ಚಿತ್ರದುರ್ಗ| ಮೇ 2ರಂದು ಸೋಮನಾಥ ಜ್ಯೋತಿರ್ಲಿಂಗ ಪವಿತ್ರ ಅವಶೇಷಗಳ ದರ್ಶನ: ರುದ್ರಪೂಜೆ, ಸತ್ಸಂಗ ಕಾರ್ಯಕ್ರಮ.

ಚಿತ್ರದುರ್ಗ ಏ. 25

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಮೂಲ ಸೋಮನಾಥ ಜ್ಯೋತಿರ್ಲಿಂಗದ ಅಪರೂಪದ ಪವಿತ್ರ ಅವಶೇಷಗಳನ್ನು ಚಿತ್ರದುರ್ಗಕ್ಕೆ ತರಲಾಗುತ್ತಿದ್ದು, ಶ್ರೀಸೋಮನಾಥ ಜ್ಯೋತಿರ್ಲಿಂಗದ ದರ್ಶನ, ರುದ್ರಪೂಜೆ ಮತ್ತು ಸತ್ಸಂಗ ಕಾರ್ಯಕ್ರಮಗಳು ಮೇ. 2 ರಂದು ಮೆದೆಹಳ್ಳಿರಸ್ತೆಯಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ಟ್ರಸ್ಟ್ ಆವರಣದಲ್ಲಿ ನಡೆಯಲಿದೆ ಎಂದು ಚಿತ್ರದುರ್ಗ ಆರ್ಟ್ ಆಫ್ ಲಿವಿಂಗ್‍ನ ಶ್ವೇಯ ಲಮಾಣಿ ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾವಿರ ವರ್ಷಗಳಿಂದ ಕಣ್ಮರೆಯಾಗಿದೆ ಎಂದು ನಂಬಲಾಗಿದ್ದ ಮೂಲ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳನ್ನು ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ವಿಶೇಷವಾಗಿ ಚಿತ್ರದುರ್ಗಕ್ಕೆ ತರಲಾಗುತ್ತಿರುವ ಈ ದಿವ್ಯ ಮತ್ತು ಶಕ್ತಿಶಾಲಿ ಲಿಂಗಗಳ ದರ್ಶನಕ್ಕಾಗಿ ಸಾವಿರಾರು ಭಕ್ತರು ಕಾಯುತ್ತಿದ್ದಾರೆ. ಮೇ 2ರಶನಿವಾರದಂದು ರಂದು ಬೆಳಿಗ್ಗೆ 7.30 ಇಂದ 12.30 ವರೆಗೆ, ಹಾಗೂ ಸಂಜೆ 5 ರಿಂದ 8 ಘಂಟೆ ವರೆಗೆ ಈ ಲಿಂಗಗಳನ್ನು ದರ್ಶನಕ್ಕೆ ಇಡಲಾಗುತ್ತದೆ. ಈ ಅಮೂಲ್ಯ ಅವಶೇಷಗಳಿಗೆ ಪ್ರಾಚೀನ ವೇದ ವಿಧಿಯಾದ ರುದ್ರಾಭಿಷೇಕದ ಮೂಲಕ ಪೂಜೆ ನಡೆಯಲಿದೆ ಎಂದರು.

ಮಹಾಂತೇಶ್ ಮಾತನಾಡಿ ಕ್ರಿ.ಶ. 1026 ರಲ್ಲಿ ಘಜ್ನಿಯ ಮಹ್ಮೂದ್ ನಡೆಸಿದ ದಾಳಿಯ ಸಮಯದಲ್ಲಿ ಧ್ವಂಸಗೊಂಡು ಕಣ್ಮರೆಯಾಗಿವೆ ಎಂದು ನಂಬಲಾಗಿದ್ದ ಈ ಅವಶೇಷಗಳು, ಸಾವಿರ ವರ್ಷಗಳ ಕಾಲ ರಹಸ್ಯವಾಗಿ ಸಂರಕ್ಷಿಸಲ್ಪಟ್ಟಿದ್ದವು ಎಂದು ತಿಳಿದುಬಂದಿದೆ. ಈ ಅಂಶಗಳನ್ನು ದಕ್ಷಿಣ ಭಾರತಕ್ಕೆ ತಂದ ದೈವಭಕ್ತ ಅಗ್ನಿಹೋತ್ರಿ ಬ್ರಾಹ್ಮಣರ ವಂಶಸ್ಥರು, ಲಿಂಗಗಳ ಪ್ರಸ್ತುತ ಸಂರಕ್ಷಕರು. ಲಿಂಗಗಳನ್ನು ಮತ್ತೆ ಅದರ ಪೂರ್ಣ ವೈಭವಕ್ಕೆ ಹಿಂದಿರುಗಿಸುವ ಈ ಐತಿಹಾಸಿಕ ಕ್ಷಣವನ್ನು ಮುನ್ನಡೆಸಲು ಅವರು ಜಾಗತಿಕ ಆಧ್ಯಾತ್ಮಿಕ ಗುರು ಮತ್ತು ಮಾನವತಾವಾದಿ ನಾಯಕ ಗುರುದೇವ ಶ್ರೀ ರವಿಶಂಕರ್‍ರನ್ನು ಆಹ್ವಾನಿಸಿದ್ದಾರೆ. ಈ ವಿಶೇಷ ಪೂಜೆಯಲ್ಲಿ ಭಗವಾನ್ ಶಿವನನ್ನು ರುದ್ರ ಸ್ವರೂಪದಲ್ಲಿ ವೇದ ಮಂತ್ರಗಳ ಜಪದೊಂದಿಗೆ ಆರಾಧಿಸಲಾಗುತ್ತದೆ. ನಂತರ ಭಕ್ತಿಭರಿತ ಸತ್ಸಂಗ ಕಾರ್ಯಕ್ರಮವೂ ನಡೆಯಲಿದೆ. ಈ ಪವಿತ್ರ ಅವಶೇಷಗಳು ಪುನಃ ಪ್ರತ್ಯಕ್ಷವಾದ ಕಥೆಯು ಭಾರತ ದೇಶದ ಸಾಂಸ್ಕøತಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತೀಕವಾಗಿದೆ ಎಂದು ತಿಳಿಸಿದರು.

ಮಂಜುನಾಥ್ ಮಾತನಾಡಿ, ಹನ್ನೆರಡು ಜ್ಯೋತಿಲಿರ್ಂಗಗಳಲ್ಲಿ ಮೊದಲನೆಯದಾದ ಸೋಮನಾಥ ದೇವಸ್ಥಾನವು ಅನೇಕ ಬಾರಿ ಧ್ವಂಸವಾದರೂ ಪುನಃ ಪುನಃ ನಿರ್ಮಾಣಗೊಂಡು, ಭಕ್ತಿಯ ಸ್ಥೈರ್ಯದ ಸಂಕೇತವಾಗಿದೆ. ಮೂಲ ಲಿಂಗವು ಭೂಮಿಯಿಂದ ಸುಮಾರು ಮೂರು ಅಡಿ ಎತ್ತರದಲ್ಲಿ ತೇಲುತ್ತಿತ್ತು ಹಾಗೂ ಲಕ್ಷಾಂತರ ಭಕ್ತರು ಶಿವನನ್ನು ಜಪಿಸಿ ಪ್ರಾರ್ಥಿಸುತ್ತಾ, ಇದಕ್ಕೆ ಪೂಜೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತದೆ. 2007ರಲ್ಲಿ ಈ ತುಂಡುಗಳ ಮೇಲೆ ನಡೆಸಿದ ಭೂವೈಜ್ಞಾನಿಕ ಅಧ್ಯಯನದಲ್ಲಿ ಆಶ್ಚರ್ಯಕರ ವಿಷಯವೊಂದು ಕಂಡುಬಂತು. ಸಾಮಾನ್ಯ ಅಯಸ್ಕಾಂತಗಳಿಗಿಂತ ವಿಭಿನ್ನವಾಗಿ, ಈ ಕಲ್ಲಿನ ತುಂಡುಗಳ ಮಧ್ಯಭಾಗದಲ್ಲಿ ಬಲವಾದ ಕಾಂತೀಯ ಕ್ಷೇತ್ರವಿತ್ತು. ಕಲ್ಲುಗಳಲ್ಲಿ ಕಬ್ಬಿಣದ ಪ್ರಮಾಣ ತುಂಬಾ ಕಡಿಮೆ ಇತ್ತು. ಈ ರೀತಿಯ ಕಲ್ಲಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕೆಲವು ಪ್ರಾಚೀನ ಗ್ರಂಥಗಳು ಮತ್ತು ಸಂಶೋಧನಾ ಲೇಖನಗಳು ಇವು ಭೂಮಿಯ ಮೂಲದವುಗಳೇ ಅಲ್ಲ ಎಂಬ ಸೂಚನೆಯನ್ನು ನೀಡುತ್ತವೆ. ಈ ಲಿಂಗಗಳಲ್ಲಿರುವ ಪ್ರಬಲವಾದ ಶಕ್ತಿಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಚಂದ್ರನ ಪ್ರಭಾವ ಮಾನವನ ಮನಸ್ಸಿನ ಮೇಲೆ ಇರುವುದನ್ನು ಧಾರ್ಮಿಕ ಪರಂಪರೆಗಳು ಬಹುಕಾಲದಿಂದ ಗುರುತಿಸಿವೆ. ಅಶಾಂತ ಮನಸ್ಸಿಗೆ ಆಶ್ರಯಸ್ಥಾನವಾಗಿರುವ ಶಿವನು ತನ್ನ ಜಟೆಯಲ್ಲಿ ಅರ್ಧಚಂದ್ರನನ್ನು ಧರಿಸಿರುವುದು, ಭಾವನೆ ಮತ್ತು ಬುದ್ಧಿಯ ಮೇಲಿನ ನಿಯಂತ್ರಣದ ಸಂಕೇತವಾಗಿದೆ ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಈ ಸೋಮನಾಥ ಜ್ಯೋರ್ತಿಲಿಂಗವೂ ಮೇ. 3 ರಂದು ಹೊಸದುರ್ಗದ ಅಶೋಕ ರಂಗ ಮಂದಿರ,

ಮೇ. 4ರ ಬೆಳಿಗ್ಗೆ ಚಳ್ಳಕೆರೆಯ ಬಿ.ಎಂ.ಜಿ. ಹೆಚ್. ಎಸ್.ಶಾಲಾ ಮೈದಾನ,

ಸಂಜೆ 4 ಗಂಟೆಯಿಂದ ನಾಯಕನಹಟ್ಟಿಯ ಹೊರಮಠದಲ್ಲಿ ನಡೆಯಲಿದೆ.

ಗೋಷ್ಟಿಯಲ್ಲಿ ಡಾ.ರವಿಚಂದ್ರ, ರಾಜಶೇಖರ್, ಮಲ್ಲಿಕಾರ್ಜನ್, ಸೇರಿದಂತರ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *