ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಆಯುಷ್ ಇಲಾಖೆ ವತಿಯಿಂದ ‘ವಿದ್ಯಾರ್ಥಿ ಚೇತನ’ ಕಾರ್ಯಕ್ರಮ ಉದ್ಘಾಟನೆ.

ಚಿತ್ರದುರ್ಗ, ಜ. 16:
ಆಯುಷ್ ಇಲಾಖೆ ವತಿಯಿಂದ ದಿನಾಂಕ 16-01-2026ರಂದು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, ಜವನಗೊಂಡನಹಳ್ಳಿ ಇಲ್ಲಿ ವಿದ್ಯಾರ್ಥಿ ಚೇತನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಾಯಿತು. ಈ ಕಾರ್ಯಕ್ರಮವು ಎಸ್‌ಸಿಎಸ್‌ಪಿ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿದ್ದು, ವಸತಿ ಶಾಲೆಯ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯನ್ನು ಉದ್ದೇಶಿಸಿಕೊಂಡ ಒಂದು ವಿಶಿಷ್ಟ ಯೋಜನೆಯಾಗಿದೆ.

ಈ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ಮಾನಸಿಕ ದೃಢತೆಗೆ ಅಗತ್ಯವಾದ ಯೋಗ, ಧ್ಯಾನ, ಪ್ರಾಣಾಯಾಮ, ನೆನಪಿನ ಶಕ್ತಿ ಹೆಚ್ಚಿಸುವ ಔಷಧಿಗಳ ವಿತರಣೆ ಹಾಗೂ ಸಮಗ್ರ ಆರೋಗ್ಯ ಕಾಳಜಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಾದ ಮಹಾಲಕ್ಷ್ಮಿ ಮತ್ತು ಲಿಖಿತ ಅವರು ಪ್ರಾರ್ಥನೆ ಸಲ್ಲಿಸಿದರು. ನಂತರ ಗಿಡಕ್ಕೆ ನೀರರೆಯುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಚಂದ್ರಕಾಂತ್ ನಾಗಸಮುದ್ರ ಅವರು ಉದ್ಘಾಟಿಸಿದರು.

ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಡಾ. ಚಂದ್ರಕಾಂತ್ ನಾಗಸಮುದ್ರ ಅವರು, “ವಿದ್ಯಾರ್ಥಿಗಳ ಶಾರೀರಿಕ ಹಾಗೂ ಮಾನಸಿಕ ದೃಢತೆ ಪರೀಕ್ಷಾ ಸಮಯದಲ್ಲಿ ಅತ್ಯಂತ ಅಗತ್ಯವಾಗಿದ್ದು, ಈ ದೃಢತೆಯನ್ನು ಹೆಚ್ಚಿಸಲು ‘ವಿದ್ಯಾರ್ಥಿ ಚೇತನ’ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ನಾಲ್ಕು ತಿಂಗಳುಗಳ ಕಾಲ ನಿಯಮಿತವಾಗಿ ಆಯುಷ್ ವೈದ್ಯಾಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ, ಆರೋಗ್ಯ ವರ್ಧಕ ಔಷಧಿಗಳು, ಯೋಗ, ಧ್ಯಾನ ಕುರಿತು ಮಾಹಿತಿ ನೀಡಲಿದ್ದಾರೆ. ಈ ಕಾರ್ಯಕ್ರಮದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಉತ್ತಮ ಶೈಕ್ಷಣಿಕ ಸಾಧನೆಯನ್ನು ತೋರಬೇಕು” ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಮನೆಮದ್ದುಗಳು ಹಾಗೂ ಆರೋಗ್ಯಕರ ಆಹಾರಗಳ ಮಾಹಿತಿ ಹೊಂದಿರುವ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಲಲಿತಮ್ಮ, ಉಪಪ್ರಾಂಶುಪಾಲರಾದ ಶ್ರೀಮತಿ ತನುಜ, ನಿಲಯ ಪಾಲಕರಾದ ಶ್ರೀ ಕೃಷ್ಣಮೂರ್ತಿ, ದೈಹಿಕ ಶಿಕ್ಷಣ ಶಿಕ್ಷಕರಾದ ವಿಜಯಕುಮಾರ್ ಅವರು ಉಪಸ್ಥಿತರಿದ್ದರು.

ಹಿರಿಯೂರು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಡಾ. ಶಿವಕುಮಾರ್ ಟಿ ಅವರು ಕಾರ್ಯಕ್ರಮದ ವಿವರಣೆ ನೀಡಿದರು. ಸರ್ಕಾರಿ ಆಯುಧ ಚಿಕಿತ್ಸಾಲಯ ಹುಲಿಕುಂಟೆಯ ವೈದ್ಯಾಧಿಕಾರಿಗಳಾದ ರಘುವೀರ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳಿಗೆ ಶಾರೀರಿಕ ತಂಪನ್ನು ಹೆಚ್ಚಿಸುವ ‘ಖರ್ಜೂರಾದಿ ಮಂಥ’ ಎಂಬ ಆರೋಗ್ಯಕರ ಆಯುರ್ವೇದ ಪೇಯವನ್ನು ವಿತರಿಸಲಾಯಿತು.

Views: 59

Leave a Reply

Your email address will not be published. Required fields are marked *