ಪ್ರವೇಶಿಸಲು ಬಯಸಿದರೆ ಅದಕ್ಕೆ ಅವಕಾಶಗಳು ಸುಲಭವಾಗಬಹುದು ಎಂದು DHS ತಿಳಿಸಿದೆ. ಆದರೆ ಈ ಯೋಜನೆಯನ್ನು ಬಳಸಿಕೊಳ್ಳದೆ ಅಮೆರಿಕಾದಲ್ಲೇ ಉಳಿದರೆ ಬಂಧನ, ಗಡಿಪಾರು ಮತ್ತು ಭವಿಷ್ಯದಲ್ಲಿ ಅಮೆರಿಕಾ ಪ್ರವೇಶಕ್ಕೆ ಶಾಶ್ವತ ನಿರ್ಬಂಧ ಎದುರಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ ಅಕ್ರಮ ವಲಸಿಗರ ವಿರುದ್ಧ ಕಠಿಣ ನಿಲುವು ತಾಳಿದ್ದಾರೆ. ‘ಕ್ಲೀನ್ ಅಮೆರಿಕಾ’ ಅಭಿಯಾನದಡಿ ದಿನಕ್ಕೊಂದು ಹೊಸ ವಲಸೆ ವಿರೋಧಿ ನಿಯಮಗಳನ್ನು ಜಾರಿಗೆ ತರುತ್ತಿರುವ ಟ್ರಂಪ್ ಆಡಳಿತ, ಇದೀಗ ಅಕ್ರಮ ವಲಸಿಗರಿಗೆ ಕ್ರಿಸ್ಮಸ್ ಹಾಲಿಡೇ ಆಫರ್ ಘೋಷಿಸಿದೆ.
ಈ ಹಿಂದೆ DHS ‘ಸೈಬರ್ ಮಂಡೇ ಡೀಲ್’ ಹೆಸರಿನಲ್ಲಿ ಜಾರಿಗೊಳಿಸಿದ್ದ ಯೋಜನೆಯಲ್ಲಿ, ಅಮೆರಿಕಾ ತೊರೆದ ಅಕ್ರಮ ವಲಸಿಗರಿಗೆ ಉಚಿತ ವಿಮಾನ ಟಿಕೆಟ್ ಜೊತೆಗೆ 1,000 ಡಾಲರ್ ನೀಡುವುದಾಗಿ ಘೋಷಿಸಿತ್ತು. ಇದೀಗ ಆ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಿ 3,000 ಡಾಲರ್ ನೀಡಲು ನಿರ್ಧರಿಸಿದೆ.
ಯೋಜನೆಯ ಮುಖ್ಯ ಅಂಶಗಳು
ಅಮೆರಿಕದ ಗೃಹ ಭದ್ರತಾ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ,
- ಅಕ್ರಮ ವಲಸಿಗರು CBP Home App ಮೂಲಕ ನೋಂದಣಿ ಮಾಡಿಕೊಂಡು
- ಡಿಸೆಂಬರ್ 31ರೊಳಗೆ ಅಮೆರಿಕಾ ತೊರೆಯಲು ಒಪ್ಪಿಕೊಂಡರೆ
- ಅವರಿಗೆ 3,000 ಡಾಲರ್ ನಗದು ಮತ್ತು ಉಚಿತ ವಿಮಾನ ಪ್ರಯಾಣ ಸೌಲಭ್ಯ ನೀಡಲಾಗುತ್ತದೆ.
ಇದಲ್ಲದೆ, ಆಪ್ ಮೂಲಕ ನೋಂದಾಯಿಸಿಕೊಂಡವರು ದೇಶ ತೊರೆಯಲು ವಿಫಲವಾದರೆ ವಿಧಿಸಬಹುದಾದ ಕೆಲವು ನಾಗರಿಕ ದಂಡ ಮತ್ತು ಶುಲ್ಕಗಳನ್ನು ಮನ್ನಾ ಮಾಡಲಾಗುತ್ತದೆ ಎಂದು DHS ತಿಳಿಸಿದೆ.
ಈ ರಜಾ ಕಾಲದಲ್ಲಿ ಸ್ವಯಂಪ್ರೇರಿತವಾಗಿ ದೇಶ ತೊರೆಯುವುದು ಅಕ್ರಮ ವಲಸಿಗರು ತಮ್ಮ ಕುಟುಂಬಕ್ಕೆ ನೀಡಬಹುದಾದ ಅತ್ಯುತ್ತಮ ಉಡುಗೊರೆ ಎಂದು DHS ಹೇಳಿದ್ದು, ಈ ಪ್ರಕ್ರಿಯೆ ವೇಗವಾದ, ಉಚಿತ ಮತ್ತು ಸುಲಭವಾಗಿದೆ ಎಂದು ತಿಳಿಸಿದೆ. ಆಪ್ ಡೌನ್‌ಲೋಡ್ ಮಾಡಿ ಮಾಹಿತಿಯನ್ನು ಭರ್ತಿ ಮಾಡಿದ ಬಳಿಕ DHS ಅವರ ಪ್ರಯಾಣ ವ್ಯವಸ್ಥೆ ಮಾಡುತ್ತದೆ ಹಾಗೂ ಹಣವನ್ನು ಒದಗಿಸುತ್ತದೆ.
ಯೋಜನೆ ಬಳಸಿಕೊಳ್ಳದಿದ್ದರೆ?
ಈ ಯೋಜನೆಯಲ್ಲಿ ಭಾಗವಹಿಸದೆ ಅಮೆರಿಕಾದಲ್ಲೇ ಉಳಿಯಲು ಪ್ರಯತ್ನಿಸಿದ ಅಕ್ರಮ ವಲಸಿಗರನ್ನು ಬಂಧಿಸಿ ಗಡಿಪಾರು ಮಾಡಲಾಗುವುದು. ಇದರಿಂದ ಅವರು ಮತ್ತೆ ಎಂದಿಗೂ ಅಮೆರಿಕ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದು DHS ಎಚ್ಚರಿಕೆ ನೀಡಿದೆ.
DHS ಮಾಹಿತಿ ಪ್ರಕಾರ, 2025ರ ಜನವರಿಯಿಂದ ಇಲ್ಲಿಯವರೆಗೆ 1.9 ಮಿಲಿಯನ್ ಅಕ್ರಮ ವಲಸಿಗರು ಸ್ವಯಂಪ್ರೇರಿತರಾಗಿ ಅಮೆರಿಕಾ ತೊರೆದಿದ್ದಾರೆ. ಅವರಲ್ಲಿ ಹತ್ತಾರು ಸಾವಿರ ಮಂದಿ CBP Home App ಬಳಸಿದ್ದಾರೆ. ಈ ಹೊಸ ಯೋಜನೆ ಅಮೆರಿಕದ ವಲಸೆ ನೀತಿಯಲ್ಲಿ ಮಹತ್ವದ ಬದಲಾವಣೆಯೆಂದು ಪರಿಗಣಿಸಲಾಗುತ್ತಿದೆ.
Views: 17