ಚಿತ್ರದುರ್ಗ ಏ. 23
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಸರಸ್ವತಿ ವಿದ್ಯಾಸಂಸ್ಥೆ (ರಿ), ಸರಸ್ವತಿ ಕಾನೂನು ಮಹಾವಿದ್ಯಾಲಯ, ಚಿತ್ರದುರ್ಗ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಕಳೆದ ಎರಡು ದಿನಗಳಿಂದ ನಗರದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಹೊನಲು ಬೆಳಕಿನ ಪುರುಷರ ಕಬ್ಬಡಿ ಪಂದ್ಯಾವಳಿಗಳು ಮುಕ್ತಾಯಗೊಂಡಿದ್ದು ಇಂದು ಕಾಲೇಜಿನ ಗೋಲ್ಡನ್ ಜುಬ್ಲಿ ಹಾಲ್ ಸಮಾರೋಪ ಮತ್ತು ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಕಾನೂನು ಕಾಲೇಜುಗಳಿಂದ ಸುಮಾರು 30 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಹುಬ್ಬಳ್ಳಿಯ ಜಿ.ಕೆ.ಕಾನೂನು ಕಾಲೇಜು ಪ್ರಥಮ ಸ್ಥಾನ, ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೃಜು ದ್ವಿತೀಯ ಸ್ಥಾನ, ಹುಬ್ಬಳ್ಳಿಯ ಕೆ.ಎಸ್.ಎಲ್.ಯು.ಕಾನೂನು ಕಾಲೇಜು ತೃತೀಯ ಸ್ಥಾನವನ್ನು ಪಡೆದರೆ ಸಿರ್ಸಿಯ ಎಂ.ಇ.ಎಸ್. ಕಾನೂನು ಕಾಲೇಜು ನಾಲ್ಕನೇ ಸ್ಥಾನವನ್ನು ಪಡೆದಿತು. ಇದೇ ಪಂದ್ಯಾವಳಿಯಲ್ಲಿ ಉತ್ತಮ ಆಟಗಾರ ಪ್ರಶಸ್ತಿಯನ್ನು ಮೈಸೂರು ವಿದ್ಯಾವರ್ಧಕ ಕಾನೂನು ಕಾಲೇಜಿನ ಕಾರ್ತಿಕ, ಪಡೆದರೆ ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಹುಬ್ಬಳ್ಳಿಯ ಜಿ.ಕೆ.ಕಾನೂನು ಕಾಲೇಜಿನ ಕಾರ್ತಿಕ ಪಡೆದರೆ ಸವೋತ್ತಮ ಪ್ರಶಸ್ತಿಯನ್ನು ಸಿರ್ಸಿಯ ಎಂ.ಇ.ಎಸ್. ಕಾನೂನು ಕಾಲೇಜಿನ ದರ್ಶನ್ ತಮ್ಮದಾಗಿಸಿ ಕೊಂಡರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯಸಭಾ ಮಾಜಿ ಸದಸ್ಯರು, ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಹೆಚ್. ಹನುಮಂತಪ್ಪ ಮಾತನಾಡಿ, ಮಾನವನ ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಲಿದೆ. ನಮ್ಮ ಕಾಲೇಜಿನಿಂದ ಈ ರೀತಿಯಾದ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಗುತ್ತಿದೆ ಇದಕ್ಕೆ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಉತ್ತಮವಾದ ಸಹಕಾರವನ್ನು ನೀಡುತ್ತಿದೆ, ಕ್ರೀಡೆಯಲ್ಲಿ ಪದಕಗಳನ್ನು ಗೆದ್ದ ಹಾಗೇ ಪಠ್ಯದಲ್ಲಿಯೂ ಸಹಾ ಪದಕಗಳನ್ನು ಗೆಲುವಂತ ವಿದ್ಯಾರ್ಥಿಗಳು ಮುನ್ನೆಡೆಯ ಬೇಕಿದೆ ಇತ್ತೀಚಿನ ದಿನಮಾನದಲ್ಲಿ ಕಾನೂನು ಕಾಲೇಜಿನ ರ್ಯಾಂಕ್‍ಗಳು ಬರೀ ಬೆಂಗಳೂರು ಮೈಸೂರುನತ್ತ ತಿರುಗುತ್ತಿವೆ ಇದನ್ನು ಹೊರತು ಪಡೆಸಿ ಮಧ್ಯ ಕರ್ನಾಟಕದಂತ ನಮ್ಮ ಚಿತ್ರದುರ್ಗಕ್ಕೂ ತರುವಂತ ಕಾರ್ಯವನ್ನು ಮಾಡಬೇಕಿದೆ ಎಂದರು.
ಸರಸ್ವತಿ ವಿದ್ಯಾಸಂಸ್ಥೆ(ರಿ)ಯ ಕಾರ್ಯದರ್ಶಿಗಳು ಹಿರಿಯ ವಕೀಲರಾದ ಶ್ರೀಮತಿ ಡಿ.ಕೆ. ಶೀಲಾ ಮಾತನಾಡಿ, ಮಾನವ ಒತ್ತಡದಿಂದ ಮುಕ್ತರಾಗಲು ಕ್ರೀಡೆ ಸಹಕಾರಿಯಾಗಿದೆ, ತಮ್ಮ ದಿನ ನಿತ್ಯದ ಬದುಕಿನಲ್ಲಿ ವಿವಿಧ ರೀತಿಯ ಒತ್ತಡಗಳನ್ನು ನಾವುಗಳು ಎದುರಿಸಬೇಕಾಗುತ್ತದೆ, ಇವುಗಳನ್ನು ಸರಿಯಾಗಿ ನಿಭಾಯಿಸಲು ಯಾವುದಾದರೊಂದು ಕ್ರೀಡೆಯಲ್ಲಿ ಭಾಗಿಯಾಗಬೇಕಿದೆ ಆಗ ಮಾತ್ರ ಉತ್ತಮವಾಧ ಜೀವನ ಸಾಗಿಸಲು ಸಾಧ್ಯವಿದೆ. ಕಬ್ಬಡಿ ಕ್ರೀಡೆಯೂ ಮಾನವನ ಬುದ್ದಿ ಹಾಗೂ ದೇಹಕ್ಕೆ ಉತ್ತಮವಾದ ವ್ಯಾಯಾಮವನ್ನು ನೀಡುವಂತ ಕ್ರೀಡೆಯಾಗಿದೆ, ಇದರಲ್ಲಿ ಭಾಗವಹಿಸುವವರು ತೀಕ್ಷವಾದ ಕಣ್ಣು, ಚುರುಕಾದ ಬುದ್ದಿ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಂತ ಮನಸ್ಥಿತಿಯನ್ನು ಹೊಂದಿರುತ್ತಾರೆ ಎಂದರು.
ಸರಸ್ವತಿ ವಿದ್ಯಾಸಂಸ್ಥೆ(ರಿ)ಯ ಉಪಾಧ್ಯಕ್ಷರು, ಹಿರಿಯ ವಕೀಲರಾದ ಫಾತ್ಯರಾಜನ್, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಖಾಲಿದ್ ಖಾನ್ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಸರಸ್ವತಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಡಾ. ಎಂ.ಎಸ್. ಸುಧಾದೇವಿ ವಹಿಸಿದ್ದರು. ಸರಸ್ವತಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಶ್ರೀಶೈಲ ಸ್ವಾಗತಿಸಿದರೆ, ಕಬ್ಬಡಿ ಪಂದ್ಯಾವಳಿ ಗಳ ಕುರಿತ ವರದಿ, ವಂದನಾರ್ಪಣೆ, ಕಾರ್ಯಕ್ರಮ ನಿರೂಪಣೆಯನ್ನು ಕಾಲೇಜಿನ ದೈಹಿಕ ನಿರ್ದೆಶಕರಾದ ಪಿಸಿ ಮುರುಗೇಶ್ ನಿರ್ವಹಿಸಿದರು.

