98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಭಾರತೀಯ ಚಿತ್ರರಂಗದ ಕೆಲ ಮಹತ್ವದ ಚಿತ್ರಗಳು ಆಸ್ಕರ್ ರೇಸ್ನಲ್ಲಿ ಸ್ಥಾನ ಪಡೆದಿವೆ. ಈ ಪೈಕಿ ಕನ್ನಡ ಚಿತ್ರರಂಗದ ಹೆಮ್ಮೆ ಎನ್ನಬಹುದಾದ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ‘ಕಾಂತಾರ: ಚಾಪ್ಟರ್ 1’ ಚಿತ್ರವೂ ಅಧಿಕೃತವಾಗಿ ಆಸ್ಕರ್ ಸ್ಪರ್ಧೆಗೆ ಕಾಲಿಟ್ಟಿದೆ.
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (AMPAS) ಪ್ರಕಟಿಸಿದಂತೆ, ಅತ್ಯುತ್ತಮ ಚಿತ್ರ (Best Picture) ವಿಭಾಗಕ್ಕೆ ಅರ್ಹತೆ ಪಡೆದ 201 ಸಿನಿಮಾಗಳ ಜನರಲ್ ಎಂಟ್ರಿ ಲಿಸ್ಟ್ ಬಿಡುಗಡೆಯಾಗಿದ್ದು, ಅದರಲ್ಲಿ ‘ಕಾಂತಾರ: ಚಾಪ್ಟರ್ 1’ ಸ್ಥಾನ ಪಡೆದಿರುವುದು ಕನ್ನಡ ಸಿನಿಪ್ರೇಮಿಗಳಿಗೆ ಖುಷಿಯ ವಿಚಾರವಾಗಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಡಿ ನಿರ್ಮಾಣವಾದ ಈ ಚಿತ್ರವು, ಈಗಾಗಲೇ ದೇಶ-ವಿದೇಶಗಳಲ್ಲಿ ತನ್ನ ಸಾಂಸ್ಕೃತಿಕ ಹಿನ್ನೆಲೆ, ಕಥಾವಸ್ತು ಮತ್ತು ದೃಶ್ಯ ವೈಭವದಿಂದ ದೊಡ್ಡ ಮಟ್ಟದ ಮೆಚ್ಚುಗೆ ಪಡೆದಿದೆ. ರಿಷಬ್ ಶೆಟ್ಟಿ ಅವರ ಶಕ್ತಿಯುತ ಅಭಿನಯ ಹಾಗೂ ನಿರ್ದೇಶನ ಚಿತ್ರಕ್ಕೆ ಹೊಸ ಆಯಾಮ ನೀಡಿದೆ.
ಇದೇ ಪಟ್ಟಿಯಲ್ಲಿ ಹೊಂಬಾಳೆ ಫಿಲ್ಮ್ಸ್ನ ಮತ್ತೊಂದು ಸಿನಿಮಾ ‘ಮಹಾವತಾರ್ ನರಸಿಂಹ’ ಕೂಡಾ ಸ್ಥಾನ ಪಡೆದಿದ್ದು, ಈ ವರ್ಷದ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್ನಲ್ಲಿ ಕಾಣಿಸಿಕೊಂಡ 5 ಭಾರತೀಯ ಸಿನಿಮಾಗಳಲ್ಲಿ 2 ಹೊಂಬಾಳೆ ಫಿಲ್ಮ್ಸ್ ನಿರ್ಮಾಣಗಳು ಎನ್ನುವುದು ವಿಶೇಷ ಸಂಗತಿ.
ಆಸ್ಕರ್ ಪ್ರಶಸ್ತಿಯ ಅಂತಿಮ ನಾಮಿನೇಷನ್ ಪಟ್ಟಿ ಜನವರಿ 22 ರಂದು ಪ್ರಕಟವಾಗಲಿದ್ದು, ಮಾರ್ಚ್ 15 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ‘ಕಾಂತಾರ: ಚಾಪ್ಟರ್ 1’ ಅಂತಿಮ ನಾಮಿನೇಷನ್ ಪಟ್ಟಿಗೂ ಆಯ್ಕೆಯಾದರೆ, ಅದು ಕನ್ನಡ ಹಾಗೂ ಭಾರತೀಯ ಚಿತ್ರರಂಗಕ್ಕೆ ಐತಿಹಾಸಿಕ ಸಾಧನೆಯಾಗಲಿದೆ.
ಇದುವರೆಗೆ ಭಾರತೀಯ ಸಿನಿಮಾಗಳು ಫೀಚರ್ ಫಿಲ್ಮ್ ವಿಭಾಗದಲ್ಲಿ ಆಸ್ಕರ್ ಗೆಲ್ಲದಿದ್ದರೂ, ‘ನಾಟು ನಾಟು’ ಹಾಡು ಮೂಲಕ ‘ಆರ್ಆರ್ಆರ್’ ಹೊಸ ಇತಿಹಾಸ ಬರೆದಿತ್ತು. ಇದೀಗ ‘ಕಾಂತಾರ: ಚಾಪ್ಟರ್ 1’ ಹಾಲಿವುಡ್ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸಿನ ಹತ್ತಿರಕ್ಕೆ ಬಂದಿರುವುದು ಸಿನಿರಸಿಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
Views: 27