ಪ್ರತಿದಿನ ಕರಿಬೇವಿನ ನೀರು ಕುಡಿಯುವುದರಿಂದ ದೊರೆಯುವ ಆರೋಗ್ಯ ಲಾಭಗಳು

ಕರಿಬೇವು ಕೇವಲ ಅಡುಗೆಗೆ ರುಚಿ ಮತ್ತು ಸುವಾಸನೆ ನೀಡುವ ಸೊಪ್ಪಷ್ಟೇ ಅಲ್ಲ. ಇದು ವಿಟಮಿನ್‌ಗಳು, ಖನಿಜಗಳು ಮತ್ತು ಶಕ್ತಿಶಾಲಿ ಆಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಒಂದು ಔಷಧೀಯ ಸಸ್ಯವಾಗಿದೆ. ವಿಶೇಷವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವು ಕುದಿಸಿದ ನೀರನ್ನು ಸೇವಿಸುವುದರಿಂದ ದೇಹದ ಮೇಲೆ ಹಲವು ಉತ್ತಮ ಪರಿಣಾಮಗಳು ಬೀರುತ್ತವೆ.

ಕರಿಬೇವಿನ ನೀರು ಜೀರ್ಣಕಾರಿ ಕಿಣ್ವಗಳ ಸ್ರವಣವನ್ನು ಉತ್ತೇಜಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸಿ ಮಲಬದ್ಧತೆ, ಎದೆ ಉರಿ ಹಾಗೂ ಗ್ಯಾಸ್ ಸಮಸ್ಯೆಗಳು ಕಡಿಮೆಯಾಗುತ್ತವೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ನೀರು ಕುಡಿಯುವುದರಿಂದ ಆಹಾರ ಜೀರ್ಣವಾಗುವ ಪ್ರಕ್ರಿಯೆ ಸುಗಮವಾಗುತ್ತದೆ.

ಮಧುಮೇಹದಿಂದ ಬಳಲುವವರಿಗೆ ಕರಿಬೇವಿನ ನೀರು ಅತ್ಯಂತ ಉಪಯುಕ್ತವಾಗಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಯಮಿತ ಸೇವನೆಯಿಂದ ರಕ್ತದ ಸಕ್ಕರೆ ಮಟ್ಟವು ಸಮತೋಲನದಲ್ಲಿರಲು ಸಹಕಾರಿಯಾಗುತ್ತದೆ.

ಕರಿಬೇವಿನಲ್ಲಿರುವ ಕಾರ್ಬಜೋಲ್ ಆಲ್ಕಲಾಯ್ಡ್‌ಗಳು ಮತ್ತು ಆಯಂಟಿಆಕ್ಸಿಡೆಂಟ್‌ಗಳು ದೇಹದಲ್ಲಿ ಕೆಟ್ಟ ಎಲ್‌ಡಿಎಲ್ ಕೊಲೆಸ್ಟ್ರಾಲ್ ಶೇಖರಣೆಯನ್ನು ತಡೆಯುತ್ತವೆ. ಇದರಿಂದ ಹೃದಯದ ಆರೋಗ್ಯ ಉತ್ತಮವಾಗುತ್ತದೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಗುಣ ಕರಿಬೇವಿನ ನೀರಿಗೆ ಇದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ದೇಹದಲ್ಲಿ ಅನಾವಶ್ಯಕ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತದೆ. ಹೀಗಾಗಿ ತೂಕ ಇಳಿಕೆಗೆ ಸಹ ಇದು ಸಹಾಯಕವಾಗುತ್ತದೆ.

ಕರಿಬೇವಿನಲ್ಲಿ ಇರುವ ವಿಟಮಿನ್ ಎ, ಬಿ, ಸಿ ಮತ್ತು ಇ ಹಾಗೂ ಕಬ್ಬಿಣ, ಕ್ಯಾಲ್ಸಿಯಂನಂತಹ ಖನಿಜಗಳು ನೆತ್ತಿಯ ರಕ್ತ ಪರಿಚಲನೆ ಸುಧಾರಿಸುತ್ತವೆ. ಇದರ ಪರಿಣಾಮವಾಗಿ ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಕಡಿಮೆಯಾಗುತ್ತದೆ. ಕೂದಲು ದಪ್ಪ, ಬಲಿಷ್ಠ ಮತ್ತು ಹೊಳೆಯುವಂತೆ ಬೆಳೆಯಲು ಸಹಾಯವಾಗುತ್ತದೆ.

ಚರ್ಮದ ಆರೈಕೆಯಲ್ಲಿಯೂ ಕರಿಬೇವಿನ ನೀರು ಪ್ರಮುಖ ಪಾತ್ರವಹಿಸುತ್ತದೆ. ಮುಖದ ಕಪ್ಪು ಕಲೆಗಳು, ಪಿಗ್ಮೆಂಟೇಶನ್, ಒಣ ಚರ್ಮ ಮತ್ತು ಕಪ್ಪಾಗುವ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಕಾರಿ. ಆಯಂಟಿಆಕ್ಸಿಡೆಂಟ್‌ಗಳು ಚರ್ಮದ ಬಣ್ಣ ಮತ್ತು ವಿನ್ಯಾಸವನ್ನು ಸುಧಾರಿಸಿ ನೈಸರ್ಗಿಕ ಕಾಂತಿಯನ್ನು ನೀಡುತ್ತವೆ.

ಒಟ್ಟಾರೆ, ಕರಿಬೇವಿನ ನೀರು ದೇಹದ ಒಳಗಿನ ಆರೋಗ್ಯದಿಂದ ಹಿಡಿದು ಹೊರಗಿನ ಸೌಂದರ್ಯವರೆಗೂ ಬಹುಮುಖ ಪ್ರಯೋಜನಗಳನ್ನು ನೀಡುತ್ತದೆ. ಸುಲಭವಾಗಿ ದೊರೆಯುವ ಈ ನೈಸರ್ಗಿಕ ಪಾನೀಯವನ್ನು ದಿನಚರಿಯಲ್ಲಿ ಸೇರಿಸಿಕೊಂಡರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Views: 25

Leave a Reply

Your email address will not be published. Required fields are marked *