ಇಂದಿನ ಪಂಚಾಂಗ (02-04-2026):
- ಸಂವತ್ಸರ: ಶಾಲಿವಾಹನ ಶಕೆ 1949, ಪರಾಭವ ಸಂವತ್ಸರ
- ಆಯನ ಹಾಗೂ ಋತು: ಉತ್ತರಾಯಣ, ವಸಂತ ಋತು
- ಮಾಸ ಹಾಗೂ ಪಕ್ಷ: ಚೈತ್ರ ಮಾಸ, ಶುಕ್ಲ ಪಕ್ಷ
- ತಿಥಿ ಹಾಗೂ ನಕ್ಷತ್ರ: ಪೂರ್ಣಿಮಾ (ಹುಣ್ಣಿಮೆ), ಹಸ್ತಾ ನಕ್ಷತ್ರ
- ವಾರ ಹಾಗೂ ಯೋಗ: ಗುರುವಾರ, ವೃದ್ಧಿ ಯೋಗ, ಗರಜ ಕರಣ
- ಸೂರ್ಯೋದಯ – ಸೂರ್ಯಾಸ್ತ: ಬೆಳಿಗ್ಗೆ 06:20 ರಿಂದ ಸಂಜೆ 06:35ರ ವರೆಗೆ.
- ರಾಹುಕಾಲ: ಮಧ್ಯಾಹ್ನ 01:59 ರಿಂದ 03:32ರ ವರೆಗೆ.
- ಯಮಗಂಡ ಕಾಲ: ಬೆಳಿಗ್ಗೆ 06:21 ರಿಂದ 07:53ರ ವರೆಗೆ.
- ಗುಳಿಕ ಕಾಲ: ಬೆಳಿಗ್ಗೆ 09:24 ರಿಂದ 10:56ರ ವರೆಗೆ.
ದ್ವಾದಶ ರಾಶಿಗಳ ಇಂದಿನ ಫಲಾಫಲಗಳು:
ಮೇಷ ರಾಶಿ: ಕುಟುಂಬದ ಆಪ್ತ ಸದಸ್ಯರ ಆರೋಗ್ಯದ ಕಡೆ ತುಸು ಗಮನಹರಿಸುವುದು ಒಳಿತು. ವ್ಯಾಪಾರ ವಲಯದಲ್ಲಿ ಸಣ್ಣಪುಟ್ಟ ಏರುಪೇರುಗಳು ಹಾಗೂ ಆತಂಕ ಎದುರಾಗಬಹುದು. ಹೊಸ ವಾಹನ ಖರೀದಿಸುವ ಆಲೋಚನೆಗಳು ತೀವ್ರಗೊಳ್ಳಲಿವೆ. ಮಾತಿನ ಮೇಲೆ ಹಿಡಿತ ಅತ್ಯಗತ್ಯ; ನಿಮ್ಮ ಅಹಂಕಾರದ ವರ್ತನೆಯಿಂದ ಹಿತೈಷಿಗಳನ್ನು ದೂರ ಮಾಡಿಕೊಳ್ಳದಿರಿ. ನಿಮ್ಮ ಸಹಾಯ ಮಾಡುವ ಗುಣವನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ, ತಾಳ್ಮೆ ಇರಲಿ.
ವೃಷಭ ರಾಶಿ: ಬಂಧು-ಮಿತ್ರರ ವಲಯದಲ್ಲಿ ವಿವಾಹದಂತಹ ಶುಭ ಕಾರ್ಯಗಳು ಜರುಗಲಿವೆ. ವಾಸ್ತವ ಏನೆಂದು ತಿಳಿದಿದ್ದರೂ ಮನಸ್ಸಿಗೆ ಸಣ್ಣ ದುಃಖ ಕಾಡಬಹುದು. ಕಚೇರಿಯಲ್ಲಿ ನಿಮ್ಮ ಕಾರ್ಯವೈಖರಿಯ ಬಗ್ಗೆ ಜನರ ದೃಷ್ಟಿಕೋನ ಬದಲಾಗಲಿದೆ. ಜೀವನದಲ್ಲಿ ಹಣವೇ ಎಲ್ಲಸ್ವವಲ್ಲ ಎಂಬುದು ಅರಿವಾಗುತ್ತದೆ. ಮಕ್ಕಳಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿ ಧೈರ್ಯ ತುಂಬುವಿರಿ. ಸಂಗಾತಿಯ ನೆರವಿನಿಂದ ನೂತನ ಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗಲಿದೆ. ಪುಣ್ಯಕ್ಷೇತ್ರ ದರ್ಶನದ ಒಲವು ಮೂಡಲಿದೆ.
ಮಿಥುನ ರಾಶಿ: ಉದ್ಯೋಗ ಅಥವಾ ವ್ಯವಹಾರದ ನಿಮಿತ್ತ ಅನಿರೀಕ್ಷಿತ ಪ್ರಯಾಣ ಮಾಡಬೇಕಾಗಿ ಬರಬಹುದು. ಮನಸ್ಸನ್ನು ಆವರಿಸುವ ನಕಾರಾತ್ಮಕ ಆಲೋಚನೆಗಳನ್ನು ದೂರವಿಡಿ. ಬರುವ ವಿವಾಹ ಪ್ರಸ್ತಾಪಗಳನ್ನು ಒಂದಲ್ಲಾ ಒಂದು ಕಾರಣ ನೀಡಿ ಮುಂದೂಡುವಿರಿ. ನಿಮ್ಮ ಪ್ರಗತಿಗೆ ಹೊಸ ಹಾದಿಗಳು ಗೋಚರಿಸಲಿವೆ. ಸಮಯೋಚಿತ ನಿರ್ಧಾರಗಳಿಂದ ಸಮಾಜದಲ್ಲಿ ಮನ್ನಣೆ ಹಾಗೂ ಗೌರವ ಲಭಿಸಲಿದೆ.
ಕರ್ಕಾಟಕ ರಾಶಿ: ಯಾವುದೋ ಅಹಿತಕರ ಘಟನೆಯ ಮುನ್ಸೂಚನೆಯಿಂದ ಮನಸ್ಸು ವಿಚಲಿತವಾಗಬಹುದು, ಆತಂಕ ಪಡುವ ಅಗತ್ಯವಿಲ್ಲ. ದಾಂಪತ್ಯ ಜೀವನದಲ್ಲಿ ಪ್ರೀತಿ, ಸಾಮರಸ್ಯ ಇಮ್ಮಡಿಯಾಗಲಿದೆ. ಧಾರ್ಮಿಕ ಹಾಗೂ ಪರೋಪಕಾರದ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುವುದು. ಸರ್ಕಾರಿ ಕೆಲಸಗಳಲ್ಲಿ ಅಥವಾ ಹಣಕಾಸಿನ ವಿಚಾರದಲ್ಲಿ ತಾತ್ಕಾಲಿಕ ಅಡೆತಡೆಗಳಾಗಬಹುದು. ಮನೆಯ ಹಿರಿಯರ ಆಶೀರ್ವಾದ ನಿಮಗೆ ಶ್ರೀರಕ್ಷೆಯಾಗಲಿದೆ. ಒಂದೇ ಬಾರಿಗೆ ಹಲವು ಯೋಚನೆಗಳನ್ನು ತಲೆಗೆ ತುಂಬಿಕೊಳ್ಳಬೇಡಿ.
ಸಿಂಹ ರಾಶಿ: ವಿರೋಧಿಗಳ ತಂತ್ರಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಜ್ಜಾಗುವಿರಿ. ನಿಮ್ಮನ್ನು ಟೀಕಿಸುವವರ ಮೇಲೆ ಕೋಪಗೊಳ್ಳುವುದು ಸಹಜ, ಆದರೆ ಕೆಲವೊಮ್ಮೆ ಶತ್ರುಗಳಿಂದಲೂ ಪಾಠ ಕಲಿಯಬಹುದು. ಸಹೋದರರ ನಡುವೆ ವಾತ್ಸಲ್ಯ ವೃದ್ಧಿಯಾಗಲಿದೆ. ವೃತ್ತಿಕ್ಷೇತ್ರದಲ್ಲಿ ದಿಢೀರ್ ಬದಲಾವಣೆಗಳಾಗಬಹುದು. ಆರ್ಥಿಕ ವಿಚಾರವಾಗಿ ಪತಿ-ಪತ್ನಿಯ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಆದಾಯ ಹೆಚ್ಚಿಸಲು ಹೊಸ ಮಾರ್ಗಗಳನ್ನು ಹುಡುಕುವಿರಿ.
ಕನ್ಯಾ ರಾಶಿ: ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಕೊಂಚ ಹಿನ್ನಡೆಯಾಗುವುದು ಬೇಸರ ತರಿಸಬಹುದು. ಇಂದು ತಾಯಿಯ ವಾತ್ಸಲ್ಯ ಹಾಗೂ ಬೆಂಬಲ ನಿಮಗೆ ಹೆಚ್ಚು ಸಿಗಲಿದೆ. ವ್ಯಾಪಾರದಲ್ಲಿ ವಿದೇಶಿ ಸಂಪರ್ಕಗಳು ಅಥವಾ ಹೊಸ ಒಪ್ಪಂದಗಳು ಒದಗಿಬರುವ ಸಾಧ್ಯತೆ ಇದೆ. ಕೋಪದ ಬದಲು ತಾಳ್ಮೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ನಿಮ್ಮ ನಡವಳಿಕೆ ಹಿರಿಯರ ಚರ್ಚೆಗೆ ಗ್ರಾಸವಾಗಬಹುದು. ಹೊಸ ವಿಷಯಗಳನ್ನು ಕಲಿಯುವ ಕಡೆ ಹೆಚ್ಚು ಗಮನ ಹರಿಸುವುದು ಒಳಿತು.
ತುಲಾ ರಾಶಿ: ಜೀವನಸಂಗಾತಿಯ ಮೇಲಿನ ಜವಾಬ್ದಾರಿಗಳನ್ನು ಹಂಚಿಕೊಂಡು ಅವರ ಮಾನಸಿಕ ಒತ್ತಡ ಕಡಿಮೆ ಮಾಡುವಿರಿ. ವ್ಯವಹಾರದ ಕಾರಣಕ್ಕಾಗಿ ಪ್ರಯಾಣವಿರುತ್ತದೆ. ಅನಗತ್ಯ ಒತ್ತಡಗಳನ್ನು ಮೈಮೇಲೆ ಎಳೆದುಕೊಳ್ಳದಿರಿ. ಆರ್ಥಿಕ ಅಭಿವೃದ್ಧಿಗೆ ಹೊಸ ಅವಕಾಶಗಳು ಒದಗಿಬರಲಿವೆ. ಸ್ಥಿರಾಸ್ತಿ ಅಥವಾ ನಿವೇಶನ ಖರೀದಿಯ ಕನಸು ನನಸಾಗುವ ಕಾಲವಿದು. ವೃತ್ತಿಕ್ಷೇತ್ರದಲ್ಲಿ ಕೊಂಚ ಅಭದ್ರತೆ ಕಾಡಬಹುದು, ಎಚ್ಚರಿಕೆಯ ಹೆಜ್ಜೆ ಇಡಿ.
ವೃಶ್ಚಿಕ ರಾಶಿ: ಮನೆ ನಿರ್ಮಾಣ ಅಥವಾ ನವೀಕರಣ ಕಾರ್ಯಗಳಿಂದ ದೈಹಿಕ ಆಯಾಸವಾಗಬಹುದು. ದಿನದಾಂತ್ಯಕ್ಕೆ ಸಂತಸದ ಸುದ್ದಿಯೊಂದು ಕಿವಿಗೆ ಬೀಳಲಿದೆ. ಇತರರ ಮನವೊಲಿಸಿ ನಿಮ್ಮ ಕಾರ್ಯಗಳನ್ನು ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಹಳೆಯ ಸ್ನೇಹಿತರ ಭೇಟಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಮನೆಯಲ್ಲಿ ಹಬ್ಬದ ವಾತಾವರಣ ನೆಲೆಸಲಿದ್ದು, ಸಹೋದರಿಯರ ಭೇಟಿ ಖುಷಿ ನೀಡಲಿದೆ. ಪ್ರಭಾವಿ ವ್ಯಕ್ತಿಗಳೊಂದಿಗಿನ ಒಡನಾಟ ಕೊಂಚ ಕಡಿಮೆಯಾಗಬಹುದು.
ಧನು ರಾಶಿ: ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ನಿರೀಕ್ಷಿತ ಆರ್ಥಿಕ ಲಾಭ ಸಿಗಲಿದೆ. ನೀವು ತೆಗೆದುಕೊಳ್ಳುವ ಕೆಲವು ದಿಟ್ಟ ನಿರ್ಧಾರಗಳು ಯಶಸ್ಸು ತಂದುಕೊಡಲಿವೆ. ಕೌಟುಂಬಿಕ ಜೀವನದಲ್ಲಿ ಮಧುರ ಬಾಂಧವ್ಯ ನೆಲೆಸಲಿದೆ. ಉಷ್ಣ ಸಂಬಂಧಿ ಅನಾರೋಗ್ಯ ಕಾಡುವ ಸಾಧ್ಯತೆ ಇದೆ, ಜಾಗೃತಿ ವಹಿಸಿ. ಪೋಷಕರ ಸಂಪೂರ್ಣ ಬೆಂಬಲ ನಿಮಗಿರುತ್ತದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ. ತಂತ್ರಜ್ಞಾನದ ಬಗ್ಗೆ ಇನ್ನಷ್ಟು ಅರಿವು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.
ಮಕರ ರಾಶಿ: ಇಂದು ಸಮಾಜದಲ್ಲಿ ಮತ್ತು ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ. ನಿಮ್ಮ ದಿಟ್ಟ ನುಡಿಗಳು ವಿರೋಧಿಗಳ ಬಲವನ್ನು ಕುಗ್ಗಿಸಲಿವೆ. ಕುಟುಂಬದಲ್ಲಿ ನಿಮಗೆ ವಿಶೇಷ ಗೌರವ ಮತ್ತು ಮನ್ನಣೆ ಲಭಿಸುತ್ತದೆ. ಮೇಲಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿಯುವುದು ಬೇಡ. ಉದ್ಯೋಗ ಬದಲಾವಣೆಯ ಚಿಂತನೆಗಳು ಮನಸ್ಸಿನಲ್ಲಿ ಸುಳಿಯಬಹುದು. ಎದುರಾಗುವ ಆರ್ಥಿಕ ಸವಾಲುಗಳನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳುವಿರಿ.
ಕುಂಭ ರಾಶಿ: ಕಾರ್ಯಕ್ಷೇತ್ರದಲ್ಲಿ ಕೊಂಚ ಬಿಗುವಿನ ವಾತಾವರಣ ಇರಬಹುದು. ವಿರುದ್ಧ ಲಿಂಗದವರಿಂದ ಸೂಕ್ತ ಬೆಂಬಲ ಹಾಗೂ ಸಹಾಯ ದೊರೆಯಲಿದೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಇಂದು ಮಹತ್ವದ ದಿನ. ನಿಮ್ಮ ಚಂಚಲ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಿ, ಇಲ್ಲವಾದರೆ ಸೂಕ್ತ ನಿರ್ಧಾರ ಕೈಗೊಳ್ಳುವುದು ಕಷ್ಟವಾಗಬಹುದು. ಕಚೇರಿಯಲ್ಲಿನ ಸಣ್ಣಪುಟ್ಟ ಅಸಮಾಧಾನಗಳನ್ನು ಬದಿಗೊತ್ತಿ ಕೆಲಸದ ಕಡೆ ಗಮನಹರಿಸಿ. ನಿಮ್ಮ ಸಾಧನೆಯಿಂದ ಕುಟುಂಬದ ಕೀರ್ತಿ ಹೆಚ್ಚಲಿದೆ.
ಮೀನ ರಾಶಿ: ಆಪ್ತರೊಡನೆ ಸಂತಸದಿಂದ ಕಾಲ ಕಳೆಯುವಿರಿ, ಖರ್ಚು-ವೆಚ್ಚಗಳು ಕೊಂಚ ಹೆಚ್ಚಾಗಬಹುದು. ಆಸ್ತಿ-ಪಾಸ್ತಿ ವಿಚಾರದಲ್ಲಿ ಸಣ್ಣಪುಟ್ಟ ತೊಡಕುಗಳು ಎದುರಾಗಬಹುದು. ಮಕ್ಕಳ ಮೇಲೆ ಅತಿಯಾದ ವ್ಯಾಮೋಹಕ್ಕಿಂತ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ. ಶೈಕ್ಷಣಿಕ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ದಿನದ ಒತ್ತಡಗಳಿಂದ ರಿಲೀಫ್ ಪಡೆಯಲು ಪ್ರಶಾಂತ ಸ್ಥಳಗಳಿಗೆ ಭೇಟಿ ನೀಡುವಿರಿ. ಅಪರಿಚಿತರೊಂದಿಗೆ ಮಾತನಾಡುವಾಗ ಸಂಯಮ ಇರಲಿ.

