ರಾಜ್ಯದ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರ ಗಮನಕ್ಕೆ! ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮುಂಬರುವ 2026-27ನೇ ಶೈಕ್ಷಣಿಕ ಸಾಲಿನ ವಾರ್ಷಿಕ ವೇಳಾಪಟ್ಟಿಯನ್ನು (Academic Calendar) ಪ್ರಕಟಿಸಿದೆ. ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮೇ 29 ರಿಂದಲೇ ಹೊಸ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಗರಿಗೆದರಲಿವೆ.
ಈ ಬಾರಿಯ ಶೈಕ್ಷಣಿಕ ವರ್ಷವನ್ನು ಎರಡು ಅವಧಿಗಳಾಗಿ ವಿಂಗಡಿಸಲಾಗಿದ್ದು, ಒಟ್ಟು 245 ಶಾಲಾ ಕರ್ತವ್ಯದ ದಿನಗಳನ್ನು ನಿಗದಿಪಡಿಸಲಾಗಿದೆ. ಸಂಪೂರ್ಣ ವೇಳಾಪಟ್ಟಿ ಮತ್ತು ರಜಾ ದಿನಗಳ ವಿವರ ಈ ಕೆಳಗಿನಂತಿದೆ:
ಶೈಕ್ಷಣಿಕ ವರ್ಷದ ಪ್ರಮುಖ ದಿನಾಂಕಗಳು:
- ಮೊದಲನೇ ಶೈಕ್ಷಣಿಕ ಅವಧಿ: ಮೇ 29, 2026 ರಿಂದ ಅಕ್ಟೋಬರ್ 2, 2026ರವರೆಗೆ
- ದಸರಾ ರಜೆ: ಅಕ್ಟೋಬರ್ 3, 2026 ರಿಂದ ಅಕ್ಟೋಬರ್ 21, 2026ರವರೆಗೆ
- ಎರಡನೇ ಶೈಕ್ಷಣಿಕ ಅವಧಿ: ಅಕ್ಟೋಬರ್ 22, 2026 ರಿಂದ ಏಪ್ರಿಲ್ 10, 2027ರವರೆಗೆ
- ಬೇಸಿಗೆ ರಜೆ ಆರಂಭ: ಏಪ್ರಿಲ್ 11, 2027 ರಿಂದ
ಒಟ್ಟು 365 ದಿನಗಳ ವಿಂಗಡಣೆ ಹೇಗೆ? ವರ್ಷದ 365 ದಿನಗಳಲ್ಲಿ 119 ದಿನಗಳನ್ನು ರಜಾ ದಿನಗಳೆಂದು ಘೋಷಿಸಲಾಗಿದ್ದು, ಉಳಿದ 245 ದಿನಗಳನ್ನು ಶಾಲಾ ಕರ್ತವ್ಯದ ದಿನಗಳಾಗಿ ಪರಿಗಣಿಸಲಾಗಿದೆ. ಈ 245 ದಿನಗಳನ್ನು ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:
- ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ: 181 ದಿನಗಳು
- ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯ: 26 ದಿನಗಳು
- ಪಠ್ಯೇತರ ಚಟುವಟಿಕೆಗಳು: 24 ದಿನಗಳು
- ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ: 10 ದಿನಗಳು
- ಶಾಲಾ ಹಂತದ ಸ್ಥಳೀಯ ರಜೆಗಳು: 4 ದಿನಗಳು
ಶಿಕ್ಷಣ ಇಲಾಖೆಯ ಪ್ರಮುಖ ಸೂಚನೆಗಳು:
- ದಾಖಲಾತಿ ಪ್ರಕ್ರಿಯೆ: ಜೂನ್ 30ರ ಒಳಗೆ ಎಲ್ಲಾ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
- ದಾಖಲಾತಿ ಅಭಿಯಾನ: ಶಾಲೆಯಿಂದ ಹೊರಗುಳಿದಿರುವ 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ, ಅವರನ್ನು ಮರಳಿ ಶಾಲೆಗೆ ಕರೆತರಲು ವಿಶೇಷ ದಾಖಲಾತಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಬೇಕು.
- ಪುಸ್ತಕ ಹಾಗೂ ಸಮವಸ್ತ್ರ ವಿತರಣೆ: 2027ರ ಜೂನ್ ಮೊದಲ ವಾರದಲ್ಲಿಯೇ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಲು ಇಲಾಖೆ ಆದೇಶಿಸಿದೆ.
ರಾಜ್ಯದ ಎಲ್ಲಾ ಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೆ ತರುವ ಉದ್ದೇಶದಿಂದ ಈ ವಾರ್ಷಿಕ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಇಲಾಖೆ ಸೂಚನೆ ನೀಡಿದೆ.


