ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಮಾ.10
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಇಲಾಖೆಯಿಂದ ಔಷಧಿಗಳನ್ನು ಸರಬರಾಜು ಮಾಡಬೇಕು. ಆರೋಗ್ಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಸಂಘ ಇದೇ ಮಾರ್ಚ್ 11 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಡಾ.ಬಸವರಾಜ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆಯಲ್ಲಿ ವಿವಿಧ ವೃಂದಗಳಲಿ ಒಟ್ಟು 36397 ಅಧಿಕಾರಿ, ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ 6 ಕೋಟಿ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಪ್ರಸ್ತುತ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ನೌಕರರ ಸಂಖ್ಯೆ, ವಯೋನಿವೃತ್ತಿ ಮತ್ತು ಇತರೆ ಕಾರಣಗಳಿಂದಾಗಿ ಕಡಿಮೆಯಾಗುತ್ತಿದ್ದು, ಖಾಲಿ ಹುದ್ದೆಗಳ ಭರ್ತಿ ಆಗದೇ ಇರುವುದರಿಂದ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ಹೆಚ್ಚಿನ ಕಾರ್ಯ ಒತ್ತಡ ಉಂಟಾಗುತ್ತಿದೆ. ಆದರೂ ಕೂಡ ನೌಕರರ ಶಾಂತಿಯುತವಾಗಿ ತಮ್ಮ ಕಾರ್ಯ ನಿರ್ವಹಿಸಿಕೊಂಡು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ್ದರೂ ಸಹ ಅವುಗಳನ್ನು ಪರಗಣನೆಗೆ ತೆಗೆದುಕೊಂಡಿಲ್ಲದಿರುವುದು ನಮ್ಮಗಳ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಇಲಾಖೆಯಿಂದ ಔಷಧಿಗಳನ್ನು ಸರಬರಾಜು ಮಾಡಬೇಕು. ಆರೋಗ್ಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು. ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಬೇಕು. ಕಳೆದ 05ವರ್ಷಗಳಿಂದ ಮುಂಬಡ್ತಿಗಳನ್ನು ನೀಡದೇ ಇರುವ ಇಲಾಖೆಯ ಎಲ್ಲಾ ವೃಂದದ ಅಧಿಕಾರಿ- ನೌಕರರಿಗೆಬಡ್ತಿ ನೀಡಬೇಕು. ನಿಯಮಗಳಲ್ಲಿ ಅವಕಾಶವಿದ್ದಾಗ್ಯೂ ಸೇವಾನಿರತ ವೈದ್ಯರು ಅಧಿಕಾರಿ ಉನ್ನತ ವ್ಯಾಸಂಗ/ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ನೀಡದೇ ಇರುವುದು. ಇಲಾಖೆಯ ವರ್ಗಾವಣೆ ಕಾಯಿದೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸದೇ ಅವೈಜ್ಞಾನಿಕವಾಗಿ ಕೌನ್ಸಿಲಿಂಗ್ ವರ್ಗಾವಣೆ ಮಾಡುತ್ತಿರುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾರ್ಚ್ 11 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಡಾ.ಬಸವರಾಜ್ ಹೇಳಿದರು.
ಮೊದಲ ಹಂತದಲ್ಲಿ ದಿನಾಂಕ:11ರಿಂದ15ರವರೆಗೆ ಎಲ್ಲಾ ಜಿಲ್ಲಾ ಆಸ್ಪತ್ರೆ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಡಿಸ್ಪೆನ್ಸರಿಗಳಲ್ಲಿನ ಎಲ್ಲಾ ವೃಂದದ ವೈದ್ಯರು, ಅಧಿಕಾರಿ-ನೌಕರರು ಕಪ್ಪು ಪಟ್ಟಿ ಧರಿಸಿ ಹೊರರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಿ ತುರ್ತು ಸೇವೆಗಳನ್ನು ಮಾತ್ರ ನಿರ್ವಹಿಸುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಲಾಗುವುದು. ಎರಡನೇ ಹಂತದಲ್ಲಿ ಮಾ 16ರಿಂದ ಬೇಡಿಕೆ ಈಡೇರುವವರೆವಿಗೂ ರಾಜ್ಯದ ಆರೋಗ್ಯ ಇಲಾಖೆಯ ಎಲ್ಲಾ ವೈದ್ಯರು ಅಧಿಕಾರಿ-ನೌಕರರು ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಮುಷ್ಕರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಂತೇಶ್ ಮುದ್ದಜ್ಜಿ ಮಾತನಾಡಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಸಂಘ ಮಾರ್ಚ್ 11 ರಿಂದ ಕೈಗ್ಗೊಳ್ಳಲಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕ ನಮ್ಮ ಜಿಲ್ಲಾ ಸಂಘದ ಪೂರ್ಣ ಪ್ರಮಾಣದ ಬೆಂಬಲವನ್ನು ನೀಡಲಾಗಿದೆ. ರಾಜ್ಯ ಸಂಘವೂ ಸಹಾ ಇವರಿಗೆ ಬೆಂಬಲವನ್ನು ನೀಡಿದ್ದು, ಇದರಂತೆ ರಾಜ್ಯ ಸಂಘದ ನಿರ್ದೆಶನದ ಮೇರೆಗೆ ಜಿಲ್ಲಾ ಸಂಘವೂ ಸಹಾ ತನ್ನ ಬೆಂಬಲವನ್ನು ನೀಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಅಭಿನವ್, ಹೆಚ್.ಬಿ.ಪೂಜಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
