ಭೀಮಸಮುದ್ರ, ಜೂ. 06:
ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಇತ್ತೀಚಿನ ದಿನಗಳಲ್ಲಿ ಮಕ್ಕಳು ಟಿವಿ ಮತ್ತು ಮೊಬೈಲ್ಗಳ ಬಳಕೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದು, ಪೋಷಕರು ಮಕ್ಕಳನ್ನು ಅದರಿಂದ ದೂರವಿರಿಸಿ ಶಿಕ್ಷಣ ಹಾಗೂ ಕ್ರೀಡೆ ಮತ್ತು ಕಲಾ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವಂತೆ ಪ್ರೋತ್ಸಾಹಿಸಬೇಕು ಎಂದು ಮಾಜಿ ಸಂಸದರಾದ ಗಾಯತ್ರಿ ಸಿದ್ದೇಶ್ವರ ಕರೆ ನೀಡಿದರು.
ಭೀಮಸಮುದ್ರದಲ್ಲಿ ನಡೆದ ಜನರೇಷನ್ ಅರೇನಾ ಕಲಾ ಸಂಸ್ಥೆಯ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಖಿನ್ನತೆ ಸೇರಿದಂತೆ ಹಲವು ಮಾನಸಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿದ್ದು, ಶಿಕ್ಷಕರು ಮತ್ತು ಪೋಷಕರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಹಿಂದಿನ ಕಾಲದಲ್ಲಿ ಮಕ್ಕಳು ಕುಂಟೆಬಿಲ್ಲೆ, ಚಿನ್ನಿದಾಂಡು, ಕಣ್ಣಮುಚ್ಚಾಲೆ ಮೊದಲಾದ ಆಟಗಳನ್ನು ಆಡುತ್ತಿದ್ದರು. ಇಂತಹ ಆಟಗಳು ಮಕ್ಕಳಲ್ಲಿ ಮಾನಸಿಕ ಚೈತನ್ಯ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸುತ್ತಿದ್ದವು. ಆದರೆ ಇತ್ತೀಚೆಗೆ ಮಕ್ಕಳು ಮೊಬೈಲ್ ಮತ್ತು ಟಿವಿಯತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಗ್ರಾಮದಲ್ಲಿ ಭರತನಾಟ್ಯ ಹಾಗೂ ಕರಾಟೆ ತರಬೇತಿಯನ್ನು ಆರಂಭಿಸಲು ಮುಂದಾಗಿರುವ ಜನರೇಷನ್ ಅರೇನಾ ಕಲಾ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ಅವರು, ಮುಂದಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಇಂತಹ ಕಲಾ ಚಟುವಟಿಕೆಗಳಿಗೆ ಸೇರಿಸಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಬ್ರಹ್ಮಕುಮಾರಿ ರಶ್ಮಿ ಅಕ್ಕ, ಮನುಷ್ಯನ ಮನಸ್ಸು ಶಾಂತವಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಕಲೆಗಳ ಮೂಲಕ ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ ಹಾಗೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸಬಹುದು. ಆದ್ದರಿಂದ ಶಿಕ್ಷಣದ ಜೊತೆಗೆ ಮಕ್ಕಳಿಗೆ ಕಲಾ ಚಟುವಟಿಕೆಗಳಲ್ಲಿಯೂ ಪ್ರೇರಣೆ ನೀಡಬೇಕು ಎಂದು ತಿಳಿಸಿದರು.
ವಕೀಲೆ ವನಿತಾ ಶಂಕ್ರಮೂರ್ತಿ ಮಾತನಾಡಿ, ಭರತನಾಟ್ಯವು ಭಾರತದ ಸಂಸ್ಕೃತಿಯ ಪ್ರತೀಕವಾಗಿದ್ದು, ಇದು ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಧೈರ್ಯ ತುಂಬುವ ಕಲೆಯಾಗಿದೆ. ಕರಾಟೆಯಂತಹ ಸ್ವಯಂರಕ್ಷಣಾ ಕಲೆಗಳು ಇಂದಿನ ಹೆಣ್ಣುಮಕ್ಕಳಿಗೆ ಅತ್ಯವಶ್ಯಕವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಇಂತಹ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಟಿ. ಪುಟ್ಟಪ್ಪ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಬಿ.ಕೆ. ಕಲ್ಲಪ್ಪ (ನಿವೃತ್ತ ಶಿಕ್ಷಕರು), ಪುಷ್ಪಾ ದೇವಕುಮಾರ್, ಬಿ.ಸಿ. ಸರಸ್ವತಿ, ಉಮಾ ಪ್ರಭುದೇವ್, ಅನುಸೂಯ, ಬಿ.ಟಿ. ಸಿದ್ದೇಶ್, ಧನಂಜಯ್, ರಾಜು ನಾಯಕ್, ಸಂಸ್ಥೆಯ ಕಾರ್ಯದರ್ಶಿ ಶಾಂತಾ ಅಶೋಕ್, ಭರತನಾಟ್ಯ ತರಬೇತುದಾರರಾದ ಕುಮಾರಿ ವಿದುಷಿ ಹಂಸಿನಿ ಮೂರ್ತಿ, ಕರಾಟೆ ತರಬೇತುದಾರ ಶಿವಕುಮಾರ್ ಎಸ್.ಪಿ., ಸೇರಿದಂತೆ ಮಹಿಳೆಯರು, ಗ್ರಾಮಸ್ಥರು ಹಾಗೂ ಗಣ್ಯರು ಉಪಸ್ಥಿತರಿದ್ದರು.