ಭೀಮಣ್ಣ ಖಂಡ್ರೆ ನಿಧನ: ಮಾಜಿ ಸಚಿವ, ಶತಾಯುಷಿ ಹಿರಿಯ ರಾಜಕಾರಣಿಗೆ ಬೀದರ್‌ನಲ್ಲಿ ಅಂತಿಮ ವಿದಾಯ

ಜನವರಿ 17:
ಮಾಜಿ ಸಚಿವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಭೀಮಣ್ಣ ಖಂಡ್ರೆ (102) ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಬೀದರ್‌ನ ಸ್ವಗೃಹದಲ್ಲಿ ನಿಧನರಾದರು. ದೀರ್ಘಕಾಲದಿಂದ ವಯೋ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ಮಲ್ಸಿ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಅವರನ್ನು ಮನೆಗೆ ಕರೆತಂದು ಆರೈಕೆ ಮಾಡಲಾಗುತ್ತಿತ್ತು. ಶುಕ್ರವಾರ ರಾತ್ರಿ ಆರೋಗ್ಯ ಮತ್ತಷ್ಟು ಕ್ಷೀಣಿಸಿ ಕೊನೆಯುಸಿರೆಳೆದಿದ್ದಾರೆ.

ಅವರು ಪುತ್ರ, ರಾಜ್ಯ ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ನಿಧನದಿಂದ ಉತ್ತರ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಶೂನ್ಯ ಉಂಟಾಗಿದೆ.

ಇಂದೇ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ

ಭೀಮಣ್ಣ ಖಂಡ್ರೆ ಅವರ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆ ಇಂದೇ ಭಾಲ್ಕಿಯಲ್ಲಿ ನಡೆಯಲಿದೆ. ಭಾಲ್ಕಿಯ ಗಾಂಧಿ ಗಂಜ್‌ನಲ್ಲಿರುವ ಅವರ ಸ್ವಗೃಹದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಂತಾಪ

ಭೀಮಣ್ಣ ಖಂಡ್ರೆ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಎಕ್ಸ್ (ಟ್ವಿಟರ್)ನಲ್ಲಿ ಸಂದೇಶ ಪ್ರಕಟಿಸಿರುವ ಅವರು,
“ಮಾಜಿ ಸಚಿವರು, ನಾಡಿನ ಹಿರಿಯ ರಾಜಕಾರಣಿಗಳಾದ ಭೀಮಣ್ಣ ಖಂಡ್ರೆಯವರ ನಿಧನದಿಂದ ದುಃಖಿತನಾಗಿದ್ದೇನೆ. ಶರಣ ಚಿಂತನೆಗಳ ನೆರಳಂತೆ ಬಾಳಿದ ಧೀಮಂತ ನಾಯಕನ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ” ಎಂದು ಹೇಳಿದ್ದಾರೆ.

ಭೀಮಣ್ಣ ಖಂಡ್ರೆ ನಡೆದುಬಂದ ಜೀವನ ಪಯಣ

ಡಾ. ಭೀಮಣ್ಣ ಖಂಡ್ರೆ ಅವರು 1927ರ ಜನವರಿ 8ರಂದು ಶಿವಲಿಂಗಪ್ಪ ಖಂಡ್ರೆ ಹಾಗೂ ಪಾರ್ವತಿ ದಂಪತಿಯ ಪುತ್ರನಾಗಿ ಜನಿಸಿದರು. ಭಾಲ್ಕಿ ಹಿರೇಮಠದಲ್ಲಿ ಕನ್ನಡ ಶಿಕ್ಷಣ ಪಡೆದು ಶರಣತತ್ವದ ದೀಕ್ಷೆ ಪಡೆದರು. ಭಾಲ್ಕಿಯಲ್ಲಿ ಪ್ರಾಥಮಿಕ ಶಿಕ್ಷಣ, ಬೀದರ್‌ನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು.

ಮುನ್‌ಪಿ–ಫಾಜಲ್ ಪರೀಕ್ಷೆಯಲ್ಲಿ ಇಡೀ ಹೈದರಾಬಾದ್ ಪ್ರಾಂತ್ಯದಲ್ಲೇ ಪ್ರಥಮ ಸ್ಥಾನ ಪಡೆದು ಗಮನ ಸೆಳೆದರು. ನಂತರ ಹೈದರಾಬಾದ್‌ನ ಉಸ್ಮಾನಿಯಾ ಕಾಲೇಜಿನಲ್ಲಿ ವಕಾಲತ್ತು ಅಧ್ಯಯನ ಪೂರ್ಣಗೊಳಿಸಿದರು. ಕನ್ನಡದ ಜೊತೆಗೆ ಉರ್ದು, ಪಾರಸಿ, ಮರಾಠಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದರು.

ರಾಜಕೀಯ ಪಯಣ

1949–50ರಲ್ಲಿ ಪ್ರಜಾ ಸಮಾಜವಾದಿ ಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿದ ಅವರು,
1953ರಲ್ಲಿ ಭಾಲ್ಕಿ ಪುರಸಭೆಯ ಮೊದಲ ಚುನಾಯಿತ ಅಧ್ಯಕ್ಷರಾಗಿದರು.

ಭಾಲ್ಕಿ ಕ್ಷೇತ್ರದಿಂದ

  • 1962
  • 1967
  • 1978
  • 1983

ರಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದರು. 1988ರಿಂದ 1994ರವರೆಗೆ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು.

ಸಚಿವರಾಗಿ ಸೇವೆ

ಎಂ. ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 1992ರಿಂದ 1994ರವರೆಗೆ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದರು. ಆಡಳಿತದಲ್ಲಿ ಶಿಸ್ತು, ಪಾರದರ್ಶಕತೆ ಮತ್ತು ಜನಪರ ನಿಲುವಿಗೆ ಅವರು ಹೆಸರಾದವರು.

ಕಾಂಗ್ರೆಸ್ ಪಕ್ಷ ಮತ್ತು ಸಮಾಜ ಸೇವೆ

1980ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಭೆಯ ಸದಸ್ಯ, ಕಾರ್ಯದರ್ಶಿ ಹಾಗೂ ರೈತ ವಿಭಾಗದ ಸಂಚಾಲಕರಾಗಿ ಸೇವೆ ಸಲ್ಲಿಸಿದರು. ರೈತರ ಹಿತ, ವೀರಶೈವ ಲಿಂಗಾಯತ ಸಮುದಾಯದ ಸಂಘಟನೆ, ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಗೆ ಅವರು ಜೀವನಪೂರ್ತಿ ಶ್ರಮಿಸಿದರು.

ರಾಜ್ಯ ಮಟ್ಟದ ಗೌರವ

2006ರ ನವೆಂಬರ್ 1ರಂದು ರಾಜ್ಯ ಏಕೀಕರಣದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಭೀಮಣ್ಣ ಖಂಡ್ರೆ ಅವರನ್ನು ಗೌರವಿಸಿತು. ಇದು ಅವರ ದೀರ್ಘಕಾಲದ ಜನಸೇವೆಗೆ ದೊರೆತ ಮಹತ್ವದ ಗೌರವವಾಗಿತ್ತು.

Views: 26

Leave a Reply

Your email address will not be published. Required fields are marked *