ಸಾವಿತ್ರಿಬಾಯಿ ಫುಲೆ ದಕ್ಷಿಣ ಭಾರತದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ: ಚಿತ್ರದುರ್ಗದ ಡಾ. ಬಿ. ಟಿ. ಲೋಲಾಕ್ಷಮ್ಮ ಅವರಿಗೆ ಗೌರವ

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ, ಜ. 5
ಆಂಧ್ರಪ್ರದೇಶದ ಗುರು ಚೈತನ್ಯ ಉಪಾಧ್ಯಾಯರ ಸಂಘದ ವತಿಯಿಂದ ವಿಜಯವಾಡದಲ್ಲಿ ಇತ್ತೀಚೆಗೆ ನಡೆದ ಭವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ಸಾವಿತ್ರಿಬಾಯಿ ಫುಲೆ ದಕ್ಷಿಣ ಭಾರತದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಚಿತ್ರದುರ್ಗ ತಾಲ್ಲೂಕಿನ ದಂಡಿನಕುರುಬರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕಿ ಡಾ. ಬಿ. ಟಿ. ಲೋಲಾಕ್ಷಮ್ಮ ಅವರಿಗೆ ಪ್ರದಾನ ಮಾಡಲಾಯಿತು. ಈ ಗೌರವದಿಂದ ಅವರು ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲದೆ ಕರ್ನಾಟಕ ರಾಜ್ಯಕ್ಕೂ ಕೀರ್ತಿ ತಂದಿದ್ದಾರೆ.


ಡಾ. ಲೋಲಾಕ್ಷಮ್ಮ ಅವರು ಚಿತ್ರದುರ್ಗ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಥಮ ಮಹಿಳಾ ಅಧ್ಯಕ್ಷೆ ಆಗಿ ಸೇವೆ ಸಲ್ಲಿಸಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯೆಯಾಗಿ ಶಿಕ್ಷಕರ ಹಿತಾಸಕ್ತಿಗಾಗಿ ಸದಾ ಧ್ವನಿ ಎತ್ತಿದ್ದಾರೆ. ಶಿಕ್ಷಕರ ಏಳಿಗೆಗಾಗಿ ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿ ನಿಂತು ಶ್ರಮಿಸಿರುವುದು ಅವರ ಪ್ರಮುಖ ಸಾಧನೆ.


ಸತತ 28 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕಿಯಾಗಿ ಹಾಗೂ ಮುಖ್ಯ ಶಿಕ್ಷಕಿಯಾಗಿ, ಜೊತೆಗೆ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ, ಪಠ್ಯಪುಸ್ತಕಗಳ ಪರಿಷ್ಕರಣ ಸಮಿತಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಕೇವಲ ಶಿಕ್ಷಕಿಯಷ್ಟೇ ಅಲ್ಲದೆ ಅವರು ಸಾಹಿತಿಯಾಗಿ, ಗಾಂಧಿ ತತ್ವಗಳ ಚಿಂತಕರಾಗಿ, ರಾಜ್ಯಮಟ್ಟದ ಕ್ರೀಡಾಪಟುವಾಗಿ ಹಾಗೂ ಜಾನಪದ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ರಾಜ್ಯಮಟ್ಟದ ವಿರಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿರುವುದು ಅವರ ಬಹುಮುಖ ಪ್ರತಿಭೆಯ ಮತ್ತೊಂದು ಉದಾಹರಣೆ.


ತಮ್ಮ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿರುವ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿ ಕಲ್ಯಾಣ ನಿಧಿ ಸ್ಥಾಪಿಸಿ ಪ್ರತಿವರ್ಷ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಹೆಣ್ಣು ಮಕ್ಕಳ ಹಿತಕ್ಕಾಗಿ ಓಬವ್ವ ಪಡೆ ಸ್ಥಾಪಿಸಿ, ನೊಂದವರ ಧ್ವನಿಯಾಗಿ ಸಮಸ್ಯೆ ಪರಿಹಾರಕ್ಕೆ ದಿಟ್ಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಲಾವಿಭಾಗದ ವಿದ್ಯಾರ್ಥಿನಿಯಾಗಿದ್ದರೂ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲೆಯ ಅಧ್ಯಕ್ಷೆಯಾಗಿ ವೈಜ್ಞಾನಿಕ ಮನೋಭಾವನೆ ಮೂಡಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಇವರು ರಾಜ್ಯಶಾಸ್ತ್ರದಲ್ಲಿ ಪಿಎಚ್.ಡಿ ಪಡೆದು ಡಾಕ್ಟರೇಟ್ ಹುದ್ದೆಯನ್ನು ಗಳಿಸಿ ಶಿಕ್ಷಕರಿಗೆ ಆದರ್ಶವಾಗಿದ್ದಾರೆ.


ಶಿಕ್ಷಣ, ಸಮಾಜಸೇವೆ, ಸಂಘಟನೆ, ಸಂಶೋಧನೆ ಮತ್ತು ಸಂಸ್ಕೃತಿಯ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆದರ್ಶ ಶಿಕ್ಷಕಿಯಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಆಂಧ್ರಪ್ರದೇಶದ ಗುರು ಚೈತನ್ಯ ಉಪಾಧ್ಯಾಯರ ಸಂಘವು ಡಾ. ಬಿ. ಟಿ. ಲೋಲಾಕ್ಷಮ್ಮ ಅವರಿಗೆ ಸಾವಿತ್ರಿಬಾಯಿ ಫುಲೆ ದಕ್ಷಿಣ ಭಾರತದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದೆ.

Views: 37

Leave a Reply

Your email address will not be published. Required fields are marked *