ಚಿತ್ರದುರ್ಗದಲ್ಲಿ ಜನಸೇನಾ ಸದಸ್ಯತ್ವ ಅಭಿಯಾನ ಆರಂಭ: ಕರ್ನಾಟಕದಲ್ಲಿ ಸಂಘಟನೆ ವಿಸ್ತರಣೆಗೆ ನಾಗಬಾಬು ಕರೆ.

ಚಿತ್ರದುರ್ಗ ಏ. 25

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರಾಜಕೀಯವಾಗಿ ಮುನ್ನಡೆಯಲು ಅವಕಾಶವಂಚಿತರಾಗಿರುವ ಹೋರಾಟದ ಮನಸ್ಸಿನವರ ಪರವಾಗಿ ಜನಸೇನಾ ಪಕ್ಷ ಕರ್ನಾಟಕದಲ್ಲಿಯೂ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ ಎಂದು ಆಂಧ್ರಪ್ರದೇಶ ವಿಧಾನಪರಿಷತ್ ಸದಸ್ಯ ನಾಗಬಾಬು ಹೇಳಿದರು.

ನಗರದ ಚಳ್ಳಕೆರೆ ರಸ್ತೆಯ ಎಸ್.ಜಿ. ಕನ್ವೆಂಷನ್ ಹಾಲ್‍ನಲ್ಲಿ ಶನಿವಾರ ನಡೆದ ಜನಸೇನಾ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು. ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷವು ಈಗಾಗಲೇ ಆಂಧ್ರಪ್ರದೇಶದಲ್ಲಿ ತನ್ನದೇ ಆದ ರಾಜಕೀಯ ನೆಲೆಯನ್ನು ನಿರ್ಮಿಸಿಕೊಂಡಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿಸ್ತರಣೆಗೆ ಗುರಿ ಹೊಂದಿದೆ. ಕರ್ನಾಟಕ, ತಮಿಳುನಾಡು, ಕೇರಳ, ಒಡಿಶಾ ಮತ್ತು ಮಹಾರಾಷ್ಟ್ರಗಳಲ್ಲಿ ಪಕ್ಷ ಸಂಘಟನೆ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿಯೂ ಶೀಘ್ರದಲ್ಲೇ ಪಕ್ಷದ ಕಚೇರಿಯನ್ನು ಆರಂಭಿಸಲಾ ಗುವುದು ಎಂದು ತಿಳಿಸಿದರು. ಆಂಧ್ರಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿರುವ ಅನುಭವದಿಂದಾಗಿ, ಕರ್ನಾಟಕದಲ್ಲಿಯೂ ರಾಜಕೀಯ ಚಟುವಟಿಕೆಗಳನ್ನು ಹೆಚ್ಚು ಚುರುಕುಗೊಳಿಸಲು ಯೋಜನೆ ರೂಪಿಸಲಾಗಿದೆ. ಸ್ಥಳೀಯ ನಾಯಕತ್ವವನ್ನು ಬಲಪಡಿಸುವುದರ ಜೊತೆಗೆ, ಯುವಜನರನ್ನು ಸಂಘಟನೆಯೊಳಗೆ ಸೆಳೆಯುವ ಕೆಲಸಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿ ಮುಂದಿನ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ನಾಯಕತ್ವದೊಂದಿಗೆ ಚರ್ಚಿಸಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ತಂತ್ರ ರೂಪಿಸಲಾಗುವುದು ಎಂದು ತಿಳಿಸಿದರು.

ಇತಿಹಾಸದ ನೆನಪನ್ನು ಉಲ್ಲೇಖಿಸಿದ ಅವರು, ಶ್ರೀಕೃಷ್ಣದೇವರಾಯ ಕಾಲದಿಂದಲೇ ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ನಡುವೆ ಸಾಂಸ್ಕೃತಿಕ ಹಾಗೂ ಆರ್ಥಿಕ ನಂಟು ಬೆಳೆದಿದೆ. ಅದೇ ರೀತಿಯಾಗಿ ಇಂದಿನ ರಾಜಕೀಯದಲ್ಲಿಯೂ ಎರಡು ರಾಜ್ಯಗಳ ನಡುವೆ ಸಹಕಾರ ಬೆಳೆಸಲು ಜನಸೇನಾ ಪಕ್ಷ ಪ್ರಯತ್ನಿಸುತ್ತಿದೆ ಎಂದ ಅವರು. ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಮಹತ್ವವನ್ನು ಸ್ಮರಿಸಿದ ಅವರು, ಮದಕರಿನಾಯಕ ಆಡಳಿತ ನಡೆಸಿದ ಈ ಭಾಗದಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿಗೆ ಮುಂದಾಗುತ್ತಿರುವುದು ಗಮನಾರ್ಹವಾಗಿದೆ. ಯುವಕರು, ವಿದ್ಯಾರ್ಥಿಗಳು ಮತ್ತು ಸಮಾನ ಮನಸ್ಕರು ಪಕ್ಷದತ್ತ ಆಕರ್ಷಿತರಾಗುತ್ತಿರುವುದು ಭವಿಷ್ಯದಲ್ಲಿ ಸಂಘಟನೆ ಬಲಪಡಿಸಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು. ಯುವಜನರ ಆಶಯ ಆಕಾಂಕ್ಷೆಗಳಿಗೆ ಸ್ಪಂದಿಸುವುದು ಪಕ್ಷದ ಮುಖ್ಯ ಗುರಿಯಾಗಿದೆ. ಉದ್ಯೋಗ, ಶಿಕ್ಷಣ, ಸಾಮಾಜಿಕ ನ್ಯಾಯ ಸೇರಿದಂತೆ ಮೂಲಭೂತ ವಿಷಯಗಳಲ್ಲಿ ಸ್ಪಷ್ಟ ನೀತಿಗಳನ್ನು ರೂಪಿಸಿ ಜನರಿಗೆ ಪರ್ಯಾಯ ರಾಜಕೀಯ ಒದಗಿಸಲಾಗುವುದು. ಭ್ರಷ್ಟಾಚಾರರಹಿತ ಹಾಗೂ ಪಾರದರ್ಶಕ ಆಡಳಿತ ನೀಡಲು ಪಕ್ಷ ಬದ್ಧವಾಗಿದೆ ಎಂದು ಹೇಳಿ ಕೇಂದ್ರ ರಾಜಕೀಯ ವಿಚಾರಗಳನ್ನೂ ಪ್ರಸ್ತಾಪಿಸಿದ ಅವರು, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡದಿರುವುದು ರಾಜಕೀಯ ದುರುದ್ದೇಶವನ್ನು ತೋರಿಸುತ್ತದೆ ಎಂದು ಆರೋಪಿಸಿದರು. ಇದರಿಂದ ರಾಜಕೀಯ ಪಕ್ಷಗಳಿಗೆ ನೇರ ನಷ್ಟವಿಲ್ಲದಿದ್ದರೂ, ಸಾಮಾನ್ಯ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರು.

ಜನಸೇನಾ ಪಕ್ಷದ ಆಂಧ್ರಪ್ರದೇಶದ ಪ್ರಧಾನ ಕಾರ್ಯದರ್ಶಿ ರಾಂತಲ್ಲೂರಿ, ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಡಿ.ಬಸವರಾಜ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಸದಸ್ಯತ್ವ ಅಭಿಯಾನದಲ್ಲಿ ಯುವಕರು ಭಾಗವಹಿಸಿ ಪಕ್ಷ ಸೇರ್ಪಡೆಯಾಗಿರುವುದು ಕಾರ್ಯಕ್ರಮದ ಪ್ರಮುಖ ವಿಶೇಷವಾಗಿತ್ತು.

Leave a Reply

Your email address will not be published. Required fields are marked *