ಐಪಿಎಲ್ 2026 ಫೈನಲ್: ಎರಡನೇ ಪ್ರಶಸ್ತಿಗಾಗಿ ಆರ್‌ಸಿಬಿ – ಗುಜರಾತ್ ಟೈಟಾನ್ಸ್ ಮಹಾಸಮರ

ಸಮಗ್ರ ಸುದ್ದಿ ಮೇ 31: ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಪಂದ್ಯ ಇಂದು (ಮೇ 31) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜರುಗಲಿದೆ. ಈ ಬಾರಿಯ ಮೆಗಾ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿಯಾಗಲಿದ್ದು, ಎರಡೂ ತಂಡಗಳು ತಮ್ಮ ಎರಡನೇ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯುವ ಕನಸು ಕಾಣುತ್ತಿವೆ.

ಆರ್‌ಸಿಬಿಗೆ ಮರುಕಳಿಸುತ್ತಾ ಇತಿಹಾಸ?

ಕಳೆದ ವರ್ಷ ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ರೋಚಕ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಮಣಿಸಿದ್ದ ಆರ್‌ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈಗ ಅದೇ ಮೈದಾನದಲ್ಲಿ ಮತ್ತೊಮ್ಮೆ ಫೈನಲ್ ಆಡುತ್ತಿರುವ ಬೆಂಗಳೂರು ತಂಡ, ಸತತ ಎರಡನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿದೆ. ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ತಂಡವು ಕಳೆದ ಐದು ವರ್ಷಗಳ ಅವಧಿಯಲ್ಲಿ ಆಡುತ್ತಿರುವ ಮೂರನೇ ಫೈನಲ್ ಇದಾಗಿದ್ದು, ಬಲಿಷ್ಠ ಪ್ರದರ್ಶನ ನೀಡಲು ಸಜ್ಜಾಗಿದೆ.

ಮಳೆಯ ಭೀತಿ: ರಿಸರ್ವ್ ಡೇ ಲಭ್ಯ

ಅಕ್ಯೂವೆದರ್ ವರದಿ ಪ್ರಕಾರ, ಫೈನಲ್ ಪಂದ್ಯ ನಡೆಯುವ ಅಹಮದಾಬಾದ್‌ನಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಈಗಾಗಲೇ ವಾಯುವ್ಯ ಭಾರತದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಬಿರುಗಾಳಿಯಿಂದಾಗಿ ಗುಜರಾತ್ ತಂಡ ಅಹಮದಾಬಾದ್ ತಲುಪುವುದು ಕೊಂಚ ವಿಳಂಬವಾಗಿತ್ತು. ಆದರೂ, ಪಂದ್ಯದ ವೇಳೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಮಳೆಯಿಂದಾಗಿ ಇಂದಿನ ಪಂದ್ಯ ರದ್ದಾದರೆ, ಬಿಸಿಸಿಐ ನಾಳೆಯನ್ನು (ರಿಸರ್ವ್ ಡೇ) ಫೈನಲ್ ಪಂದ್ಯಕ್ಕಾಗಿ ಕಾಯ್ದಿರಿಸಿದೆ.

ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:

  • ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ರಜತ್ ಪಾಟೀದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್ / ವೆಂಕಟೇಶ್ ಅಯ್ಯರ್, ಜಿತೇಶ್ ಶರ್ಮಾ, ರೊಮಾರಿಯೊ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೇಕಬ್ ಡಫಿ, ಜೋಶ್ ಹೇಜಲ್‌ವುಡ್, ರಸಿಕ್ ದಾರ್ ಸಲಾಂ.
  • ಗುಜರಾತ್ ಟೈಟಾನ್ಸ್ (GT): ಶುಭ್​ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್, ರಾಹುಲ್ ತೆವಾಟಿಯಾ, ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಸಾಯಿ ಕಿಶೋರ್, ಕಗಿಸೊ ರಬಾಡ.

Leave a Reply

Your email address will not be published. Required fields are marked *