ಐಪಿಎಲ್‌ನಷ್ಟೇ ರೋಚಕತೆ ಸೃಷ್ಟಿಸಿರುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2026ಕ್ಕೆ ವಿಶಾಖಪಟ್ಟಣಂನಲ್ಲಿ ಅದ್ದೂರಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ, ತನ್ನ ಮೊದಲ ಪಂದ್ಯದಲ್ಲೇ ಸಂಘಟಿತ ಆಟ ಪ್ರದರ್ಶಿಸಿ ಪಂಜಾಬ್ ದಿ ಶೇರ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ವಿಶಾಖಪಟ್ಟಣಂನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕರ್ನಾಟಕ ತಂಡವು ಪಂಜಾಬ್ ವಿರುದ್ಧ 31 ರನ್‌ಗಳ ಅಧಿಕಾರಯುತ ಗೆಲುವು ದಾಖಲಿಸಿದೆ.
ಆರಂಭಿಕ ಆಘಾತ ಮತ್ತು ದಕ್ಷ್ ಸಿಂಗ್ ಹ್ಯಾಟ್ರಿಕ್
ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ಪಂಜಾಬ್ ಬೌಲರ್ ದಕ್ಷ್ ಸಿಂಗ್ 4ನೇ ಓವರ್‌ನಲ್ಲಿ ಅಕ್ಷರಶಃ ಬೆಂಕಿ ಚೆಂಡುಗಳನ್ನು ಎಸೆದರು. ಡಾರ್ಲಿಂಗ್ ಕೃಷ್ಣ, ರಾಜೀವ್ ಹನು ಮತ್ತು ನಾಯಕ ಕಿಚ್ಚ ಸುದೀಪ್ ಅವರನ್ನು ಸತತವಾಗಿ ಔಟ್ ಮಾಡುವ ಮೂಲಕ ‘ಹ್ಯಾಟ್ರಿಕ್’ ವಿಕೆಟ್ ಸಾಧನೆ ಮಾಡಿದರು. ಇದಾದ ಬಳಿಕ ಪ್ರದೀಪ್ ಕೂಡ ವಿಕೆಟ್ ಒಪ್ಪಿಸುವುದರೊಂದಿಗೆ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿತ್ತು.
ಪಂದ್ಯದ ಗತಿ ಬದಲಿಸಿದ ಕರಣ್ ಆರ್ಯನ್
ತಂಡ ತೀವ್ರ ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ಕರಣ್ ಆರ್ಯನ್ ಆಪದ್ಬಾಂಧವನಾದರು. ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು, ಕೇವಲ 33 ಎಸೆತಗಳಲ್ಲಿ ಬರೋಬ್ಬರಿ 83 ರನ್ ಸಿಡಿಸಿದರು. ಇವರ ಈ ಸ್ಪೋಟಕ ಇನಿಂಗ್ಸ್ ನೆರವಿನಿಂದ ಕರ್ನಾಟಕ ನಿಗದಿತ 20 ಓವರ್‌ಗಳಲ್ಲಿ 170 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. (ಗಮನಿಸಿ: ಈ ಬಾರಿ 10 ಓವರ್‌ಗಳ ಬದಲು ಟಿ20 ಮಾದರಿಯನ್ನು ಅಳವಡಿಸಲಾಗಿದೆ).
ಬೌಲರ್‌ಗಳ ಕರಾರುವಕ್ಕಾದ ದಾಳಿ
171 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ ತಂಡಕ್ಕೆ, ಕರ್ನಾಟಕದ ಬೌಲರ್‌ಗಳಾದ ಪ್ರದೀಪ್ ಮತ್ತು ಸುನಿಲ್ ರಾವ್ ಆರಂಭಿಕ ಆಘಾತ ನೀಡಿದರು. ಅಗ್ರ ಕ್ರಮಾಂಕದ ಮೂರು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡ ಪಂಜಾಬ್ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾಹುಲ್ ಜೇಟ್ಲಿ ಒಂಟಿ ಹೋರಾಟ ನಡೆಸಿ 44 ಎಸೆತಗಳಲ್ಲಿ 68 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂಜಾಬ್ 139 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಕಳೆದ ಬಾರಿಯ ಕಹಿ ನೆನಪು ಮರೆತು, ಈ ಬಾರಿ ಕಿಚ್ಚ ಸುದೀಪ್ ಪಡೆ ವಿಜಯದ ನಗೆ ಬೀರಿದ್ದು, ಕನ್ನಡಿಗರಲ್ಲಿ ಹಬ್ಬದ ಸಂಭ್ರಮ ಮೂಡಿಸಿದೆ.
ಪಂದ್ಯದ ಮುಖ್ಯಾಂಶಗಳು:
- ಪಂದ್ಯಶ್ರೇಷ್ಠ ಆಟ: ಕರಣ್ ಆರ್ಯನ್ (33 ಎಸೆತಗಳಲ್ಲಿ 83 ರನ್).
- ದಾಖಲೆ: ಪಂಜಾಬ್‌ನ ದಕ್ಷ್ ಸಿಂಗ್‌ರಿಂದ ಹ್ಯಾಟ್ರಿಕ್ ವಿಕೆಟ್.
- ಫಲಿತಾಂಶ: ಕರ್ನಾಟಕ ಬುಲ್ಡೋಜರ್ಸ್‌ಗೆ 31 ರನ್‌ಗಳ ಜಯ.
- ಸ್ಥಳ: ವಿಶಾಖಪಟ್ಟಣಂ.
Views: 22