ಹರಾರೆ: ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ 2026ರ ಅಂಡರ್-19 ವಿಶ್ವಕಪ್‌ನ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಕಿರಿಯರ ತಂಡ ಅದ್ಭುತ ಪ್ರದರ್ಶನ ನೀಡಿದೆ. ಅಫ್ಘಾನಿಸ್ತಾನ ನೀಡಿದ್ದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡ, 7 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸತತ 6ನೇ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿದೆ.
ದಾಖಲೆಯ ಚೇಸಿಂಗ್ ಮತ್ತು ಆರನ್ ಜಾರ್ಜ್ ಶತಕ
ಅಂಡರ್-19 ವಿಶ್ವಕಪ್ ಇತಿಹಾಸದಲ್ಲೇ ಸೆಮಿಫೈನಲ್ ಹಂತದಲ್ಲಿ ಅತಿದೊಡ್ಡ ಮೊತ್ತವನ್ನು (310 ರನ್) ಬೆನ್ನಟ್ಟಿದ ದಾಖಲೆಯನ್ನು ಭಾರತ ತನ್ನದಾಗಿಸಿಕೊಂಡಿದೆ. 311 ರನ್ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (33 ಎಸೆತಗಳಲ್ಲಿ 68 ರನ್) ಸ್ಫೋಟಕ ಆರಂಭ ಒದಗಿಸಿದರು.
ಬಳಿಕ ಕ್ರೀಸ್ಗೆ ಬಂದ ಆರನ್ ಜಾರ್ಜ್ ಅಫ್ಘಾನ್ ಬೌಲರ್ಗಳ ಬೆವರಿಳಿಸಿದರು. ಜವಾಬ್ದಾರಿಯುತ ಹಾಗೂ ಆಕರ್ಷಕ ಆಟವಾಡಿದ ಜಾರ್ಜ್, 104 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 115 ರನ್ ಸಿಡಿಸಿ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿದರು. ಇವರಿಗೆ ಸಾಥ್ ನೀಡಿದ ನಾಯಕ ಆಯುಷ್ ಮ್ಹಾತ್ರೆ 62 ರನ್ ಗಳಿಸಿದರೆ, ವಿಹಾನ್ ಮಲ್ಹೋತ್ರಾ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಭಾರತ ಇನ್ನೂ 53 ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಬೀಗಿತು.
ಅಫ್ಘಾನಿಸ್ತಾನದ ದಿಟ್ಟ ಹೋರಾಟ
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಫೈಸಲ್ ಶಿನೋಜಾಡಾ (110) ಮತ್ತು ಉಜೈರುಲ್ಲಾ ನಯಾಜೈ (101*) ಅವರ ಅಮೋಘ ಶತಕಗಳ ನೆರವಿನಿಂದ ಅಫ್ಘಾನ್ ನಿಗದಿತ ಓವರ್ಗಳಲ್ಲಿ 310 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇವರಿಬ್ಬರು 3ನೇ ವಿಕೆಟ್ಗೆ 208 ರನ್ಗಳ ಜೊತೆಯಾಟವಾಡಿದ್ದು ವಿಶೇಷವಾಗಿತ್ತು.
ಫೈನಲ್‌ನಲ್ಲಿ ಇಂಗ್ಲೆಂಡ್ ಎದುರಾಳಿ
ಈ ಗೆಲುವಿನೊಂದಿಗೆ ಭಾರತ ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ 10ನೇ ಬಾರಿಗೆ ಫೈನಲ್ ತಲುಪಿದೆ. ಫೆಬ್ರವರಿ 6 ರಂದು ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 6ನೇ ಬಾರಿ ಟ್ರೋಫಿ ಗೆಲ್ಲುವ ತವಕದಲ್ಲಿ ಭಾರತವಿದ್ದರೆ, ಇಂಗ್ಲೆಂಡ್ 28 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ.