ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಭೀಮಸಮುದ್ರ, ಜೂನ್ 1:
ಗಣಿ ಬಾಧಿತ ಪರಿಸರ ಮತ್ತು ಜನ ಬದುಕಿನ ಪುನರ್ಚೇತನ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಭೀಮಸಮುದ್ರ ರೈತ ಸಂಘ ಹಾಗೂ ಕೆಆರ್ಎಸ್ ಪಕ್ಷದ ನೇತೃತ್ವದಲ್ಲಿ ಗಣಿ ಬಾಧಿತ ಗ್ರಾಮಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸೋಮವಾರ ನೂರಾರು ರೈತರು ಹಾಗೂ ಗ್ರಾಮಸ್ಥರು ಪಾದಯಾತ್ರೆ ನಡೆಸಿದರು.
ಬೆಳಿಗ್ಗೆ 7 ಗಂಟೆಗೆ ವಿ.ಪಾಳ್ಯ ಗ್ರಾಮದಿಂದ ಆರಂಭವಾದ ಪಾದಯಾತ್ರೆ ಭೀಮಸಮುದ್ರ, ಬೊಮ್ಮೇನಹಳ್ಳಿ, ಹಿರೇಗುಂಟನೂರು, ಹಳಿಯೂರು, ಮಾನಂಗಿ, ಸಿದ್ದಾಪುರ ಹಾಗೂ ಮಾಳಪ್ಪನಟ್ಟಿ ಮಾರ್ಗವಾಗಿ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಗಿತು. ಈ ಪಾದಯಾತ್ರೆಯಲ್ಲಿ ಸುಮಾರು 300 ರಿಂದ 400 ರೈತರು ಹಾಗೂ ವಿವಿಧ ಗ್ರಾಮಗಳ ನಿವಾಸಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನ ಮಳಿಗೆ ಧನಂಜಯ್ ಮಾತನಾಡಿ, “ನಾವು ಗಣಿಗಾರಿಕೆಗೆ ವಿರೋಧಿಗಳಲ್ಲ. ಆದರೆ ಗಣಿಗಾರಿಕೆಯಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ಗಣಿ ಉತ್ಪನ್ನಗಳನ್ನು ರಸ್ತೆ ಮಾರ್ಗದ ಬದಲು ರೈಲ್ವೆ ಮೂಲಕ ಸಾಗಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ” ಎಂದು ಹೇಳಿದರು.
ಗಣಿಗಳಿಂದ ಹೊರಹೊಮ್ಮುವ ಧೂಳು ಸುತ್ತಮುತ್ತಲಿನ 15 ರಿಂದ 20 ಗ್ರಾಮಗಳ ತೆಂಗು, ಅಡಿಕೆ, ಬಾಳೆ, ಸಾವಂತಿಗೆ ಹಾಗೂ ಕನಕಾಂಬರ ಸೇರಿದಂತೆ ವಿವಿಧ ಬೆಳೆಗಳ ಮೇಲೆ ಬಿದ್ದು ರೈತರಿಗೆ ಭಾರೀ ನಷ್ಟ ಉಂಟುಮಾಡುತ್ತಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅನೇಕ ಗ್ರಾಮಸ್ಥರು ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ಗಣಿ ಕಂಪನಿಗಳಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ದೊಡ್ಡ ಪ್ರಮಾಣದ ಆದಾಯ ಬರುತ್ತಿದ್ದರೂ, ಗಣಿ ಬಾಧಿತ ಗ್ರಾಮಗಳ ಅಭಿವೃದ್ಧಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಜೊತೆಗೆ ಸ್ಥಳೀಯ ಯುವಕರಿಗೆ ಉದ್ಯೋಗ ನೀಡದೆ ಹೊರ ರಾಜ್ಯದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸ್ಥಳೀಯ ನಿರುದ್ಯೋಗಿಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಭೀಮಸಮುದ್ರ ರೈತ ಸಂಘದ ಅಧ್ಯಕ್ಷ ಶಂಕ್ರಮೂರ್ತಿ ಮಾತನಾಡಿ, ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರಕಿಲ್ಲ. ಹೀಗಾಗಿ ರೈತರು ಹಾಗೂ ಗ್ರಾಮಸ್ಥರು ಒಟ್ಟಾಗಿ ಪಾದಯಾತ್ರೆ ನಡೆಸಿ ಜಿಲ್ಲಾಡಳಿತದ ಗಮನ ಸೆಳೆಯಲು ಮುಂದಾಗಿದ್ದೇವೆ ಎಂದರು.
ಪುನರ್ಚೇತನ ಹೋರಾಟ ಸಮಿತಿಯ ಸದಸ್ಯ ವಸಂತ್ ಕುಮಾರ್ ಮಾತನಾಡಿ, “ಗಣಿ ಬಾಧಿತ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಂತಹ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಲಾಗುತ್ತಿಲ್ಲ. ಮಕ್ಕಳು ಹಾಗೂ ವೃದ್ಧರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಮ್ಮ 21 ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು” ಎಂದು ಆಗ್ರಹಿಸಿದರು.
“ನಾವು ಗಣಿಗಾರಿಕೆಗೆ ವಿರೋಧಿಗಳಲ್ಲ. ಆದರೆ ಸಾರ್ವಜನಿಕರ ಹಿತಾಸಕ್ತಿಯನ್ನು ಕಡೆಗಣಿಸುವ ಗಣಿಗಾರಿಕಾ ಕಂಪನಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಗಣಿ ಬಾಧಿತ ಗ್ರಾಮಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ” ಎಂದು ಅವರು ತಿಳಿಸಿದರು.
ಪಾದಯಾತ್ರೆಯಲ್ಲಿ ತುಮಕೂರು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ ಕೆಆರ್ಎಸ್ ಪಕ್ಷದ ಮುಖಂಡರು, ರೈತ ಸಂಘದ ಪದಾಧಿಕಾರಿಗಳು ಹಾಗೂ ಹೋರಾಟಗಾರರು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.