ಭಾರತ ರತ್ನ ಕರ್ಪೂರಿ ಠಾಕೂರ್ 102ನೇ ಜನ್ಮದಿನ: ಹಿಂದುಳಿದ ವರ್ಗಗಳ ಹೋರಾಟದ ಧ್ವನಿಗೆ ಗೌರವ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ.24:

ಬಿಹಾರದ ಹಿಂದುಳಿದ ವರ್ಗಗಳ ಜನಪ್ರಿಯ ನಾಯಕ ಹಾಗೂ ಆ ರಾಜ್ಯದಲ್ಲಿ ಎರಡು ಬಾರಿ ಮುಖ್ಯ ಮಂತ್ರಿಯಾಗಿದ್ದಾಗ ದೇಶದಲ್ಲೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೆ ತಂದು ಆ ವರ್ಗಗಳ ಜನರ ಕಣ್ಮಣಿಯಾದರು. ಇದಲ್ಲದೆ, ಬಿಹಾರದಲ್ಲಿ ಸರಾಯಿಯನ್ನು ನಿಷೇಧಿಸಿದ ಕೀರ್ತಿ ಕರ್ಪೂರಿ ಠಾಕೂರ್‌ರವರಿಗೆ ಸಲ್ಲುತ್ತದೆ ಎಂದು ಸಾಹಿತಿಗಳಾದ ಸಿ.ಕೆ. ಮಹೇಶ್ವರಪ್ಪ ತಿಳಿಸಿದರು.

ಭಾರತ ರತ್ನ ಕರ್ಪೂರಿ ಠಾಕೂರ್ ಸೇವಾ ಟ್ರಸ್ಟ್ ವತಿಯಿಂದ ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಶನಿವಾರ ೧೦೨ನೇ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸಿಹಿ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ೧೯೨೪ರ ಜ. ೨೪ರಂದು ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿನ ಪಿತೌಂಝಿಯಾ ಎಂಬ ಹಳ್ಳಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಕುಟುಂಬವೊಂದರಲ್ಲಿ ಜನಿಸಿದರು.ಶಿಕ್ಷಣದತ್ತ ಒಲವು ತೋರಿದವರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಧುಮುಕಿದ್ದವರು. ೧೯೫೨ರಲ್ಲಿ ಮೊದಲ ಬಾರಿಗೆ ಬಿಹಾರ ವಿಧಾನಸಭೆ ಪ್ರವೇಶಿಸಿದ ಅವರು ಆನಂತರ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಜನಸೇವೆಯಿಂದ ಪ್ರಭಾವಿತರಾಗಿದ್ದ ಜನರು, ಅವರಿಗೆ ಜನನಾಯಕ ಎಂದೇ ಕರೆಯುತ್ತಿದ್ದರು. , ಸಾಮಾಜಿಕ ಕ್ರಾಂತಿಯ ಹಿನ್ನೆಲೆಯಿಂದ ಬಂದ ಅವರು ಬಿಹಾರದಲ್ಲಿ ೧೯೭೦ – ೧೯೭೧ರಲ್ಲಿ ಹಾಗೂ ೧೯೭೭-೭೯ರಲ್ಲಿ ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಅವರು, ಅನೇಕ ಸಾಮಾಜಿಕ ಕ್ರಾಂತಿ ಮಾಡಿದ ಜನನಾಯಕನಿಗೆ ಅಗ್ರ ಗೌರವ.ದೇಶದಲ್ಲೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ, ಸರಾಯಿ ನಿಷೇಧ ಸೇರಿ ಹಲವಾರು ಜನಪರ ನೀತಿಗಳನ್ನು ಜಾರಿಗೊಳಿಸಿದ ಹೆಗ್ಗಳಿಕೆ ಠಾಕೂರ್ ಅವರದ್ದು ಎಂದರು.

ವಿದ್ಯಾರ್ಥಿ ದೆಸೆಯಿಂದಲೇ ಗಾಂಧೀಜಿ ಹಾಗೂ ಕಾಂಗ್ರೆಸ್‌ನ ಸತ್ಯನಾರಾಯಣ ಸಿನ್ಹಾ ಅವರ ವಿಚಾರ ಧಾರೆಗಳಿಂದ ಪ್ರಭಾವಿತರಾಗಿದ್ದವರು. ಸ್ವಾತಂತ್ರಕ್ಕಾಗಿ ಹೋರಾಡಿದ ಅವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡು ಬ್ರಿಟಿಷ್ ಸರ್ಕಾರದಿಂದ ೨೬ ತಿಂಗಳುಗಳ ಕಾಲ ಸೆರೆಮನೆ ವಾಸವನ್ನು ಅನುಭವಿಸಿದ್ದವರು. ದೇಶ ಸ್ವತಂತ್ರವಾದ ನಂತರ ತಮ್ಮ ಹಳ್ಳಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಅವರಲ್ಲಿನ ಸಾಮಾಜಿಕ ಸಮಾನತೆಯ ಕಿಚ್ಚು ಅವರನ್ನು ಹಲವಾರು ಪ್ರತಿಭಟನೆಗಳಲ್ಲಿ ಮಂಚೂಣಿಯಲ್ಲಿ ನಿಲ್ಲುವಂತೆ ಮಾಡುತ್ತಿತ್ತು. ಹಲವಾರು ಚಳುವಳಿಗಳ ನೇತೃತ್ವ ವಹಿಸಿದ್ದಕ್ಕಾಗಿ ಅವರು ಅನೇಕ ಬಾರಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು ಎಂದು ತಿಳಿಸಿದರು.

ಭಾರತ ರತ್ನ ಕರ್ಪೂರಿ ಠಾಕೂರ್ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ನರಸಿಂಹಮೂರ್ತಿ ಮಾತನಾಡಿ, ಬಿಹಾರದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಅನೇಕ ಜನಪರ ಕಾಯ್ದೆಗಳನ್ನು ಜಾರಿಗೊಳಿಸಿದ ಹೆಗ್ಗಳಿಕೆಯುಳ್ಳ ರಾಜಕೀಯ ನೇತಾರ ಹಾಗೂ ಅಲ್ಲಿನ ಹಿಂದುಳಿದ ವರ್ಗಗಳ ಜನನಾಯಕರೆಂದೇ ಖ್ಯಾತಿಯಾಗಿದ್ದರು. ಸಮಾಜವಾದಿ ನಾಯಕರಾದ ಜಯಪ್ರಕಾಶ್ ನಾರಾಯಣ್ ಅವರ ನಿಕಟವರ್ತಿಯಾಗಿದ್ದರು. ೧೯೭೭ರಲ್ಲಿ ಜಯಪ್ರಕಾಶ್ ಅವರು ಕೈಗೊಂಡಿದ್ದ ಸಂಪೂರ್ಣ ಕ್ರಾಂತಿ ಚಳುವಳಿಯಲ್ಲಿ ಜಯಪ್ರಕಾಶ್ ನಾರಾಯಣ್ ಅವರ ನೆರಳಿನಂತೆ ಕೆಲಸ ಮಾಡಿದರು. ೧೯೫೨ರ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ತಾಜ್ಪುರ್ ಕ್ಷೇತ್ರದಿಂದ ಸೋಷಲಿಸ್ಟ್ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಗಳಿಸಿದರು. ಶಾಸಕರಾಗಿದ್ದಾಗಲೂ ಅನೇಕ ರೀತಿಯ ಜನಪರ ಹಾಗೂ ಕಾರ್ಮಿಕ ಪರ ಪ್ರತಿಭಟನೆಗಳಲ್ಲಿ ಅವರು ಗುರುತಿಸಿಕೊಂಡಿದ್ದರು. ೧೯೬೭ರಲ್ಲಿ ಬಿಹಾರದಲ್ಲಿ ಮೊಟ್ಟಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂತು. ಆಗ ಮುಖ್ಯಮಂತ್ರಿ ಯಾಗಿದ್ದವರು ಮಹಾಮಾಯ ಪ್ರಸಾದ್ ಸಿನ್ಹಾ. ಅವರ ಸಂಪುಟದಲ್ಲಿ ಕರ್ಪೂರಿ ಠಾಕೂರ್ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದರು. ೧೯೬೭ರಲ್ಲಿ ಆ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ೧೯೭೦ರ ಡಿಸೆಂಬರ್ ನಿಂದ ೧೯೭೧ರ ಜೂನ್‌ವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ೧೯೭೭ರಲ್ಲಿ ಬಿಹಾರದಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬಂದಾಗ ೧೯೭೭ರ ಡಿಸೆಂಬರ್ ನಿಂದ ೧೯೭೯ರ ಏಪ್ರಿಲ್ ವರೆಗೆ ಅವರು ೨ನೇ ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು ೧೯೮೯ರ ಫೆ. ೧೭ರಂದು ತಮ್ಮ ೬೪ನೇ ವಯಸ್ಸಿನಲ್ಲಿ ಅವರು ನಿಧನರಾದರು ಎಂದರು.

ಸಮಾಜವಾದಿ ಪಾರ್ಟಿಯ ಲಕ್ಷ್ಮಿಕಾಂತ್ ಮಾತನಾಡಿ, ಮುಖ್ಯಮಂತ್ರಿಯಾಗುವ ಮುನ್ನ, ಶಿಕ್ಷಣ ಸಚಿವರಾಗಿ ದ್ದಾಗ ಅವರು, ಬಿಹಾರದ ಶಾಲೆಗಳಲ್ಲಿ ಇಂಗ್ಲೀಷ್ ಕಡ್ಡಾಯ ಎಂಬ ನಿಯಮವನ್ನು ಸಡಿಲಗೊಳಿಸಿದರು. ಇದು ಅಂದಿನ ಬಿಹಾರದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಇಂಗ್ಲೀಷ್ ಪಾಸ್ ಆಗಲು ತುಂಬಾ ಕಷ್ಟಪಡುತ್ತಿದ್ದ ವಿದ್ಯಾರ್ಥಿಗಳಿಗೆ ವರದಾನವಾಯಿತು. ಇಂಥ ಅನೇಕ ಕೆಲಸಗಳಿಂದಾಗಿ ಅವರ ಜನಪ್ರಿಯತೆ ಎಷ್ಟಿತ್ತೆಂದರೆ, ಜನರು ಅವರ ಹೆಸರಿನಲ್ಲಿ ಸ್ವಯಂಪ್ರೇರಿತವಾಗಿ ಶಾಲೆ, ಕಾಲೇಜುಗಳನ್ನು ತೆರೆದರು! ಕರ್ಪೂರಿ ಠಾಕೂರ ಅವರಿಗೆ ಗೌರವ ಸಲ್ಲಿಸಲು ಬಿಹಾರ ಸರ್ಕಾರ ಅವರು ಜನಿಸಿದ್ದ ಪಿತೌಂಝಿಯಾ ಹೆಸರನ್ನು ಬದಲಾಯಿಸಿ, ಕರ್ಪೂರಿ ಗ್ರಾಮ್ ಎಂದು ಬದಲಾಯಿಸಿದೆ ಎಂದ ಅವರು. ಬಿಹಾರದ ಹಿಂದುಳಿದ ವರ್ಗಗಳ ಜನಪ್ರಿಯ ನಾಯಕ ಹಾಗೂ ಅನೇಕ ಜನಪರ ನೀತಿಗಳನ್ನು ಜಾರಿಗೆ ತಂದ ಹೆಗ್ಗಳಿಕೆ ಪಡೆದಿದ್ದ ಕರ್ಪೂರಿ ಠಾಕೂರ್ ಅವರಿಗೆ ೨೦೨೩-೨೪ರಲ್ಲಿ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಗೌರವವನ್ನು ಮರಣೋತ್ತರವಾಗಿ ನೀಡಿ ಗೌರವಿಸಿತ್ತು ಎಂದರು.

ಈ ಸಂದರ್ಭದಲ್ಲಿ ಭಾರತ ರತ್ನ ಕರ್ಪೂರಿ ಠಾಕೂರ್ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಎನ್. ಪರಮೇಶ್ವರಪ್ಪ, ಖಜಾಂಚಿ ಹೆಚ್. ಆರ್ ಶ್ರೀನಿವಾಸ್, ಸಮಾಜವಾದಿ ಪಕ್ಷ ಜಿಲ್ಲಾಧ್ಯಕ್ಷ ಟಿ. ರವಿ ಸಮಾಜ ಸೇವಕರಾದ ಟಿ.ಲಿಂಗಪ್ಪ ಭಾಗವಹಿಸಿದ್ದರು.

Leave a Reply

Your email address will not be published. Required fields are marked *