ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 15
ಮಧ್ಯ ಕರ್ನಾಟಕದ ಬಯಲು ಸೀಮೆ ರೈತಾಪಿ ಸಮುದಾಯದ ಜೀವನಾಡಿಯಾಗಿರುವ ಭದ್ರಾ ಜಲಾಶಯವನ್ನು ವಿಶ್ವೇಶ್ವರಯ್ಯ ಜಲ ನಿಗಮದ ವ್ಯಾಪ್ತಿಗೆ ಒಳಪಡಿಸುವ ತನ್ನ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬಾರದೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹಿಸಿದೆ.
ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಹಾಲಿ ಭದ್ರಾ ಜಲಾಶಯ ಕರ್ನಾಟಕ ನೀರಾವರಿ ನಿಗಮದ ಅಡಿಯಲ್ಲಿದೆ. ಭದ್ರಾ ಮೇಲ್ದಂಡ ಕಾಮಗಾರಿಗಳು ವಿಶ್ವೇಶ್ವರಯ್ಯ ನೀರಾವರಿ ನಿಗಮದಿಂದ ನಿರ್ವಹಣೆಗೆ ಒಳಪಟ್ಟಿದ್ದು ಭವಿಷ್ಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಪಡೆಯಬೇಕಾದರೆ ಎರಡು ನಿಗಮಗಳ ನಡುವೆ ಸಂಘರ್ಷ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ ಎಂದರು. ಎರಡೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ(ಎಂಡಿಗಳು) ನಡುವೆ ಒಮ್ಮತ ಈಡೇರದೇ ಇರುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಭದ್ರಾ ಜಲಾಶಯವ ವಿಶ್ವೇಶ್ವರಯ್ಯ ಜಲ ನಿಗಮದ ವ್ಯಾಪ್ತಿಗೆ ಒಳಪಡಿಸಿ ಒಬ್ಬರೇ ವ್ಯವಸ್ಥಾಪಕ ನಿರ್ದೇಶಕರ ನಿರ್ವಹಣೆ ಮಾಡುವ ರೀತಿಯಲ್ಲಿ ಇದ್ದರೆ ಸಮಸ್ಯೆ ಸೃಷ್ಟಿಯಾಗುವುದಿಲ್ಲ ಎಂದರು.
ಈ ಸಂಬಂಧ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ವಿಜೆಎನ ಎಲ್ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಅವರಿಗೆ ಮನವಿ ಮಾಡಿಕೊಂಡಿತ್ತು. ಭದ್ರಾ ಜಲಾಶಯದ ಕಾಡ (ಸಿಎಡಿಎ) ಸಮಿತಿಯಲ್ಲಿ ಚಿತ್ರದುರ್ಗ ಜಿಲ್ಲೆಗೂ ಸೂಕ್ತ ಸ್ಥಾನಮಾನ ಬೇಕು ಎಂಬ ಬೇಡಿಕೆ ಮಂಡಿಸಿತ್ತು.ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಭದ್ರಾ ಜಲಾಶಯನ ಕರ್ನಾಟಕ ನೀರಾವರಿ ನಿಗಮ ವ್ಯಾಪ್ತಿಯಿಂದ ಹೊರ ತೆಗೆದು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸೇರ್ಪಡಿಸುವ ತೀರ್ಮಾನ ಕೈಗೊಂಡು ಆ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದರು. ಈ ಸುಳಿವು ಅರಿತ ದಾವಣಗೆರೆ ಜಿಲ್ಲೆಯ ಕ್ಯಾತೆ ಶೂರ ರೇಣುಕಾಚಾರ್ಯ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿ ಯಾವುದೇ ಕಾರಣದಿಂದ ಕರ್ನಾಟಕ ನೀರಾವರಿ ನಿಗಮದಿಂದ ವಿಜೆಎನ್‍ಎಲ್‍ಗೆ ಭದ್ರಾ ಜಲಾಶಯವ ಶಿಫ್ಟ್ ಮಾಡಲು ಅವಕಾಶ ಕೊಡುವುದಿಲ್ಲವೆಂದು ಹೇಳಿಕೆ ನೀಡಿ ಉಭಯ ಜಿಲ್ಲೆಯ ರೈತರ ನಡುವೆ ಸಂರ್ಘ ಸೃಷ್ಟಿ ಮಾಡಲು ಮುಂದಾಗಿದ್ದಾರೆ. ರೇಣುಕಾಚಾರ್ಯರ ಈ ನಡೆಯನ್ನು ನೀರಾವರಿ ಅನ್ನ ಹೋರಾಟ ಸಮಿತಿ ಉಗ್ರವಾಗಿ ಖಂಡಿಸುತ್ತದೆ.
ಭದ್ರಾ ಮೇಲ್ದಂಡೆ ಯೋಜನೆಯಡಿ ತುಂಗಾ ಜಲಾಶಯದಿಂದ 17.4 ಟಿಎಂಸಿ ಹಾಗೂ ಭದ್ರಾ ಜಲಾಶಯದಿಂದ 12.5 ಟಿಎಂಸಿ ಸೇರಿ ಒಟ್ಟು 29.9 ಟಿಎಂಸಿಯ ನೀರನ್ನು ಹಂಚಿಕೆ ಮಾಡಲಾಗಿದೆ. ತುಂಗಾ ಜಲಾಶಯದಿಂದ ನೀರು ಲಿಪ್ಟ್ ಮಾಡಿ ಭದ್ರಾ ಜಲಾಶಯಕ್ಕೆ ಹಾಕಿಕೊಂಡು ನಂತರ ಕಾಲುವೆಗೆ ಹರಿಸಲಾಗುತ್ತದೆ. ಹಾಗಾಗಿ ಭದ್ರಾ ಜಲಾಶಯದ ಮೇಲೆ ಹೆಚ್ಚು ಅವಲಂಬನೆ ಇದೆ. ಜಲಾಶಯವ ಒಂದೇ ನಿಗಮ ನಿರ್ವಹಣೆ ಮಾಡಿದ್ದಲ್ಲಿ ತೊಂದರೆ ಆಗುವುದಿಲ್ಲ. ಚಿತ್ರದುರ್ಗ, ಚಿಕ್ಕಮಗಳೂರು, ಜಗಳೂರು, ತುಮಕೂರು ಜಿಲ್ಲೆಯ ರೈತರು ಯಾವುದೇ ಸಂರ್ಘಕ್ಕೆ ಇಳಿಯದೇ ಭದ್ರಾ ಜಲಾಶಯದಿಂದ ನೀರು ಪಡೆಯಬಹುದಾಗಿದೆ.
ರಾಜ್ಯ ಸರ್ಕಾರ ಭದ್ರಾ ಜಲಾಶಯವ ನೀರಾವರಿ ನಿಗಮದ ವ್ಯಾಪ್ತಿಯಿಂದ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸೇರಿಸುವ ತನ್ನ ನಿಲುವಿನಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ಹಾಗೊಂದು ವೇಳೆ ಒತ್ತಡಕ್ಕೆ ಮಣಿದು ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಉಳಿಸಿದರೆ ಮಧ್ಯ ಕರ್ನಾಟಕದ ರೈತರ ಆಕ್ರೋಶ ಎದುರಿಸಬೇಕಾಗುತ್ತದೆ, ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಸಮಿತಿ ಎಚ್ಚರಿಸುತ್ತದೆ. ದೈನೇಸಿ ಸ್ಥಿತಿ ಬಿಡಿ, ಹಕ್ಕು ಮಂಡಿಸಿ: ಭದ್ರಾ ಮೇಲ್ದಂಡೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು ಯೋಜನೆ ವ್ಯಾಪ್ತಿಯ ಜನ ಪ್ರತಿನಿಧಿಗಳು ಅನುದಾನಕ್ಕಾಗಿ ರಾಜ್ಯ ಸರ್ಕಾರದ ಮುಂದೆ ದೈನೇಸಿಯಾಗಿ ಕೈ ಕಟ್ಟಿ ನಿಲ್ಲದೆ ಹಕ್ಕೊತ್ತಾಯ ಮಂಡಿಸುವಂತೆ ನೀರಾವರಿ ಹೋರಾಟ ಸಮಿತಿ ಆಗ್ರಹಿಸುತ್ತದೆ. ಕಳೆದ ವಾರ ಸಚಿವ ಡಿ.ಸುಧಾಕರ್ ನೇತೃತ್ವದಲ್ಲಿ ಜಿಲ್ಲೆಯ ಶಾಸಕರುಗಳು ಕಾಮಗಾರಿ ಪರಿಶೀಲನೆ ನಡೆಸಿದ್ದು ವಾರದೊಳಗೆ ಸಿಎಂ, ಡಿಸಿಎಂ ಭೇಟಿ ಮಾಡಿ 200 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಫೆಬ್ರವರಿ ಅಂತ್ಯದ ಒಳಗೆ ಗೋನೂರು ಕೆರೆ ವರೆಗೆ ಪರೀಕ್ಷಾರ್ಥ(ಟ್ರಯಲ್) ನೀರು ಹರಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಸಿಎಂ ಹಾಗೂ ಡಿಸಿಎಂ ಭೇಟಿ ಮಾಡುವ ನಿಟ್ಟಿನಲ್ಲಿ ಸಚಿವ, ಶಾಸಕರು ಪ್ರಯತ್ನ ನಡೆಸಿಲ್ಲ. ಜಿಲ್ಲೆಯ ಜನ ಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯ ದುರ್ಬಲ ಮನಸ್ಥಿತಿಯನ್ನು ನೀರಾವರಿ ಹೋರಾಟ ಸಮಿತಿ ಖಂಡಿಸುತ್ತದೆ. ರಾಜ್ಯ ಸರ್ಕಾರವ ಬೇಡಿಕೊಳ್ಳುವ ಪರಿಸ್ಥಿತಿಯಿಂದ ಹೊರ ಬಂದು ಹಕ್ಕೊತ್ತಾಯ ಮಂಡಿಸುವಂತೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ರೈತ ಮುಖಂಡರಾದ ಬಸ್ತಿಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ಷಣ್ಮುಖ, ಧನಂಜಯ ಹಂಪನಮಾಳಿಗೆ, ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇದ್ದರು.
Views: 31