ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮಾ. 22
ಶ್ರೀಮದ್ ಉಜ್ಜಯನೀ ಸದ್ಧರ್ಮ ಸಿಂಹಾಸನಾದೀಶ್ವರ ಶ್ರೀ 1008 ಜಗದ್ಗುರು ಲಿಂ|| ಮರುಳಾರಾಧ್ಯ ಶಿವಾಚಾರ್ಯ ಮಹಾಭಗವತ್ಪಾದರ 31 ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಮಾ. 23ರ ಸೋಮವಾರ ನಗರದ ರಂಗಯ್ಯನ ಬಾಗಿಲ ಬಳಿಯಲ್ಲಿನ ಶ್ರೀ ಉಜ್ಜಯಿನಿ ಮಠದಲ್ಲಿ ನಡೆಯಲಿದೆ ಎಂದು ಉಜ್ಜಯಿನಿ ಮಠದ ಅಭೀಷೇಕ ದೇವರು ಹಾಗೂ ಕಾರ್ಯದರ್ಶಿ ಯು.ಎಂ.ಆರ್. ಈಶ್ವರ ಪ್ರಸಾದ್ ತಿಳಿಸಿದ್ದಾರೆ.
ಶ್ರೀಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಮಾ.23ರ ಬೆಳಿಗ್ಗೆ 5 ಗಂಟೆಯ ಬ್ರಾಹ್ಮೀ ಮಹೋರ್ತದಲ್ಲಿ ವಟುಗಳಿಗೆ ಲಿಂಗದೀಕ್ಷಾ (ಅಯ್ಯಚಾರ) ಕಾರ್ಯಕ್ರಮವೂ ವಿದ್ವಾನ್ ಡಾ.ಶ್ರೀ ವೀರೇಶ್ ಹೀರೇಮಠ ನೇತೃತ್ವದಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಶ್ರೀಮಠದ ಶಕ್ತಿದೇವತೆ ಶ್ರೀ ಚೌಡೇಶ್ವರಿ ಅಮ್ಮನವರ ಅಪ್ಪಣೆಯಂತೆ 10 ಗಂಟೆಗೆ 508 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ನಡೆಸಲಾಗುವುದು. ಅಂದು ಲಿಂ ಜಗದ್ಗುರುಗಳ ಕರ್ತೃಗದ್ದುಗೆಗೆ ಹಾಗೂ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ.
ಮಧ್ಯಾಹ್ನ 12 ಗಂಟೆಗೆ ಜನಜಾಗೃತಿ ಮತ್ತು ಧರ್ಮಸಭಾ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಲಕ್ಷೇಶ್ವರದ ಕರೇವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಮುನ್ನೂರಿನ ಓಂಕಾರೇಶ್ವರ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಉಕ್ಕಡಗಾತ್ರಿಯ ಶ್ರೀ ಹಾಲಶಂಕರ ಶಿವಾಚಾರ್ಯ ಸ್ವಾಮಿಗಳು, ಬೀದರ್ ಜಿಲ್ಲೆಯ ಎಣುಕಲ್ಲುಗುಡ್ಡದ ಶ್ರೀ ವೀರಭದ್ರ ಮಹಾಸ್ವಾಮಿಗಳು, ದೇವದುರ್ಗದ ಶಿಖರಮಠದ ಶ್ರೀ ಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದರಾದ ಗೋವಿಂದ ಕಾರಜೋಳ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಡಿ.ಸುಧಾಕರ್, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಶಾಸಕರಾದ ಕೆ.ಸಿ. ವೀರೇಂದ್ರ (ಪಪ್ಪಿ), ಮಾಜಿ ಶಾಸಕರಾದ ಎಸ್.ಕೆ. ಬಸವರಾಜನ್, ಯುನಿಟಿ ಕಾಂಪ್ಲೆಕ್ಸ್ನ ಡಾ ಜ್ಯೋತಿ ವಿಜಯ ಕುಮಾರ್, ನಗರಸಭೆಯ ಕಛೇರಿ ವ್ಯವಸ್ಥಾಪಕರಾದ ಟಿ. ಜಯಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸುರೇಶ್, ವಕೀಲರಾದ ಡಾ|| ಪಾಲಾಕ್ಷರವರು ಹಾಗೂ ಶ್ರೀಮತಿ ತಿಪ್ಪಕ್ಕ, ನಿವೃತ್ತ ಶಿಕ್ಷಕರಾದ ಆರ್.ಆರ್.ಚಂದ್ರಶೇಖರಪ್ಪ, ಜಂಗಮ ಸಮಾಜ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ ಹಾಗೂ ಉಪನ್ಯಾಸಕರಾದ ನಿರಂಜನ ದೇವರಮನಿ ಆಗಮಿಸಲಿದ್ದಾರೆ.
