ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಹಬ್ಬ ‘ಇಂಡಿಯನ್ ಪ್ರೀಮಿಯರ್ ಲೀಗ್’ (IPL 2026) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಉದ್ಘಾಟನಾ ಪಂದ್ಯ ನಮ್ಮ ಹೆಮ್ಮೆಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವುದು ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಆದರೆ, ಇದೇ ಉತ್ಸಾಹವನ್ನು ಬಂಡವಾಳವಾಗಿಸಿಕೊಳ್ಳಲು ಸೈಬರ್ ವಂಚಕರು ಹೊಂಚು ಹಾಕುತ್ತಿದ್ದು, ಟಿಕೆಟ್ ಖರೀದಿಸುವ ಮುನ್ನ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಬೆಂಗಳೂರು ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಕಲಿ ಲಿಂಕ್‌ಗಳ ಬಗ್ಗೆ ಇರಲಿ ಕಟ್ಟೆಚ್ಚರ
ಟೂರ್ನಿಯು ಮಾರ್ಚ್ 28ರಿಂದ ಆರಂಭವಾಗಲಿದ್ದು, ತವರಿನ ಪಂದ್ಯಗಳ ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇದನ್ನೇ ಗುರಿಯಾಗಿಸಿಕೊಂಡು ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸಾಪ್/ಟೆಲಿಗ್ರಾಮ್‌ಗಳಲ್ಲಿ ನಕಲಿ ವೆಬ್‌ಸೈಟ್ ಲಿಂಕ್‌ಗಳನ್ನು ಹರಿಬಿಡುತ್ತಿದ್ದಾರೆ. ಕೊನೆ ಕ್ಷಣದ ಆಫರ್ ಅಥವಾ ರಿಯಾಯಿತಿ ದರದ ಟಿಕೆಟ್ ಎಂದು ಬರುವ ಯಾವುದೇ ಸಂದೇಶಗಳನ್ನು ನಂಬಬೇಡಿ.
“ಯಾವುದೇ ಕಾರಣಕ್ಕೂ ಅನಧಿಕೃತ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಹಣ ಕಳೆದುಕೊಳ್ಳಬೇಡಿ. ಕೇವಲ ಅಧಿಕೃತ ಮೂಲಗಳಿಂದಲೇ ಟಿಕೆಟ್ ಖರೀದಿಸಿ. ಕಾಳಸಂತೆಯಲ್ಲಿ (Black market) ಟಿಕೆಟ್ ಮಾರಾಟ ಮಾಡುವುದು ಅಥವಾ ನಕಲಿ ಲಿಂಕ್‌ಗಳ ಮೂಲಕ ವಂಚಿಸುವ ಜಾಲ ಕಂಡುಬಂದರೆ ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿ” ಎಂದು ಬೆಂಗಳೂರು ಈಶಾನ್ಯ ವಿಭಾಗದ ಪೊಲೀಸರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಮನವಿ ಮಾಡಿದ್ದಾರೆ.
ಆರ್‌ಸಿಬಿ ಪಂದ್ಯಗಳ ಟಿಕೆಟ್ ಅನ್ನು ಸುರಕ್ಷಿತವಾಗಿ ಖರೀದಿಸುವುದು ಹೇಗೆ?
ಕ್ರಿಕೆಟ್ ಅಭಿಮಾನಿಗಳು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಮಾದರಿಯಲ್ಲಿ ಅಧಿಕೃತವಾಗಿ ಟಿಕೆಟ್ ಪಡೆಯಬಹುದು:
- ಆನ್‌ಲೈನ್ ಬುಕ್ಕಿಂಗ್: ಟಿಕೆಟ್‌ಗಳನ್ನು ಕೇವಲ ಬುಕ್‌ಮೈಶೋ (BookMyShow), ಡಿಸ್ಟ್ರಿಕ್ಟ್ ಆಪ್ (District App) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಖರೀದಿಸಿ. ಇಲ್ಲಿ ನೀವು ಕ್ರೀಡಾಂಗಣದ ಯಾವ ಸ್ಟ್ಯಾಂಡ್, ಆಸನಗಳ ಲಭ್ಯತೆ ಹಾಗೂ ದರವನ್ನು ಸ್ಪಷ್ಟವಾಗಿ ಪರಿಶೀಲಿಸಬಹುದು. ಯುಪಿಐ (UPI), ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಸುರಕ್ಷಿತವಾಗಿ ಹಣ ಪಾವತಿಸಬಹುದು. ಖರೀದಿಸಿದ ಬಳಿಕ ಟಿಕೆಟ್ ದೃಢೀಕರಣದ ಅಧಿಕೃತ ಇಮೇಲ್ ಮತ್ತು ಎಸ್‌ಎಂಎಸ್ ನಿಮ್ಮ ಮೊಬೈಲ್‌ಗೆ ಬರಲಿದೆ.
- ಆಫ್‌ಲೈನ್ ಕೌಂಟರ್: ಆನ್‌ಲೈನ್‌ನಲ್ಲಿ ಟಿಕೆಟ್ ಪಡೆಯಲಾಗದವರು ಪಂದ್ಯ ನಡೆಯುವ ಒಂದು ಅಥವಾ ಎರಡು ದಿನಗಳ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂನ ಅಧಿಕೃತ ಕೌಂಟರ್‌ಗಳಿಗೆ ಭೇಟಿ ನೀಡಿ ಟಿಕೆಟ್ ಖರೀದಿಸಬಹುದು. ಇಲ್ಲಿ ನೀವು ನಗದು (Cash) ಅಥವಾ ಯುಪಿಐ ಮೂಲಕ ನೇರವಾಗಿ ಹಣ ಪಾವತಿಸಿ ಟಿಕೆಟ್ ಪಡೆಯಬಹುದಾಗಿದೆ.
ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ!
ಪಂದ್ಯದ ದಿನ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಹಾಗೂ ಪರಿಸರ ಸ್ನೇಹಿ ಪ್ರಯಾಣವನ್ನು ಪ್ರೋತ್ಸಾಹಿಸಲು ಅಭಿಮಾನಿಗಳಿಗೆ ಅದ್ಭುತ ಅವಕಾಶವೊಂದನ್ನು ನೀಡಲಾಗಿದೆ. ಆರ್‌ಸಿಬಿ ಪಂದ್ಯದ ಅಧಿಕೃತ ಟಿಕೆಟ್ ಹೊಂದಿರುವವರು ಪಂದ್ಯದ ದಿನದಂದು ನಮ್ಮ ಮೆಟ್ರೋದಲ್ಲಿ (Namma Metro) ಉಚಿತವಾಗಿ ಪ್ರಯಾಣಿಸಬಹುದು ಎಂದು ಆರ್‌ಸಿಬಿ ಫ್ರಾಂಚೈಸಿ ತಿಳಿಸಿದೆ.
18 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭ
2008ರ ಚೊಚ್ಚಲ ಐಪಿಎಲ್ ಆವೃತ್ತಿಯ ಉದ್ಘಾಟನಾ ಪಂದ್ಯಕ್ಕೆ ಬೆಂಗಳೂರು ಸಾಕ್ಷಿಯಾಗಿತ್ತು. ಇದೀಗ ಬರೋಬ್ಬರಿ 18 ವರ್ಷಗಳ ಸುದೀರ್ಘ ಅಂತರದ ನಂತರ (2026) ಮತ್ತೆ ಉದ್ಘಾಟನಾ ಪಂದ್ಯದ ಆತಿಥ್ಯ ವಹಿಸುವ ಅವಕಾಶ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಒಲಿದುಬಂದಿದೆ. (2014 ಮತ್ತು 2016ರಲ್ಲಿ ಇಲ್ಲಿ ಫೈನಲ್ ಪಂದ್ಯಗಳು ನಡೆದಿದ್ದವು). ಆದರೆ, ಮಾರ್ಚ್ 28ರಂದು ನಡೆಯಲಿರುವ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಈ ಹೈ-ವೋಲ್ಟೇಜ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದ್ದು, ಅಭಿಮಾನಿಗಳಲ್ಲಿ ಕೊಂಚ ಆತಂಕ ಮೂಡಿಸಿದೆ.
ಆರ್‌ಸಿಬಿ ತಂಡದ ಆರಂಭಿಕ ಪಂದ್ಯಗಳ ವೇಳಾಪಟ್ಟಿ:
- ಮಾರ್ಚ್ 28: ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್ (ಬೆಂಗಳೂರು, ಸಂಜೆ 7.30ಕ್ಕೆ)
- ಏಪ್ರಿಲ್ 5: ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ (ಬೆಂಗಳೂರು, ಸಂಜೆ 7.30ಕ್ಕೆ)
- ಏಪ್ರಿಲ್ 10: ರಾಜಸ್ಥಾನ್ ರಾಯಲ್ಸ್ vs ಆರ್‌ಸಿಬಿ (ಗುವಾಹಟಿ ಸಂಜೆ 7.30)
- ಏಪ್ರಿಲ್12: ಮುಂಬೈvsಆರ್‌ಸಿಬಿ (ಮುಂಬೈ ಸಂಜೆ 7.30)