ಅಹಮದಾಬಾದ್: ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸೋಲುಂಡು ತೀವ್ರ ನಿರಾಸೆಯಲ್ಲಿದ್ದ ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಭಾನುವಾರ ರಾತ್ರಿ ಮತ್ತೊಂದು ಆಘಾತ ಎದುರಾಗಿದೆ. ಪಂದ್ಯ ಮುಗಿದ ಬಳಿಕ ಆಟಗಾರರು ಪ್ರಯಾಣಿಸುತ್ತಿದ್ದ ಬಸ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಎಲ್ಲಾ ಆಟಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದಿದ್ದು ಹೇಗೆ? ಭಾನುವಾರ ರಾತ್ರಿ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಕದನದಲ್ಲಿ ಗುಜರಾತ್ ತಂಡವು ಆರ್ಸಿಬಿ ವಿರುದ್ಧ 5 ವಿಕೆಟ್ಗಳ ಸೋಲೊಪ್ಪಿಕೊಂಡಿತು. ಪಂದ್ಯದ ನಂತರ ಆಟಗಾರರು, ತರಬೇತುದಾರರು ಮತ್ತು ಸಿಬ್ಬಂದಿ ತಮ್ಮ ನಿಗದಿತ ಹೋಟೆಲ್ಗೆ ಬಸ್ ಮೂಲಕ ಹಿಂದಿರುಗುತ್ತಿದ್ದರು. ಈ ಪ್ರಯಾಣದ ಮಾರ್ಗಮಧ್ಯೆ ಬಸ್ನಲ್ಲಿ ದಿಢೀರನೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ.
ರಸ್ತೆ ಬದಿಯಲ್ಲಿ ಕಾದ ಆಟಗಾರರು ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಎಚ್ಚೆತ್ತ ಚಾಲಕ ಹಾಗೂ ಸಿಬ್ಬಂದಿ, ವಾಹನದಲ್ಲಿದ್ದ ಎಲ್ಲಾ ಆಟಗಾರರನ್ನು ತ್ವರಿತವಾಗಿ ಕೆಳಗಿಳಿಸಿದ್ದಾರೆ. ಸಕಾಲಿಕ ಕಾರ್ಯಾಚರಣೆಯಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಮಟ್ಟದ ಅಪಾಯ ಸಂಭವಿಸಿಲ್ಲ. ಆದರೆ, ಈ ಅನಿರೀಕ್ಷಿತ ಅವಘಡದಿಂದಾಗಿ ಗುಜರಾತ್ ಆಟಗಾರರು ಸುಮಾರು ಒಂದು ಗಂಟೆಗಳ ಕಾಲ ನಡುರಸ್ತೆಯಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ತದನಂತರ, ತಂಡದ ಆಡಳಿತ ಮಂಡಳಿಯು ತಕ್ಷಣವೇ ಬೇರೊಂದು ಪರ್ಯಾಯ ಬಸ್ನ ವ್ಯವಸ್ಥೆ ಮಾಡಿ ಎಲ್ಲರನ್ನೂ ಸುರಕ್ಷಿತವಾಗಿ ಹೋಟೆಲ್ಗೆ ತಲುಪಿಸಿದೆ.
ಫ್ರಾಂಚೈಸಿ ಸ್ಪಷ್ಟನೆ ಫೈನಲ್ ಪಂದ್ಯದ ಸೋಲಿನ ಬೇಸರದಲ್ಲಿದ್ದ ತಂಡಕ್ಕೆ ಈ ಆಕಸ್ಮಿಕ ಘಟನೆ ಮತ್ತಷ್ಟು ಆತಂಕ ತಂದೊಡ್ಡಿತ್ತು. ಆದರೆ, ಘಟನೆಯ ಕುರಿತು ಮಾಹಿತಿ ನೀಡಿರುವ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ, “ತಂಡದ ಎಲ್ಲಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ, ಯಾರೊಬ್ಬರಿಗೂ ಯಾವುದೇ ಅಪಾಯವಾಗಿಲ್ಲ” ಎಂದು ಖಚಿತಪಡಿಸಿ, ಅಭಿಮಾನಿಗಳ ಆತಂಕವನ್ನು ದೂರ ಮಾಡಿದೆ.
ಒಟ್ಟಿನಲ್ಲಿ, ಸತತ ಪರಿಶ್ರಮದಿಂದ ಫೈನಲ್ ಪ್ರವೇಶಿಸಿದ್ದ ಗುಜರಾತ್ ಟೈಟಾನ್ಸ್ಗೆ ಭಾನುವಾರದ ರಾತ್ರಿ ಮರೆಯಲಾಗದ ಕಹಿ ಘಟನೆಗಳಿಗೆ ಸಾಕ್ಷಿಯಾಯಿತು.