ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ.೦7
ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತ ಕರ್ನಾಟಕ ವಿರೋಧಿ ಧೋರಣೆ ತಳೆದಿರುವ ರಾಜ್ಯಪಾಲ ತಾವರ್ ಚಂದ್ ಗೆಹೋಟ್ ಅವರನ್ನು ಕೇಂದ್ರ ಸರ್ಕಾರ ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಗರದಲ್ಲಿ ಪ್ರತಿಭಟನೆಯನ್ನು ನಡೆಸಿ ಒತ್ತಾಯಿಸಿದೆ.
ಚಿತ್ರದುರ್ಗ ನಗರದ ಸಂತೇಪೇಟೆ ವೃತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ದಾರಿಯುದ್ದಕ್ಕೂ ರಾಜ್ಯಪಾಲರ ವಿರುದ್ದ ಘೋಷಣೆಯನ್ನು ಕೂಗಲಾಯಿತು. ರಾಜ್ಯ ಸರ್ಕಾರವು ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಹಿಂದೆ ಕರ್ನಾಟಕದಲ್ಲಿ ಹಿಂದಿ ಹೇರಿಕೆಯನ್ನು ಶಾಶ್ವತವಾಗಿ ನಡೆಸುವ ಹುನ್ನಾರವಿದೆ. ರಾಜ್ಯಪಾಲರು ತಮ್ಮ ಕಾರ್ಯವ್ಯಪ್ತಿಯನ್ನು ಕನ್ನಡಿಗರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರು ಕರ್ನಾಟಕದಲ್ಲಿ ಒಂದೇ ಒಂದು ನಿಮಿಷವೂ ರಾಜ್ಯಪಾಲರಾಗಿ ಉಳಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ರಾಜ್ಯಪಾಲರು ರಾಜ್ಯದ ದಿನನಿತ್ಯದ ಆಡಳಿತದಲ್ಲಿ ಮೂಗು ತೂರಿಸುವುದು ಅತ್ಯಂತ ಅಕ್ಷೇಪಾರ್ಹವಾದ ಬೆಳವಣಿಗೆಯಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರವನ್ನು ಕರ್ನಾಟಕದ ಜನತೆ ಆಯ್ಕೆ ಮಾಡಿದ್ದಾರೆ. ನಾಡಿನ ಜನರ ಬೇಕು, ಬೇಡಗಳನ್ನು ರಾಜ್ಯ ಸರ್ಕಾರ ತೀರ್ಮಾನಿಸುತ್ತದೆ. ಹೀಗಿರುವಾಗ ಸರ್ಕಾರದ ಮುಖ್ಯಸ್ಥರಾಗಿ ಸರ್ಕಾರದ ನಾಡಪರ . ಕಾಳಜಿಯ ನಿರ್ಧಾರಗಳನ್ನು ಬೆಂಬಲಿಸುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ ಅವರು ಹಿಂದಿ ಮಾಫಿಯಾ ಪರವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ತೋರುತ್ತದೆ. ಹೀಗಾಗಿ ಅವರನ್ನು ಕೇಂದ್ರ ಸರ್ಕಾರ ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಲಾಯಿತು.
ಕರ್ನಾಟಕಕ್ಕೆ ವಲಸೆ ಬರುತ್ತಿರುವ ಹಿಂದಿಭಾಷಿಕರಿಗಾಗಿ ’ಸುರಕ್ಷಿತ ಸ್ವರ್ಗ’ವನ್ನಾಗಿಸುವ ದೂರಗಾಮಿ ಉದ್ದೇಶಗಳು ಹಿಂದಿ ಮಾಫಿಯಾಗೆ ಇದೆ. ಅದರ ಭಾಗವಾಗಿಯೇ ರಾಜ್ಯಪಾಲರು ಈ ಪತ್ರ ಬರೆದಿದ್ದಾರೆ ಎಂಬುದು ಸ್ಪಷ್ಟ. ಕರ್ನಾಟಕದ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ತೀರ್ಮಾನಿಸುತ್ತದೆ. ರಾಜ್ಯ ಸರ್ಕಾರವನ್ನು ಇದಕ್ಕಾಗಿಯೇ ನಾವು ಆಯ್ಕೆ ಮಾಡಿ ಕಳಿಸಿದ್ದೇವೆ. ಇದನ್ನು ಪ್ರಶ್ನಿಸಲು ರಾಜ್ಯಪಾಲರು ಯಾರು? ಅವರಿಗೆ ಸಂವಿಧಾನ ಈ ಅವಕಾಶ ನೀಡಿಲ್ಲ. ಹಿಂದಿ ಮಾಫಿಯಾ ಎಷ್ಟು ಬಲಶಾಲಿಯಾಗಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ. ಕನ್ನಡಿಗರ ಹಿತದೃಷ್ಟಿಗೆ ವಿರುದ್ಧವಾಗಿ ಯಾರೇ ಎನೇ ಹೇಳಿದರೂ ಅದನ್ನು ರಾಜ್ಯ ಸರ್ಕಾರ ಪರಿಗಣಿಸಬೇಕಿಲ್ಲ, ನಾವು ಹಿಂದಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿದವು. ಈಗ ಹಿಂದಿ ಸಾಮ್ರಾಜ್ಯಶಾಹಿ ನಮ್ಮನ್ನು ಆಳಲು ಯತ್ನಿಸುತ್ತಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ನಮ್ಮ ಪ್ರಾಣ ಹೋದರೂ ನಮ್ಮ ನೆಲದ ಆಸ್ಮಿತೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ಕರವೇ ತೀರ್ಮಾನ ಮಾಡಿದೆ. ರಾಜ್ಯಪಾಲ ಗೆಹೋಟ್ ಹಿಂದಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಲ್ಲೆಲ್ಲಾ ತೃತೀಯ ಭಾಷೆಯಾಗಿ ಕನ್ನಡ ಕಲಿಸಲು ತಾಕೀತು ಮಾಡಲಿ ಅಷ್ಟೇಕೆ ಅವರ ಸ್ವಂತ ರಾಜ್ಯವಾದ ಮಧ್ಯಪ್ರದೇಶದಲ್ಲಿ ಈಗಲೂ ಎರಡು ಭಾಷೆಗಳನ್ನು ಕಲಿಸಲಾಗುತ್ತದೆ. ಮೂರನೇ ಭಾಷೆಯನ್ನಾಗಿ ಕಡ್ಡಾಯವಾಗಿ ಕನ್ನಡ ಕಲಿಸುವಂತೆ ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಲಿ, ಅದು ಸಾಧ್ಯವಿಲ್ಲದಿದ್ದರೆ ಕನ್ನಡಿಗರ ಮೇಲೆ ಯಾಕೆ ಹಿಂದಿ ಹೇರಲು ಯತ್ನಿಸುತ್ತಾರೆ. ಇಂಥ ನಾಡದ್ರೋಹಿ ರಾಜ್ಯಪಾಲ ಕರ್ನಾಟಕದಲ್ಲಿ ಇರಲು ಯತ್ತಿಸುತ್ತಾರೆ. ಕೇಂದ್ರ ಸರ್ಕಾರ ಹಿಂದಕ್ಕೆ ಕರೆಹಿಸಿಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಈ ಪ್ರತಿಭಟನೆಯ ನೇತೃತ್ವವನ್ನು ಕರವೇ ಜಿಲ್ಲಾಧ್ಯಕ್ಷ ಟಿ.ರಮೇಶ್ ವಹಿಸಿದ್ದರು, ಇವರೊಂದಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಎಂ.ವಿಜಯಕುಮಾರ್, ತಾಲ್ಲೂಕು ಅಧ್ಯಕ್ಷ ನೀಲಕಂಠ, ಯುವ ಘಟಕದ ಅಧ್ಯಕ್ಷ ಘನಶಾಮು, ಜಿಲ್ಲಾ ಸಂಚಾಲಕ ಪ್ರಸಾದ್ ಮಲ್ಲ, ಹಿರಿಯೂರು ತಾಲ್ಲೂಕು ಅಧ್ಯಕ್ಷ ರಾಮಕೃಷ್ಣಪ್ಪ, ಚಳ್ಳಕೆರೆ ಅಧ್ಯಕ್ಷ ವೆಂಕಟೇಶ್ ಹೊಳಲ್ಕೆರೆ ಆಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ದಾದಪೀರ್, ತಾ.ಗೌರವಾಧ್ಯಕ್ಷ ಬಸವರಾಜು, ಹಿರಿಯೂರು ನಗರಾಧ್ಯಕ್ಷ ಜಾಕೀರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಚಂಧ್ರಕಲಾ, ಸಂಘಟನಾ ಕಾರ್ಯದರ್ಶಿ ಮಂಜುಳ ಜಯಲಕ್ಷ್ಮೀ, ಸೇರಿದಂತೆ ಇತರರು ಭಾಗವಹಿಸಿದ್ದರು.

