ಚಿತ್ರದುರ್ಗ ಮಾ. 27
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾ 25 ರಂದು ನಡೆದ ಬಲಗೈ ಸಮುದಾಯಗಳ ಪ್ರತಿಭಟನೆಯ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ರವರಿಗೆ ಮಾತನಾಡಲು ಬಿಡದೇ ನಮ್ಮ ಸಮುದಾಯದವರೇ ಕಾಂಗ್ರೆಸ್ ಪಕ್ಷದವರು ಅಡ್ಡಿಪಡಿಸಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಎಂದು ಛಲವಾದಿ ಸಮುದಾಯದ ಮುಖಂಡರಾದ ಛಲವಾದಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಲಿತ ಸಮುದಾಯಗಳ ಅಭಿವೃದ್ಧಿಗೆ ನೀಡಬೇಕಾದ ಹಣವನ್ನು ಕಾಂಗ್ರೆಸ್ ಪಕ್ಷ ದುರುಪಯೋಗಪಡಿಸಿಕೊಂಡಿದೆ ಇದರ ಬಗ್ಗೆ ಪೂರ್ಣವಾದ ಮಾಹಿತಿಯನ್ನು ಹೊಂದಿದ್ದ ಛಲವಾದಿ ನಾರಾಯಣಸ್ವಾಮಿರವರು ಸದನದ ಒಳಗೂ ಹಾಗೂ ಹೊರಗೂ ಇದರ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ದಲಿತರಿಗೆ ಮೀಸಲಾಗಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ.
ಈ ವಿಷಯವನ್ನು ಎಲ್ಲಿ ಹೇಳುತ್ತಾರೋ ಎಂದು ಹೆದರಿ ನಮ್ಮ ಸಮುದಾಯದವೇ ಕಾಂಗ್ರೆಸ್ ಮುಖಂಡರು ಛಲವಾದಿ ನಾರಾಯಣ ಸ್ವಾಮಿಯವರು ಮಾತನಾಡದಂತೆ ಅಡ್ಡಿ ಮಾಡಿದ್ದಾರೆ ಇದು ಪೂರ್ವ ನಿಯೋಜಿತವಾದ ಕೃತ್ಯವಾಗಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ಸಮುದಾಯಕ್ಕೆ ಘೋರ ಅನ್ಯಾಯ ಮಾಡಿದೆ.. ಇದರ ಬಗ್ಗೆ ಸಚಿವರಾದ ಹೆಚ್.ಸಿ ಮಹದೇವಪ್ಪರವರು ಸಹ ಧ್ವನಿ ಎತ್ತುತ್ತಿಲ್ಲ.. ಹಾಗೂ ನಮ್ಮ ಸಮುದಾಯದ ಶಾಸಕರುಗಳು ಸಹ ಸುಮ್ಮನಿದ್ದಾರೆ. ನಮ್ಮ ಹಕ್ಕುಗಳನ್ನು ನಾವು ಕೇಳುತ್ತಿದ್ದೇವೆ ಹೊರತು ಬೇರೆಯವರ ಹಕ್ಕುಗಳನ್ನು ಅಲ್ಲ.. ನಾರಾಯಣಸ್ವಾಮಿ ರವರು ವೇದಿಕೆಯಲ್ಲಿ ಮಾತನಾಡಿದ್ದರೆ ಎಲ್ಲಾ ವಿಷಯ ಬಹಿರಂಗವಾಗುತ್ತಿತ್ತು. ಇದು ಆಗಬಾರದೆಂಬ ದುರುದ್ದೇಶದಿಂದ ನಮ್ಮ ಸಮುದಾಯದವರೇ ನಮಗೆ ಅಡ್ಡಿಪಡಿಸಿದ್ದಾರೆ ಎಂದು ತಿಪ್ಪೇಸ್ವಾಮಿ ದೂರಿದ್ದಾರೆ.
ಸದರಿ ಪ್ರತಿಭಟನೆಯಲ್ಲಿ ಇದರ ಬಗ್ಗೆ ಮಾತನಾಡಿದರೆ ನಮ್ಮ ಪಕ್ಷದ ಹಾಗೂ ಸರ್ಕಾರದ ಮರ್ಯಾದೆ ಹೋಗುತ್ತದೆ ಎಂದು ನಮ್ಮ ಸಮುದಾಯದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅವರಿಗೆ ಮಾತನಾಡಲು ಬಿಡದೇ ಅಡ್ಡಿಪಡಿಸಿರುವುದರ ಮೂಲಕ ವೇದಿಕೆಯಲ್ಲಿ ಯಾವುದೇ ರಾಜಕೀಯ ಪಕ್ಷದವರು ಇರಬಾರದೆಂದು ಅವರನ್ನು ಮಾತನಾಡಲು ಬಿಡದೇ ವೇದಿಕೆಯಿಂದ ಕೆಳಗೆ ಇಳಿಯುವಂತೆ ಮಾಡಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ.
ನಮ್ಮ ಏಳಿಗೆಯನ್ನು ನಾವೇ ಬಯಸುತ್ತಿಲ್ಲ. ನಮ್ಮವರೇ ನಮಗೆ ಕಾಲು ಎಳೆಯುತ್ತಿದ್ದಾರೆ.ಇದು ಖಂಡನಾರ್ಹ. ಇದರ ಬಗ್ಗೆ ಸ್ವಾಮೀಜಿಗಳ ಗಮನಕ್ಕೂ ಸಹ ಇದೆ. ಅವರ ಮಧ್ಯಸ್ಥಿಕೆ ಇಲ್ಲಿ ಈ ಸಮಸ್ಯೆ ನಿವಾರಣೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಗೋಷ್ಟಿಯಲ್ಲಿ ಜಗದೀಶ್, ನಟರಾಜ್, ಮಂಜುನಾಥ್ ಉಪಸ್ಥಿತರಿದ್ದರು.