ಮ್ಯೂಚುವಲ್ ಫಂಡ್, ಬಾಂಡ್, ಎಫ್ಡಿ: 50,000 ರೂ. ಮಾಸಿಕ ಆದಾಯಕ್ಕೆ ಎಲ್ಲಿ, ಎಷ್ಟು ಹೂಡಿಕೆ ಮಾಡಬೇಕು?
ಇಂದಿನ ಎಐ (AI) ಯುಗದಲ್ಲಿ ಯಾರ ಕೆಲಸ ಯಾವಾಗ ಹೋಗುತ್ತದೆಯೋ ಹೇಳಲಾಗದು. ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ನಿವೃತ್ತಿಯ ನಂತರ ಪಿಂಚಣಿಯ ಭದ್ರತೆಯೂ ಇರುವುದಿಲ್ಲ. ಒಂದು ವೇಳೆ ನೀವು 40ನೇ ವಯಸ್ಸಿಗೆ ಉದ್ಯೋಗಕ್ಕೆ ಪೂರ್ಣವಿರಾಮ ಇಟ್ಟು, ಮುಂದಿನ 40 ವರ್ಷಗಳ ಕಾಲ ನೆಮ್ಮದಿಯಾಗಿ ಬದುಕಬೇಕೆಂದರೆ ಏನು ಮಾಡಬೇಕು?
ಬಾಡಿಗೆ ಮನೆ, ದಿನಸಿ, ಆರೋಗ್ಯ ಸೇರಿದಂತೆ ಸರಳ ಜೀವನ ನಡೆಸುವುದಾದರೂ ಇಂದಿನ ಲೆಕ್ಕಾಚಾರದಲ್ಲಿ ಕನಿಷ್ಠ ತಿಂಗಳಿಗೆ 50,000 ರೂ. ಬೇಕಾಗುತ್ತದೆ. ಆದರೆ, 10-20 ವರ್ಷಗಳ ನಂತರ ಇದೇ 50,000 ರೂ. ಸಾಕಾಗುವುದಿಲ್ಲ. ಶೇ. 6ರಷ್ಟು ಹಣದುಬ್ಬರ (Inflation) ಬೆಲೆ ಏರಿಕೆಯನ್ನು ಸೃಷ್ಟಿಸುತ್ತದೆ. ಹೀಗಾಗಿ, ಬೆಲೆ ಏರಿಕೆಯನ್ನು ಮೀರಿ ನಿರಂತರ ಆದಾಯ ತರುವಂತಹ ಹೂಡಿಕೆ ತಂತ್ರವನ್ನು ಈಗಿನಿಂದಲೇ ರೂಪಿಸುವುದು ಅನಿವಾರ್ಯ.
ಎಷ್ಟು ಕಾರ್ಪಸ್ (Corpus) ಬೇಕಾಗುತ್ತದೆ?
ನಿಮ್ಮ ವಯಸ್ಸು 40 ವರ್ಷವಿದ್ದು, ಮುಂದಿನ 40 ವರ್ಷಗಳ (480 ತಿಂಗಳು) ಕಾಲ ಪ್ರತಿ ತಿಂಗಳು 50,000 ರೂ. (ವರ್ಷಕ್ಕೆ 6 ಲಕ್ಷ ರೂ.) ಪಡೆಯಬೇಕೆಂದರೆ ಮತ್ತು ಬೆಲೆ ಏರಿಕೆಯನ್ನು ತಡೆದುಕೊಳ್ಳಬೇಕೆಂದರೆ ನಿಮ್ಮ ಬಳಿ ಕನಿಷ್ಠ 1.5 ಕೋಟಿಯಿಂದ 2 ಕೋಟಿ ರೂ. ಗಳಷ್ಟು ನಿವೃತ್ತಿ ನಿಧಿ ಅಥವಾ ಕಾರ್ಪಸ್ ಇರಬೇಕಾಗುತ್ತದೆ.
2 ಕೋಟಿ ರೂ. ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು? (Asset Allocation)
ಷೇರುಪೇಟೆ ಯಾವಾಗಲೂ ಲಾಭವೇ ತಂದುಕೊಡುವುದಿಲ್ಲ; ಕೆಲವೊಮ್ಮೆ ಭಾರೀ ಕುಸಿತವನ್ನೂ ಕಾಣಬಹುದು. ಆದ್ದರಿಂದ ನಿಮ್ಮೆಲ್ಲಾ ಹಣವನ್ನು ಒಂದೇ ಕಡೆ ಹಾಕಬಾರದು. 2 ಕೋಟಿ ರೂ. ನಿಧಿಯನ್ನು ತಜ್ಞರ ಸಲಹೆಯಂತೆ ಹೀಗೆ ವಿಭಜಿಸಬಹುದು:
- ಈಕ್ವಿಟಿ ಮ್ಯೂಚುವಲ್ ಫಂಡ್ಗಳು (ಶೇ. 45): 90 ಲಕ್ಷ ರೂ. ಹೂಡಿಕೆ. ಇಲ್ಲಿ ದೀರ್ಘಾವಧಿಯಲ್ಲಿ ಕನಿಷ್ಠ ಶೇ. 11 ರಿಂದ 12ರಷ್ಟು ರಿಟರ್ನ್ಸ್ ನಿರೀಕ್ಷಿಸಬಹುದು. ಇದು ನಿಮ್ಮ ಹಣವನ್ನು ಬೆಳೆಸುವ ಎಂಜಿನ್ ಆಗಿ ಕೆಲಸ ಮಾಡುತ್ತದೆ.
- ಡೆಟ್ ಫಂಡ್ಗಳು ಅಥವಾ ಕಾರ್ಪೊರೇಟ್ ಬಾಂಡ್ಗಳು (ಶೇ. 30): 60 ಲಕ್ಷ ರೂ. ಹೂಡಿಕೆ. ಇಲ್ಲಿ ಶೇ. 7.5 ರಷ್ಟು ಸ್ಥಿರ ರಿಟರ್ನ್ ನಿರೀಕ್ಷಿಸಬಹುದು. ಮಾರುಕಟ್ಟೆ ಕುಸಿದಾಗ ಇದು ಆಸರೆಯಾಗುತ್ತದೆ.
- ಸರ್ಕಾರಿ ಬಾಂಡ್ಗಳು / ಎಫ್ಡಿ (ಶೇ. 15): 30 ಲಕ್ಷ ರೂ. ಹೂಡಿಕೆ. ಇದರಲ್ಲಿ ಶೇ. 8ರಷ್ಟು ಭದ್ರವಾದ ಆದಾಯ ಸಿಗುತ್ತದೆ. ಇದು ನಿಮ್ಮ ಬಂಡವಾಳಕ್ಕೆ ಸಂಪೂರ್ಣ ಸುರಕ್ಷತೆ ಒದಗಿಸುತ್ತದೆ.
- ಲಿಕ್ವಿಡ್ ಫಂಡ್ / ಎಮರ್ಜೆನ್ಸಿ ಫಂಡ್ (ಶೇ. 10): 20 ಲಕ್ಷ ರೂ. ಹೂಡಿಕೆ. ಶೇ. 7ರಷ್ಟು ರಿಟರ್ನ್ ನೀಡುವ ಇದನ್ನು ತುರ್ತು ವೈದ್ಯಕೀಯ ಅಥವಾ ಇತರೆ ದಿಢೀರ್ ಖರ್ಚುಗಳಿಗೆ ಮಾತ್ರ ಬಳಸಬೇಕು.
ಹಣ ಹಿಂಪಡೆಯುವ ತಂತ್ರ: ಸಿಸ್ಟಮ್ಯಾಟಿಕ್ ವಿತ್ಡ್ರಾಯಲ್ ಪ್ಲಾನ್ (SWP)
ಒಮ್ಮೇಲೆ ಹಣವನ್ನು ತೆಗೆಯುವ ಬದಲು, ಮ್ಯೂಚುವಲ್ ಫಂಡ್ಗಳಲ್ಲಿ SWP ಆಯ್ಕೆ ಮಾಡಿಕೊಳ್ಳಿ. ಪ್ರತಿ ವರ್ಷ ನಿಮ್ಮ ಒಟ್ಟು ಹೂಡಿಕೆಯ ಶೇ. 3 ರಿಂದ 4ರಷ್ಟನ್ನು ಮಾತ್ರ ಹಿಂಪಡೆಯಿರಿ. ಷೇರು ಮಾರುಕಟ್ಟೆ ಲಾಭದಲ್ಲಿದ್ದಾಗ ಈಕ್ವಿಟಿ ಫಂಡ್ನಿಂದ ಹಣ ಪಡೆಯಿರಿ. ಮಾರುಕಟ್ಟೆ ಕುಸಿದಾಗ (ಉದಾಹರಣೆಗೆ ಕೊರೊನಾ ಸಮಯದಂತಹ ಕುಸಿತ), ಈಕ್ವಿಟಿ ಫಂಡ್ಗೆ ಕೈಹಾಕದೆ, ಡೆಟ್ ಫಂಡ್ ಅಥವಾ ಲಿಕ್ವಿಡ್ ಫಂಡ್ನಿಂದ ಹಣ ಪಡೆಯಿರಿ. ಇದರಿಂದ ನಿಮ್ಮ ಮೂಲ ಬಂಡವಾಳ ಕರಗುವುದಿಲ್ಲ.
ಹಣಕಾಸು ಭದ್ರತೆಗಾಗಿ ಹೆಚ್ಚುವರಿ ಗೋಲ್ಡನ್ ಟಿಪ್ಸ್
- ಆರೋಗ್ಯ ವಿಮೆ (Health Insurance) ಕಡ್ಡಾಯ: ಎಷ್ಟೇ ದೊಡ್ಡ ಕಾರ್ಪಸ್ ಇದ್ದರೂ, ಒಂದು ದೊಡ್ಡ ಕಾಯಿಲೆ ಬಂದರೆ ಆಸ್ಪತ್ರೆ ಬಿಲ್ ನಿಮ್ಮ ಸಂಪತ್ತನ್ನೇ ಕರಗಿಸಬಹುದು. ಆದ್ದರಿಂದ, ನಿಮಗೂ ಮತ್ತು ಕುಟುಂಬಕ್ಕೂ ಕನಿಷ್ಠ 10-15 ಲಕ್ಷ ರೂ. ಕವರೇಜ್ ಇರುವ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಮಾಡಿಸಿ.
- ನಿಷ್ಕ್ರಿಯ ಆದಾಯದ (Passive Income) ಮೂಲಗಳಿರಲಿ: ಕೇವಲ ಮ್ಯೂಚುವಲ್ ಫಂಡ್ ಮಾತ್ರವಲ್ಲದೆ, ಸಾಧ್ಯವಾದರೆ ಮನೆಯ ಒಂದು ಭಾಗವನ್ನು ಬಾಡಿಗೆಗೆ ಬಿಡುವುದು, ಅಥವಾ ನಿಮ್ಮ ಕೌಶಲ್ಯದ ಆಧಾರದ ಮೇಲೆ ಫ್ರೀಲ್ಯಾನ್ಸಿಂಗ್ ಮಾಡುವುದರಿಂದ ಬರುವ ಆದಾಯವು ನಿಮ್ಮ ಹೂಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
- ವರ್ಷಕ್ಕೊಮ್ಮೆ ಪೋರ್ಟ್ಫೋಲಿಯೋ ರಿಬ್ಯಾಲೆನ್ಸಿಂಗ್: ಪ್ರತಿ ವರ್ಷ ನಿಮ್ಮ ಹೂಡಿಕೆಗಳನ್ನು ಪರಿಶೀಲಿಸಿ. ಈಕ್ವಿಟಿ ಮಾರುಕಟ್ಟೆ ವಿಪರೀತ ಏರಿಕೆ ಕಂಡು ನಿಮ್ಮ ಈಕ್ವಿಟಿ ಪಾಲು ಶೇ. 45ರಿಂದ 60ಕ್ಕೆ ಏರಿದ್ದರೆ, ಆ ಲಾಭವನ್ನು ಬುಕ್ ಮಾಡಿ ಡೆಟ್ ಫಂಡ್ಗೆ ವರ್ಗಾಯಿಸಿ. ಇದರಿಂದ ರಿಸ್ಕ್ ಕಡಿಮೆಯಾಗುತ್ತದೆ.
- ಯಾವತ್ತೂ ಸಾಲ ಮಾಡದಿರಿ: ನಿವೃತ್ತಿಯ ನಂತರ ಕ್ರೆಡಿಟ್ ಕಾರ್ಡ್ ಇಎಂಐ, ಪರ್ಸನಲ್ ಲೋನ್ನಂತಹ ಸಾಲಗಳ ಸುಳಿಗೆ ಸಿಲುಕಬೇಡಿ. ನಿಮ್ಮ ಬದುಕು ಸಂಪೂರ್ಣವಾಗಿ ಸಾಲಮುಕ್ತವಾಗಿರಬೇಕು.
- ಬಕೆಟ್ ಸ್ಟ್ರಾಟಜಿ ಬಳಸಿ: ಮುಂದಿನ 3-5 ವರ್ಷಗಳಿಗೆ ಬೇಕಾಗುವಷ್ಟು ಹಣವನ್ನು ಮಾತ್ರ ಡೆಟ್/ಲಿಕ್ವಿಡ್ ಫಂಡ್ ಎಂಬ ‘ಸೇಫ್ ಬಕೆಟ್’ನಲ್ಲಿಡಿ. 5 ವರ್ಷಗಳಿಗಿಂತ ಹೆಚ್ಚು ಅವಧಿಗೆ ಬೇಕಾಗುವ ಹಣವನ್ನು ಮಾತ್ರ ಈಕ್ವಿಟಿ ಎಂಬ ‘ಗ್ರೋಥ್ ಬಕೆಟ್’ನಲ್ಲಿಡಿ.