ಕರಡು ತಿದ್ದುಪಡಿ ಹಿಂಪಡೆಯದಿದ್ದರೆ ಉಗ್ರ ಹೋರಾಟ: ಪಿಯು ಉಪನ್ಯಾಸಕರ ಸಂಘದ ಎಚ್ಚರಿಕೆ

ಪಿಯು ಉಪನ್ಯಾಸಕರನ್ನು ಪ್ರೌಢಶಾಲೆಗೆ ನಿಯೋಜಿಸುವ ಕ್ರಮ ಖಂಡನೆ: ಜುಲೈನಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ.

ಚಿತ್ರದುರ್ಗ ಜೂ. 25

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಪದವಿ ಪೂರ್ವ ಕಾಲೇಜು ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ನಿಯೋಜಿಸುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜುಲೈ ಮೊದಲ ವಾರ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಪಿ.ಎಂ.ಜಿ. ರಾಜೇಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ಪದವಿ ಪೂರ್ವ ಪ್ರಾಂಶುಪಾಲರ ಸಂಘ ಹಾಗೂ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 9 ಮತ್ತು 10ನೇ ತರಗತಿಗಳಿಗೆ ಪಾಠ ಬೋಧಿಸಲು ಪದವಿ ಪೂರ್ವ ಉಪನ್ಯಾಸಕರನ್ನು ನಿಯೋಜಿ ಸುವ ಉದ್ದೇಶದಿಂದ ಸರ್ಕಾರ ಹೊರಡಿಸಿರುವ ಕರ್ನಾಟಕ ಸಾಮಾನ್ಯ ಸೇವೆಗಳು, ನೇಮಕಾತಿ, ಕರಡು ತಿದ್ದುಪಡಿ, ನಿಯಮಗಳು 2026ನ್ನು ಖಂಡಿಸಿ ಈ ಕರಡು ತಿದ್ದುಪಡಿ ಶೈಕ್ಷಣಿಕ ಹಿತದೃಷ್ಟಿಯಿಂದ ಸಮರ್ಥನೀಯವಲ್ಲ. ಆಡಳಿತಾತ್ಮಕ ವಾಗಿ ಏಕಪಕ್ಷೀಯ ವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020, ರಾಷ್ಟ್ರೀಯ ಶಾಲಾ ಶಿಕ್ಷಣ ಪಠ್ಯಕ್ರಮ ಚೌಕಟ್ಟು 2023ಗಳ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಸಾವಿರಾರು ಉಪನ್ಯಾಸಕರ ಮೇಲೆ ನೇರ ಪರಿಣಾಮ ಬೀರಲಿದ್ದು, ವಿಶ್ವವಿದ್ಯಾಲಯಗಳು, ಉಪನ್ಯಾಸಕರು, ಪ್ರಾಂಶುಪಾಲರು, ವಿದ್ಯಾರ್ಥಿ ಪೋಷಕರು, ಶಿಕ್ಷಣ ತಜ್ಞರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಪ್ರಜಾಸತ್ತಾತ್ಮಕ ಸರ್ಕಾರದ ಲಕ್ಷಣವಲ್ಲ ಎಂದು ಹೇಳಿದರು. ಸರ್ಕಾರ ಹೊರಡಿಸಿರುವ ಕರಡು ನಿಯಮಗಳನ್ನು ತಕ್ಷಣವೆ ಹಿಂಪಡೆಯಬೇಕು. ಪದವಿ ಪೂರ್ವ ಉಪನ್ಯಾಸಕರ ಸ್ವತಂತ್ರ ವೃಂದದ ಅಸ್ತಿತ್ವ ಮತ್ತು ಗೌರವವನ್ನು ರಕ್ಷಿಸಬೇಕು. ಶಿಕ್ಷಣದಲ್ಲಿನ ಶೈಕ್ಷಣಿಕ ಶ್ರೇಷ್ಠತೆ ಮತ್ತು ವಿಷಯ ಪರಿಣತಿಯನ್ನು ಕಾಪಾಡಬೇಕು. ಹಾಗೂ ವಿಷಯವನ್ನು ಸಮಗ್ರವಾಗಿ ಅಧ್ಯಯನ ಮಾಡಲು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಬೇಕೆಂದು ಜಿಲ್ಲಾಧ್ಯಕ್ಷ ಪಿ.ಎಂ.ಜಿ. ರಾಜೇಶ್ ಆಗ್ರಹಿಸಿದರು.

ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜು ಮಾತನಾಡಿ, ಪಿಯುಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಸಮಯ ಸಾಕಾಗುತ್ತಿಲ್ಲ ಅಂತಹುದರಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ಎಂದು ಉಪನ್ಯಾಸಕರಿಗೆ ಹೇಳುವುದು ಸರಿಯಲ್ಲ. ಇದರಿಂದ ಉಪನ್ಯಾಸಕರಿಗೆ ಹಿಂಬಡ್ತಿ ನೀಡಿದಂತೆ ಆಗುತ್ತದೆ ಇದಲ್ಲದೇ 9 ಮತ್ತು 10ನೇ ತರಗತಿಗಳ ಪಠ್ಯಕ್ರಮವೇ ಬೇರೆ. ಪಿಯುಸಿ ಪಠ್ಯಕ್ರಮವೇ ಬೇರೆ. ಇದಲ್ಲದೇ ಇಬ್ಬರಿಗೂ ಬೋಧನೆ ಕ್ರಮ ಬೇರೆ ಬೇರೆಯಾಗಿದೆ.ಇದರಿಂದಾಗಿ ಉಪನ್ಯಾಸಕರು ಒತ್ತಡದಲ್ಲಿ ಕೆಲಸ ಮಾಡುವಂತಹ ಅನಿವಾರ್ಯತೆ ಉಂಟಾಗುತ್ತದೆ ಇದಲ್ಲದೇ ಈ ತಿದ್ದುಪಡಿ ತರುವುದಕ್ಕಿಂತ ಮುಂಚೆ ಯಾವುದೇ ಚರ್ಚೆ ಮಾಡದೇ ಇದನ್ನು ಜಾರಿಗೆ ತರಲು ಮುಂದಾಗಿದೆ.. ಇದರಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಉಪನ್ಯಾಸಕರು ತೊಂದರೆಗೆ ಈಡಾಗುತ್ತಾರೆ. ಇದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಪತ್ರ ಚಳುವಳಿಯನ್ನು ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಸರ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ತೆಗೆಯುವ ಹುನ್ನಾರ ನಡೆಸುತ್ತಿದ್ದು ಇದು ಅದಕ್ಕೆ ಪೀಠಿಕೆ ಆಗಿದೆ.ಈಗಾಗಲೇ ಈ ಇಲಾಖೆಯಿಂದ ಪರೀಕ್ಷಾ ವಿಭಾಗವನ್ನು ತೆಗೆದು ಎಸ್‍ಎಸ್‍ಎಲ್‍ಸಿ ಮಂಡಳಿಗೆ ನೀಡಿದೆ. ಮುಂದಿನ ದಿನಗಳಲ್ಲಿ ನಮ್ಮ ಹುದ್ದೆಗಳಿಗೆ ಕುತ್ತು ಬರುವ ಸಂಭವವಿದೆ.ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವಂತಹ ‘ಡಿ’ ದರ್ಜೆ ಹಾಗೂ ಕ್ಲಾರ್ಕ್ ಹುದ್ದೆಗಳನ್ನು ಭರ್ತಿ ಮಾಡದೆ ಹಲವಾರು ವರ್ಷಗಳಿಂದ ಖಾಲಿ ಬಿಡಲಾಗಿದ್ದು ಈ ಕೆಲಸವನ್ನು ಉಪನ್ಯಾಸ ಕರುಗಳೇ ಮಾಡುವ ಅನಿವಾರ್ಯತೆ ಉಂಟಾಗಿದೆ.ಇದಲ್ಲದೆ ಒಂದೊಂದು ತರಗತಿಗಳಲ್ಲಿ ಕನಿಷ್ಠ 70 ರಿಂದ ಗರಿಷ್ಠ 320 ವಿದ್ಯಾರ್ಥಿಗಳು ಇರುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಇದರಿಂದ ಬೋಧನಾ ಗುಣಮಟ್ಟ ಕುಸಿಯಲಿದ್ದು ಉಪನ್ಯಾಸಕರಿಗೆ ವಿದ್ಯಾರ್ಥಿಗಳ ಕಡೆಗೆ ಗಮನ ನೀಡಲು ಆಗುತ್ತಿಲ್ಲ ಎಂದರು.

ಕರ್ನಾಟಕ ರಾಜ್ಯ ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ವಸಂತ್, ಉಪಾಧ್ಯಕ್ಷರಾದ ಕೇಶವ, ಸಹಾ ಕಾಯದರ್ಶಿ ಜಗದೀಶ್, ಪ್ರಾಂಶುಪಾಲರಾದ ನಾಗರಾಜ್, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಕಾಂತರಾಜ್, ಉಪಾಧ್ಯಕ್ಷರಾದ ವೀಣಾ ಕೆ.ಎಸ್, ಜಂಟಿ ಕಾರ್ಯದರ್ಶಿ ನಾಗರಾಜ್, ಖಂಜಾಚಿ ರಘು, ವಸಂತ್ ಭಾಗವಹಿಸಿದ್ದರು.

ಈ ಕರಡು ಪ್ರಸ್ತಾವನೆ ಶೈಕ್ಷಣಿಕ ಸುಧಾರಣೆಗೆ ಯಾವುದೇ ಗಂಭೀರ ಪರಿಹಾರ ಮಾರ್ಗವಿಲ್ಲ. ಬದಲಿಗೆ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯದ ಪ್ರಪಾತಕ್ಕೆ ತಳ್ಳುವ ಅಧಿಕಾರಿ ಶಾಹಿಗಳ ಆಡಳಿತಾತ್ಮಕ ಪ್ರಯೋಗದ ಹುನ್ನಾರವಾಗಿದೆ . ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ವಿಶೇಷವಾಗಿ ನೇಮಕಗೊಂಡಿರುವ ಉಪನ್ಯಾಸಕರು ಗೆಜೆಟೆಡ್ ಗ್ರೂಪ್ ಬಿ. ಶೈಕ್ಷಣಿಕ ವೃಂದದವರಾಗಿದ್ದಾರೆ. ಅವರನ್ನು 9 ಮತ್ತು 10ನೇ ತರಗತಿ ಬೋಧನೆಗೆ ತೊಡಗಿಸುವುದು ಶೈಕ್ಷಣಿಕ ವಿಶೇಷತೆ ಯನ್ನು ಕುಗ್ಗಿಸುವುದಲ್ಲದೆ ವೃಂದದ ಸ್ವರೂಪ, ಸೇವಾ ಘನತೆ, ಸಾರ್ವಜನಿಕ ಮನ್ನಣೆ ಮತ್ತು ಪದವಿ ಪೂರ್ವ ಶಿಕ್ಷಣದ ಮನ್ನಣೆ ಅಸ್ತಿತ್ವವನ್ನೇ ಹಾಳು ಮಾಡುವ ಕ್ರಮವಾಗಿದೆ.

ಪಿ.ಎಂ.ಜಿ. ರಾಜೇಶ್,

ಕರ್ನಾಟಕ ರಾಜ್ಯ ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *