ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ – ಶಾಲಾ ವಾರ್ಷಿಕೋತ್ಸವ, ವಿಜಯೋತ್ಸವ 2026.
ಚಿತ್ರದುರ್ಗ ಜ.18:
ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವತಿಯಿಂದ 2025–26ನೇ ಸಾಲಿನ “ಶಾಲಾ ವಾರ್ಷಿಕೋತ್ಸವ, ವಿಜಯೋತ್ಸವ 2026” ಕಾರ್ಯಕ್ರಮವನ್ನು ದಿನಾಂಕ 17.01.2026ರ ಶನಿವಾರ ನಗರದ ಚಳ್ಳಕೆರೆ ರಸ್ತೆಯ ಎಸ್.ಜಿ. ಸಮುದಾಯ ಭವನದಲ್ಲಿ ಭವ್ಯವಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪರಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಾಲೆಯ ಜೊತೆಗೆ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸಿದರೆ ಪೋಷಕರ ಜವಾಬ್ದಾರಿ ಮುಗಿದಂತಲ್ಲ. ಮಕ್ಕಳ ವಿದ್ಯಾಭ್ಯಾಸ, ಸಂಸ್ಕಾರ, ಶಿಸ್ತಿನ ಬೆಳವಣಿಗೆಯಲ್ಲಿ ಪೋಷಕರು ಶಾಲೆಯೊಂದಿಗೆ ಕೈಜೋಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾಜದಲ್ಲಿ ಮಕ್ಕಳು ಉತ್ತಮ ಸಂಸ್ಕಾರವಂತರಾಗಬೇಕಾದರೆ ಶಾಲೆ ಮತ್ತು ಪೋಷಕರು ಎರಡೂ ಸೇರಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.

ಧಾರವಾಡದ ವಿಸ್ತಾರ್ ಜಿಂದಗಿ ಹ್ಯೂಮನ್ ಮೈಂಡ್ಸೆಟ್ ಕೋಚ್ ಮಹೇಶ್ ಮಾಸಾಲ್ ಮಾತನಾಡಿ, ಇಂದಿನ ಪೋಷಕರು ಕೇವಲ ಫಲಿತಾಂಶಗಳತ್ತ ಹೆಚ್ಚು ಗಮನ ಹರಿಸುವ ಮನೋಭಾವ ಹೊಂದಿದ್ದಾರೆ. ಈ ದೃಷ್ಟಿಕೋನದಲ್ಲಿ ಬದಲಾವಣೆ ಅಗತ್ಯ. ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆಗಳು ಅಡಕವಾಗಿದ್ದು, ಅವುಗಳನ್ನು ಗುರುತಿಸಿ ಬೆಳೆಸುವ ಜವಾಬ್ದಾರಿ ಶಿಕ್ಷಕರ ಜೊತೆಗೆ ಪೋಷಕರಿಗೂ ಇದೆ ಎಂದು ಹೇಳಿದರು. ರಾಷ್ಟ್ರಪತಿಗಳಾಗಿದ್ದ ದ್ರೌಪದಿ ಮುರ್ಮು ಹಾಗೂ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಪಯಣ ನಮ್ಮೆಲ್ಲರಿಗೂ ಆದರ್ಶಪ್ರಾಯ ಎಂದು ಅವರು ಉಲ್ಲೇಖಿಸಿದರು.
ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ. ವಿಜಯಕುಮಾರ್ ಮಾತನಾಡಿ, ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯ. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗುತ್ತವೆ ಎಂದು ತಿಳಿಸಿದರು.

“ವಿದ್ಯಾವಿಕಾಸ ರತ್ನ” ಪ್ರಶಸ್ತಿ ಪ್ರದಾನ
ವಿಜಯೋತ್ಸವ ಕಾರ್ಯಕ್ರಮದ ಅಂಗವಾಗಿ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ವಿಶೇಷ ಸಾಧನೆ ಮಾಡಿದ ನ್ಯೂರೋಲಾಜಿಸ್ಟ್ ಡಾ. ಕಿರಣ್ ಗೌಡ ಅವರಿಗೆ, ಹಾಗೆಯೇ ಹಿಂದಿನ ವರ್ಷಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಾದ ಹೆಚ್.ವಿ. ಸಮನಾ ಮತ್ತು ಡಿ.ಎಸ್. ದಿಷಾ ಅವರಿಗೆ “ವಿದ್ಯಾವಿಕಾಸ ರತ್ನ” ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಪೋಷಕರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಮಕ್ಕಳ ಕಲರವ – ಸಾಂಸ್ಕೃತಿಕ ವೈಭವ

ವಾರ್ಷಿಕೋತ್ಸವದ ಅಂಗವಾಗಿ ಮುಸ್ಸಂಜೆ ವಾತಾವರಣದಲ್ಲಿ ಶಾಲೆಯ ವಿದ್ಯಾರ್ಥಿಗಳು ಮಹಾಭಾರತ, ರಾಮಾಯಣ ಹಾಗೂ ಜನಪದ ಸಂಪದ ಥೀಮ್ಗಳನ್ನು ಒಳಗೊಂಡ ವಿವಿಧ ನೃತ್ಯ ಪ್ರದರ್ಶನಗಳ ಮೂಲಕ ಭಾರತದ ಸಾಂಸ್ಕೃತಿಕ ವೈವಿಧ್ಯವನ್ನು ವೇದಿಕೆಯ ಮೇಲೆ ಅನಾವರಣಗೊಳಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ. ಎನ್.ಜಿ. ತಿಪ್ಪೇಸ್ವಾಮಿ ಅವರು ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು.
ಕಾರ್ಯಕ್ರಮವನ್ನು ಶಿಕ್ಷಕಿ ಸುಚಿತಾ ಬಿ.ಎಸ್. ನಿರೂಪಿಸಿದರು. ಶ್ರೀಮತಿ ಮಂಜುಳಾ ವೈ.ಜೆ. ಸ್ವಾಗತಿಸಿ, ಶ್ರೀಮತಿ ಕುಮುದಾ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸುನಿತಾ ಪಿ.ಸಿ., ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್.ಎಂ. ಪೃಥ್ವೀಶ, ಐಸಿಎಸ್ಇ ಪ್ರಾಂಶುಪಾಲರಾದ ಶ್ರೀ ಬಸವರಾಜಯ್ಯ ಪಿ., ಶಾಲೆಯ ಶಿಕ್ಷಕ–ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.