ಐಪಿಎಲ್ 2026: ವೈಭವ್-ಜುರೇಲ್ ಸ್ಫೋಟಕ ಬ್ಯಾಟಿಂಗ್; ಆರ್‌ಸಿಬಿಗೆ ಮೊದಲ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್!

11 ಏಪ್ರಿಲ್: ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ (IPL 2026) 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ರಾಜಸ್ಥಾನ್ ಟೂರ್ನಿಯಲ್ಲಿ ಸತತ 4ನೇ ಜಯ ದಾಖಲಿಸಿ ಮುನ್ನುಗ್ಗುತ್ತಿದ್ದರೆ, ಆರ್‌ಸಿಬಿ ತನ್ನ ಮೊದಲ ಸೋಲನ್ನು ಎದುರಿಸಿದೆ.

ವೈಭವ್ ಸೂರ್ಯವಂಶಿ ಹಾಗೂ ಧೃವ್ ಜುರೇಲ್ ಅವರ ಸಿಡಿಲಮರಿ ಬ್ಯಾಟಿಂಗ್ ರಾಜಸ್ಥಾನ್ ತಂಡದ ಗೆಲುವನ್ನು ಸುಲಭಗೊಳಿಸಿತು.

ಬೃಹತ್ ಮೊತ್ತ ಕಲೆಹಾಕಿದ್ದ ಆರ್‌ಸಿಬಿ

​ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿಗೆ ಆರಂಭಿಕ ಆಘಾತ ಎದುರಾಯಿತು. ಇನಿಂಗ್ಸ್‌ನ ಮೊದಲ ಎಸೆತದಲ್ಲೇ ವೇಗಿ ಜೋಫ್ರಾ ಆರ್ಚರ್ ಅವರು ಫಿಲ್ ಸಾಲ್ಟ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಅಗ್ರ ಕ್ರಮಾಂಕದ ವೈಫಲ್ಯದ ನಡುವೆಯೂ ತಂಡಕ್ಕೆ ಆಸರೆಯಾದದ್ದು ನಾಯಕ ರಜತ್ ಪಾಟಿದಾರ್ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ.

​ಪಾಟಿದಾರ್ 40 ಎಸೆತಗಳಲ್ಲಿ 63 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರೆ, ಕೊಹ್ಲಿ 16 ಎಸೆತಗಳಲ್ಲೇ 32 ರನ್ ಚಚ್ಚಿದರು. ಅಂತಿಮ ಹಂತದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಕೇವಲ 15 ಎಸೆತಗಳಲ್ಲಿ ಅಜೇಯ 29 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅಂತಿಮವಾಗಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು.

​ರಾಜಸ್ಥಾನ್ ಪರ ಕರಾರುವಕ್ಕಾದ ಬೌಲಿಂಗ್ ಪ್ರದರ್ಶಿಸಿದ ಜೋಫ್ರಾ ಆರ್ಚರ್, ರವಿ ಬಿಷ್ಣೋಯ್ ಮತ್ತು ಬ್ರಿಜೇಶ್ ಶರ್ಮಾ ತಲಾ 2 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ ಹಾಗೂ ಸಂದೀಪ್ ಶರ್ಮಾ ತಲಾ 1 ವಿಕೆಟ್ ಪಡೆದು ಮಿಂಚಿದರು.

ರಾಜಸ್ಥಾನ್ ಗೆಲುವಿಗೆ ಆಸರೆಯಾದ ವೈಭವ್-ಜುರೇಲ್ ಜೊತೆಯಾಟ

​202 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ್ ತಂಡ, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ವಿಕೆಟ್ ಬೇಗನೆ ಕಳೆದುಕೊಂಡಿತು. ಆದರೆ, ನಂತರ ಒಂದಾದ ವೈಭವ್ ಸೂರ್ಯವಂಶಿ ಹಾಗೂ ಧೃವ್ ಜುರೇಲ್ ಜೋಡಿ ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿತು.

​ಕೇವಲ 26 ಎಸೆತಗಳನ್ನು ಎದುರಿಸಿದ ವೈಭವ್ 8 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳೊಂದಿಗೆ 78 ರನ್ ಚಚ್ಚಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ 108 ರನ್‌ಗಳ ಅಮೂಲ್ಯ ಜೊತೆಯಾಟವಾಡಿತು. ವೈಭವ್ ನಿರ್ಗಮನದ ಬಳಿಕವೂ ಅಬ್ಬರ ಮುಂದುವರೆಸಿದ ಧೃವ್ ಜುರೇಲ್ 43 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 81 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಅನುಭವಿ ಆಟಗಾರ ರವೀಂದ್ರ ಜಡೇಜಾ (ಅಜೇಯ 24) ಅವರ ಸಾಥ್‌ನೊಂದಿಗೆ ರಾಜಸ್ಥಾನ್ ತಂಡ ಕೇವಲ 18 ಓವರ್‌ಗಳಲ್ಲೇ 4 ವಿಕೆಟ್ ಕಳೆದುಕೊಂಡು ಜಯದ ಕೇಕೆ ಹಾಕಿತು.

Leave a Reply

Your email address will not be published. Required fields are marked *