ಚಿತ್ರದುರ್ಗದಲ್ಲಿ ಡಿ.24ರಿಂದ ಅಟಲ್ ಬಿಹಾರಿ ಜನ್ಮ ಸಪ್ತಾಹ: ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ.

ಚಿತ್ರದುರ್ಗ, ಡಿ. 23:

ಭಾರತರತ್ನ, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಿಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ **ಡಿ. 24 ರಿಂದ 31ರವರೆಗೆ ‘ಅಟಲ್ ಬಿಹಾರಿ ಜನ್ಮ ಸಪ್ತಾಹ’**ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಿಪೇಯಿ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇಶದ ಅಭಿವೃದ್ಧಿಗೆ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಿ, ನಗರ–ಗ್ರಾಮ ಸಂಪರ್ಕವನ್ನು ಬಲಪಡಿಸಿದರು. ವಾಜಿಪೇಯಿ ಅವರ ಜೀವನ ಸಾಧನೆಗಳು ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿವೆ. ಈ ಸಾಧನೆಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪ್ರಮುಖ ಕಾರ್ಯಕ್ರಮಗಳ ವಿವರ

  • ಡಿ.24 (ಬುಧವಾರ) ಸಂಜೆ 6.30ಕ್ಕೆ
    ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಲ್ಲಿ ಅಟಲ್‌ಜಿಗೆ ದೀಪ ನಮನ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮೆಣದ ಬತ್ತಿ ಹಿಡಿದು ನಮನ ಸಲ್ಲಿಸಲಿದ್ದಾರೆ.
  • ಡಿ.25 (ಗುರುವಾರ) ಬೆಳಿಗ್ಗೆ 11ಕ್ಕೆ
    ನಗರದ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ‘ಅಟಲ್ ವಿರಾಸತ್’ ಕಾರ್ಯಕ್ರಮ ನಡೆಯಲಿದೆ.
    ಈ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕರಾದ ಡಾ. ಎಂ. ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಶಾಸಕರುಗಳಾದ ಜಿ.ಎಚ್. ತಿಪ್ಪಾರೆಡ್ಡಿ, ನೇರ್ಲಗುಂಟೆ ತಿಪ್ಪೇಸ್ವಾಮಿ, ಎಸ್.ಕೆ. ಬಸವರಾಜನ್, ಮಂಡಲ ಅಧ್ಯಕ್ಷರು, ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಅಟಲ್ ವೃಕ್ಷ ಯೋಜನೆ

ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ 10 ಸಸಿಗಳನ್ನು ನೆಡುವ ‘ಅಟಲ್ ವೃಕ್ಷ ಯೋಜನೆ’ ಜಾರಿಗೊಳಿಸಲಾಗುತ್ತದೆ. ಈ ಸಸಿಗಳ ಉಸ್ತುವಾರಿಯನ್ನು ಶಾಲೆಯ 8ನೇ ತರಗತಿಯ ಮಕ್ಕಳಿಗೆ ವಹಿಸಲಾಗುವುದು. ಅವರು 10ನೇ ತರಗತಿಗೆ ಬರುವವರೆಗೆ ಸಸಿಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನು ಮಕ್ಕಳಿಗೆ ನೀಡಲಾಗುತ್ತದೆ.

ಅಟಲ್ ಸ್ಮೃತಿ ಸಮ್ಮೇಳನ

ಡಿ.25 ರಿಂದ 31ರವರೆಗೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಟಲ್ ಸ್ಮೃತಿ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತದೆ. ಬೂತ್ ಮಟ್ಟದಲ್ಲಿ ಅಟಲ್‌ಜಿಯವರ ಜೀವನ ಸಾಧನೆಗಳ ಕುರಿತು ಮಾಹಿತಿ ನೀಡಲಾಗುವುದಲ್ಲದೆ, ಅವರ ಜೀವನ ಕುರಿತ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಈ ವೇಳೆ ಜನ್ಮ ಶತಮಾನೋತ್ಸವದ ಸಹ ಸಂಚಾಲಕ ಮಲ್ಲಿಕಾರ್ಜನ್ ಮಾತನಾಡಿ, ಅಟಲ್ ಬಿಹಾರಿ ವಾಜಿಪೇಯಿ ಅವರು ಆಜಾತಶತ್ರುವಾಗಿದ್ದು, ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸರ್ವ ಶಿಕ್ಷಣ ಅಭಿಯಾನದ ಮೂಲಕ ಗ್ರಾಮಾಂತರ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡಿದರು. ಒಂದು ಮತದಿಂದ ಅಧಿಕಾರ ಕಳೆದುಕೊಂಡ ಸಂದರ್ಭದಲ್ಲೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಶಿಷ್ಟಾಚಾರದ ಮಾದರಿಯಾಗಿದ್ದರು ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಜನ್ಮ ಶತಮಾನೋತ್ಸವ ಸಂಚಾಲಕ ಸಂಪತ್ ಕುಮಾರ್, ಯುವ ಮೋರ್ಚಾ ಅಧ್ಯಕ್ಷ ಪಾಲಯ್ಯ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ ಉಪಸ್ಥಿತರಿದ್ದರು.

Views: 49

Leave a Reply

Your email address will not be published. Required fields are marked *