“ಗಾಂಧಿ ಹೆಸರಿನಲ್ಲಿ ರಾಜಕೀಯ ಮಾಡುವವರು ನಕಲಿ ಗಾಂಧಿಗಳು” – ಗೋವಿಂದ ಕಾರಜೋಳ ಕಿಡಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಜ.11

ಮಹಾತ್ಮ ಗಾಂಧಿಯ ಹೆಸರಿನಲ್ಲಿ ಇಂದು ಕಾಣಿಸಿಕೊಳ್ಳುತ್ತಿರುವವರು ಎಲ್ಲರೂ ನಕಲಿ ಗಾಂಧಿಗಳು. ಇವರಿಗೆ ಮಹಾತ್ಮ ಗಾಂಧಿಯವರೊಂದಿಗೆ ಯಾವುದೇ ಸಂಬಂಧವೇ ಇಲ್ಲ. ಗಾಂಧೀಜಿಯವರ ಹೆಸರನ್ನು ಉಳಿಸಲು ಅಲ್ಲ, ಅಳಿಸಲು ಇವರು ಮುಂದಾಗಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ ತೀವ್ರ ವಾಗ್ದಾಳಿ ನಡೆಸಿದರು.

ನಗರದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದ ಬಳಿಕ ಸ್ವರಾಜ್ಯ ಹಾಗೂ ಗ್ರಾಮಾಭಿವೃದ್ಧಿಯ ಕನಸು ಕಂಡಿದ್ದರು. ಆ ಕನಸನ್ನು ಸಾಕಾರಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ. ಆದರೆ ಇದನ್ನು ಸಹಿಸದ ಕಾಂಗ್ರೆಸ್ ಪಕ್ಷ ವಿನಾಕಾರಣ ಮೋದಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.

ಗಾಂಧಿ ಹೆಸರಿನಲ್ಲಿ ರಾಜಕೀಯ – ಕಾಂಗ್ರೆಸ್ ವಿರುದ್ಧ ಆರೋಪ

ಇಂದಿನ ಕಾಂಗ್ರೆಸ್‌ನಲ್ಲಿ ಇರುವ ಗಾಂಧಿಗಳು ಯಾರೂ ಮಹಾತ್ಮ ಗಾಂಧೀಜಿಯವರ ವಂಶಸ್ಥರಲ್ಲ. ಗಾಂಧೀಜಿಯವರ ಹೆಸರನ್ನು ಬಳಸಿ ರಾಜಕೀಯ ಮಾಡಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಿದ್ದಾರೆ. ಇಂದಿರಾಗಾಂಧಿ, ರಾಜೀವ್ ಗಾಂಧಿ ಹೆಸರಿನಲ್ಲಿ ಹಲವು ಯೋಜನೆಗಳನ್ನು ಸ್ಥಾಪಿಸಿದ್ದಾರೆ. ಆದರೆ ಅವುಗಳಲ್ಲಿ ಮಹಾತ್ಮ ಗಾಂಧೀಜಿಯವರ ಸ್ಮರಣೆ ಎಲ್ಲೂ ಕಾಣುವುದಿಲ್ಲ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಹೊಸ ಯೋಜನೆಗಳು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಏಕೆಂದರೆ ಕೇಂದ್ರ ಸರ್ಕಾರದಿಂದ ಹಣ ಪಡೆದ ಬಳಿಕ ಅದರ ಬಳಕೆಯ ಸಂಪೂರ್ಣ ಲೆಕ್ಕವನ್ನು ಸಲ್ಲಿಸಬೇಕಾಗುತ್ತದೆ. ಆದರೆ ಈವರೆಗೆ ಲೆಕ್ಕ ನೀಡದೇ ನಕಲಿ ಬಿಲ್ಲುಗಳ ಮೂಲಕ ಹಣ ಲೂಟಿ ಮಾಡಲಾಗಿದೆ. ಇದರಿಂದ ಗ್ರಾಮಗಳಿಗೂ ಜನತೆಗೋ ಯಾವುದೇ ಲಾಭವಾಗಿಲ್ಲ ಎಂದು ಹೇಳಿದರು.

ಡಿಜಿಟಲೀಕರಣದಿಂದ ಲೂಟಿಗೆ ಬ್ರೇಕ್

ಯುಪಿಎ ಸರ್ಕಾರದ ಅವಧಿಯಲ್ಲಿ ಈ ಯೋಜನೆ ಹೆಸರಿನಲ್ಲಿ ಭಾರೀ ಹಣ ಲೂಟಿ ಆಗಿದೆ. ಆದರೆ ಈಗ ಗ್ರಾಮಸಭೆಗಳನ್ನು ಕಡ್ಡಾಯಗೊಳಿಸಲಾಗಿದ್ದು, ಪ್ರತಿಯೊಂದು ಹಂತದಲ್ಲೂ ಡಿಜಿಟಲೀಕರಣ ಮಾಡಲಾಗುತ್ತಿದೆ. ಇದರಿಂದ ನಕಲಿ ಬಿಲ್ಲುಗಳು ಹಾಗೂ ಹಣ ಲಪಟಾಯಿಸಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಕಾರಜೋಳ ಹೇಳಿದರು.

ಕೂಲಿ ದಿನಗಳು ಮತ್ತು ವೇತನ ಹೆಚ್ಚಳ

ಈ ಹಿಂದೆ 100 ದಿನಗಳಾಗಿದ್ದ ಕೂಲಿ ಕೆಲಸವನ್ನು ಈಗ 125 ದಿನಗಳಿಗೆ ಹೆಚ್ಚಿಸಲಾಗಿದೆ. ಕೂಲಿ ಮೊತ್ತವನ್ನೂ ಹೆಚ್ಚಿಸಲಾಗಿದೆ. ಕೂಲಿ ಕೆಲಸ ಮಾಡಿದವರಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ವಾರದ ಅಂತ್ಯದಲ್ಲಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ. ಒಂದು ಕಾಮಗಾರಿ ಆರಂಭವಾದರೆ ಅದು ಪೂರ್ಣಗೊಳ್ಳುವವರೆಗೆ ನಿಲ್ಲುವುದಿಲ್ಲ. ಈ ವಿಷಯವನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸಲಾಗುತ್ತದೆ ಎಂದರು.

ಸಾಬರಮತಿ ಆಶ್ರಮ ಅಭಿವೃದ್ಧಿಗೆ ಮೋದಿ ಕೊಡುಗೆ

ಯುಪಿಎ ಸರ್ಕಾರದ ಅವಧಿಯಲ್ಲಿ ಸಾಬರಮತಿ ಆಶ್ರಮಕ್ಕೆ ಸಂಬಂಧಿಸಿದ ಕಾರ್ಪೊರೇಷನ್ ಸ್ಥಾಪಿಸಲಾದರೂ ಮೂಲಭೂತ ಸೌಕರ್ಯಗಳು ಹಾಗೂ ಅನುದಾನ ನೀಡಲಾಗಿರಲಿಲ್ಲ. ಆದರೆ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಆಶ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಅದನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಿದರು. ಪಕ್ಕದ ನದಿಯನ್ನು ಸ್ವಚ್ಛಗೊಳಿಸಿ ವರ್ಷಪೂರ್ತಿ ನೀರು ಹರಿಯುವಂತೆ ಮಾಡಿದರು ಎಂದು ಹೇಳಿದರು.

ಮೋದಿಯ ಹೆಸರಿನಲ್ಲಿ ಯಾವುದೇ ಯೋಜನೆ ಇಲ್ಲ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹೆಸರನ್ನು ಯಾವುದೇ ಯೋಜನೆ ಅಥವಾ ಸಂಸ್ಥೆಗೆ ಇಟ್ಟಿಲ್ಲ. ಎಲ್ಲವೂ ಸರ್ಕಾರದ ಹೆಸರಲ್ಲೇ ನಡೆಯುತ್ತಿದೆ. ವಿಕಸಿತ ಭಾರತ ಉದ್ಯೋಗ ಖಾತರಿ ಹಾಗೂ ಜೀವನೋಪಾಯ ಮಿಷನ್ ಅಡಿಯಲ್ಲಿ ಜಾರಿಗೆ ಬಂದಿರುವ ‘ವಿಬಿ-ಜಿ ರಾಮ್ ಜಿ’ ಯೋಜನೆ ನರೇಗಾದಿಗಿಂತ ಉತ್ತಮವಾಗಿದೆ. ನರೇಗಾ ವ್ಯವಸ್ಥಿತ ಲೂಟಿಯ ಯೋಜನೆಯಾಗಿತ್ತು ಎಂದು ಟೀಕಿಸಿದರು.

ವಿಮಾನ ನಿಲ್ದಾಣಗಳು, ಬಂದರುಗಳಿಗೆ ಇಂದಿರಾ, ರಾಜೀವ್, ರಾಹುಲ್ ಗಾಂಧಿ ಹೆಸರಿಟ್ಟಿರುವ ಕಾಂಗ್ರೆಸ್ ಪಕ್ಷಕ್ಕೆ ಮಹಾತ್ಮ ಗಾಂಧಿಯ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಎಂದು ಕಾರಜೋಳ ಪ್ರಶ್ನಿಸಿದರು.

ಗೋಷ್ಟಿಯಲ್ಲಿ ಭಾಗವಹಿಸಿದವರು

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಸುರೇಶ್ ಸಿದ್ದಾಪುರ, ಖಜಾಂಚಿ ಮಾಧುರಿ ಗೀರಿಶ್, ಮಾಜಿ ಅಧ್ಯಕ್ಷ ಎ. ಮೂರಳಿ, ಮುಖಂಡ ಅನಿತ್ ಕುಮಾರ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ನಗರಾಧ್ಯಕ್ಷ ಲೋಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Views: 11

Leave a Reply

Your email address will not be published. Required fields are marked *