ರೈಲ್ವೆ ಪ್ರಯಾಣಿಕರ ಗಮನಕ್ಕೆ: ಜೂನ್ 1ರಿಂದ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಭಾರಿ ಬದಲಾವಣೆ, ವೈಟಿಂಗ್ ಲಿಸ್ಟ್ ನಿಯಮಗಳು ಮತ್ತಷ್ಟು ಕಠಿಣ.

ಭಾರತೀಯ ರೈಲ್ವೆ ಇಲಾಖೆಯು ರೈಲುಗಳಲ್ಲಿನ ಅನಗತ್ಯ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಪ್ರಯಾಣಿಕರಿಗೆ ಸುಗಮ ಸಂಚಾರ ಒದಗಿಸುವ ಉದ್ದೇಶದಿಂದ ಜೂನ್ 1, 2026 ರಿಂದ ಹೊಸ ಟಿಕೆಟ್ ನಿಯಮಗಳನ್ನು ಜಾರಿಗೊಳಿಸಿದೆ. ಈ ಹೊಸ ಮಾರ್ಗಸೂಚಿಗಳ ಅನ್ವಯ, ಕನ್ಫರ್ಮ್ ಟಿಕೆಟ್ ಪಡೆಯುವ ಸಾಧ್ಯತೆಗಳು ಹೆಚ್ಚಾಗಲಿದ್ದು, ವೈಟಿಂಗ್ ಲಿಸ್ಟ್ (Waiting List) ಟಿಕೆಟ್ ನಿಯಮಗಳಲ್ಲಿ ಕಟ್ಟುನಿಟ್ಟಿನ ಬದಲಾವಣೆ ತರಲಾಗಿದೆ. ಈ ಹೊಸ ನಿಯಮಗಳ ಸಂಪೂರ್ಣ ವಿವರ ಇಲ್ಲಿದೆ.

ವೈಟಿಂಗ್ ಲಿಸ್ಟ್ ಟಿಕೆಟ್‌ಗಳ ವಿತರಣೆಗೆ ಹೊಸ ಮಿತಿ ಇನ್ನು ಮುಂದೆ ರೈಲ್ವೆ ಇಲಾಖೆಯು ಮಿತಿಯಿಲ್ಲದೆ ವೇಟಿಂಗ್ ಲಿಸ್ಟ್ ಟಿಕೆಟ್‌ಗಳನ್ನು ವಿತರಿಸುವಂತಿಲ್ಲ. ಬೋಗಿಗಳ ಸೀಟು ಸಾಮರ್ಥ್ಯಕ್ಕೆ ಅನುಗುಣವಾಗಿ ಕಟ್ಟುನಿಟ್ಟಿನ ಮಿತಿ ಹೇರಲಾಗಿದೆ:

  • ಸ್ಲೀಪರ್ ಕ್ಲಾಸ್ (Sleeper Class): ಒಟ್ಟು ಸೀಟುಗಳ ಶೇ. 30ರಷ್ಟು ಮಾತ್ರ ವೇಟಿಂಗ್ ಲಿಸ್ಟ್ ಟಿಕೆಟ್ ನೀಡಲಾಗುತ್ತದೆ. ಅಂದರೆ ಒಂದು ರೈಲಿಗೆ ಅಂದಾಜು 150 ರಿಂದ 200 ವೇಟಿಂಗ್ ಟಿಕೆಟ್‌ಗಳು ಮಾತ್ರ ಲಭ್ಯವಿರುತ್ತವೆ.
  • ಎಸಿ ಕೋಚ್ (AC Coach): ಎಸಿ ಬೋಗಿಗಳಲ್ಲೂ ಒಟ್ಟು ಸಾಮರ್ಥ್ಯದ ಗರಿಷ್ಠ ಶೇ. 60ರಷ್ಟು ಮಾತ್ರ ವೇಟಿಂಗ್ ಟಿಕೆಟ್ ನೀಡಲು ಅವಕಾಶ ಕಲ್ಪಿಸಲಾಗಿದೆ.

ವೇಟಿಂಗ್ ಲಿಸ್ಟ್ ಸಂಖ್ಯೆ ಚಿಕ್ಕದಾಗಿರುವುದರಿಂದ, ನೀವು ಟಿಕೆಟ್ ಬುಕ್ ಮಾಡಿದಾಗ ಅದು ಸುಲಭವಾಗಿ ಕನ್ಫರ್ಮ್ (Confirm) ಅಥವಾ ಆರ್‌ಎಸಿ (RAC) ಆಗುವ ಸಾಧ್ಯತೆಗಳು ಮೊದಲಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚಾಗಲಿದೆ.

ಸ್ಲೀಪರ್ ಮತ್ತು ಎಸಿ ಕೋಚ್‌ಗಳಲ್ಲಿ ವೇಟಿಂಗ್ ಟಿಕೆಟ್ ಪ್ರಯಾಣಕ್ಕೆ ಬ್ರೇಕ್ ಹೊಸ ನಿಯಮದ ಅತಿ ಪ್ರಮುಖ ಅಂಶವೆಂದರೆ, ವೇಟಿಂಗ್ ಲಿಸ್ಟ್ ಟಿಕೆಟ್ (ಅದು ಕೌಂಟರ್ ಟಿಕೆಟ್ ಆಗಿರಲಿ ಅಥವಾ ಆನ್‌ಲೈನ್ ಟಿಕೆಟ್ ಆಗಿರಲಿ) ಹೊಂದಿರುವವರು ಯಾವುದೇ ಕಾರಣಕ್ಕೂ ಸ್ಲೀಪರ್ ಅಥವಾ ಎಸಿ ಬೋಗಿಗಳನ್ನು ಪ್ರವೇಶಿಸುವಂತಿಲ್ಲ. ಕನ್ಫರ್ಮ್ ಟಿಕೆಟ್ ಇರುವ ಪ್ರಯಾಣಿಕರಿಗೆ ಆಗುವ ಅನಾನುಕೂಲತೆ ಹಾಗೂ ನೂಕುನುಗ್ಗಲನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ವೇಟಿಂಗ್ ಟಿಕೆಟ್ ಇದ್ದರೆ ಕೇವಲ ‘ಸಾಮಾನ್ಯ ಬೋಗಿಗಳಲ್ಲಿ’ (General Coach) ಮಾತ್ರ ಪ್ರಯಾಣ ಬೆಳೆಸಬೇಕಾಗುತ್ತದೆ.

ನಿಯಮ ಉಲ್ಲಂಘಿಸಿದರೆ ಬೀಳಲಿದೆ ಭಾರಿ ದಂಡ ನಿಯಮ ಮೀರಿ ವೇಟಿಂಗ್ ಟಿಕೆಟ್ ಇಟ್ಟುಕೊಂಡು ಎಸಿ ಅಥವಾ ಸ್ಲೀಪರ್ ಬೋಗಿ ಏರಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಜೊತೆಗೆ ಟಿಟಿಇ (TTE) ಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ:

  • ಸ್ಲೀಪರ್ ಕೋಚ್‌ನಲ್ಲಿ ಸಿಕ್ಕಿಬಿದ್ದರೆ: ಕನಿಷ್ಠ ₹250 ದಂಡ ವಿಧಿಸಿ, ಪ್ರಯಾಣಿಕರನ್ನು ತಕ್ಷಣವೇ ಜನರಲ್ ಬೋಗಿಗೆ ಕಳುಹಿಸಲಾಗುತ್ತದೆ.
  • ಎಸಿ ಕೋಚ್‌ನಲ್ಲಿ ಸಿಕ್ಕಿಬಿದ್ದರೆ: ಕನಿಷ್ಠ ₹440 ದಂಡದ ಜೊತೆಗೆ, ಸಂಪೂರ್ಣ ಪ್ರಯಾಣದ ದರವನ್ನು (Fare) ದಂಡದ ರೂಪದಲ್ಲಿ ವಸೂಲಿ ಮಾಡಲಾಗುತ್ತದೆ.
  • ರೈಲಿನಿಂದ ಕೆಳಗಿಳಿಸುವ ಅಧಿಕಾರ: ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ಅಗತ್ಯಬಿದ್ದರೆ ಮುಂದಿನ ನಿಲ್ದಾಣದಲ್ಲೇ ನಿಯಮ ಉಲ್ಲಂಘಿಸಿದ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಸುವ ಸಂಪೂರ್ಣ ಅಧಿಕಾರವನ್ನು ಟಿಟಿಇಗೆ ನೀಡಲಾಗಿದೆ.

ಒಟ್ಟಾರೆಯಾಗಿ, ರೈಲ್ವೆಯ ಈ ಹೊಸ ಹೆಜ್ಜೆಯಿಂದಾಗಿ ಮುಂಬರುವ ದಿನಗಳಲ್ಲಿ ಕನ್ಫರ್ಮ್ ಟಿಕೆಟ್ ಪಡೆದ ಪ್ರಯಾಣಿಕರು ಯಾವುದೇ ಕೊನೆಯ ಕ್ಷಣದ ಗೊಂದಲಗಳಿಲ್ಲದೆ, ನೆಮ್ಮದಿಯ ಹಾಗೂ ಸುರಕ್ಷಿತ ಪ್ರಯಾಣ ಮಾಡಬಹುದಾಗಿದೆ.

Leave a Reply

Your email address will not be published. Required fields are marked *