ನಾಡಹಬ್ಬ ಮೈಸೂರು ದಸರಾ – 2026ರ ಆಚರಣೆಗೆ ರಾಜ್ಯ ಸರ್ಕಾರವು ಭರ್ಜರಿ ಸಿದ್ಧತೆಗಳನ್ನು ಆರಂಭಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಉನ್ನತ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಈ ವರ್ಷದ ದಸರಾ ಮಹೋತ್ಸವದ ಪ್ರಮುಖ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ. ಈ ಬಾರಿ ದಸರಾ ವೇದಿಕೆಯಲ್ಲಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ‘ಕಂಬಳ’ವನ್ನು ಆಯೋಜಿಸುವ ಬಗ್ಗೆಯೂ ಮಹತ್ವದ ಚರ್ಚೆ ನಡೆದಿದ್ದು, ಪ್ರವಾಸಿಗರಿಗೆ ವಿಶೇಷ ಅನುಭವ ನೀಡಲು ಸರ್ಕಾರ ಮುಂದಾಗಿದೆ.
ದಸರಾ ಮಹೋತ್ಸವದ ಪ್ರಮುಖ ಘಟ್ಟಗಳು:
- ಜುಲೈ 26 – ಗಜಪಯಣ ಆರಂಭ: ದಸರಾ ಆನೆಗಳ ಅಧಿಕೃತ ಪ್ರಯಾಣ ಕಾಡಿನಿಂದ ನಾಡಿನತ್ತ ಶುರುವಾಗಲಿದೆ.
- ಆಗಸ್ಟ್ 26 – ಗಜಪಡೆಗೆ ಸ್ವಾಗತ: ಮೈಸೂರು ಅರಮನೆಯ ಪ್ರವೇಶ ದ್ವಾರದಲ್ಲಿ ದಸರಾ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುತ್ತದೆ.
- ಅಕ್ಟೋಬರ್ 11 – ದಸರಾ ಉದ್ಘಾಟನೆ: ಬೆಳಗ್ಗೆ 11.50ಕ್ಕೆ ಚಾಮುಂಡಿಬೆಟ್ಟದಲ್ಲಿ ಶುಭ ಧನುರ್ ಲಗ್ನದಲ್ಲಿ ನಾಡಹಬ್ಬಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
ವಿಜಯದಶಮಿ ಹಾಗೂ ಜಂಬೂಸವಾರಿ ಮುಹೂರ್ತ (ಅಕ್ಟೋಬರ್ 21): ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಅಕ್ಟೋಬರ್ 21ರಂದು ನಡೆಯಲಿದೆ.
- ನಂದಿ ಧ್ವಜ ಪೂಜೆ: ಮಧ್ಯಾಹ್ನ 1.36 ರಿಂದ 1.56ರ ನಡುವಿನ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ನಂದಿ ಧ್ವಜಕ್ಕೆ ಪೂಜೆ ನೆರವೇರಲಿದೆ.
- ಪುಷ್ಪಾರ್ಚನೆ: ಸಂಜೆ 4.10 ರಿಂದ 4.35ರ ಸಮಯದ ಶುಭ ಮೀನ ಲಗ್ನದಲ್ಲಿ, ಚಿನ್ನದ ಅಂಬಾರಿಯಲ್ಲಿ ಆಸೀನಳಾಗುವ ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಸಿಎಂ ಹಾಗೂ ಇತರ ಗಣ್ಯರು ಪುಷ್ಪ ನಮನ ಸಲ್ಲಿಸಲಿದ್ದಾರೆ.
ಈ ಬಾರಿಯ ವಿಶೇಷ ಆಕರ್ಷಣೆ: ಮೈಸೂರಿನಲ್ಲಿ ಕಂಬಳ! ಮೈಸೂರು ದಸರಾದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಕರಾವಳಿಯ ಜಾನಪದ ಕ್ರೀಡೆಯಾದ ‘ಕಂಬಳ’ವನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಅಕ್ಟೋಬರ್ 18 ಹಾಗೂ 19ರಂದು ಎರಡು ದಿನಗಳ ಕಾಲ ಕಂಬಳ ನಡೆಸಲು ಕಂಬಳ ಸಮಿತಿಯು ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕಾಗಿ ಪ್ರತ್ಯೇಕ ಅನುದಾನ ನೀಡುವಂತೆಯೂ ಸರ್ಕಾರಕ್ಕೆ ಮನವಿ ಮಾಡಿದೆ.
ಮೂಲಸೌಕರ್ಯ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನಾಡಹಬ್ಬವನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಲಕ್ಷಾಂತರ ದೇಶ-ವಿದೇಶಿ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಸುಸಜ್ಜಿತ ಮೂಲಸೌಕರ್ಯ, ಸ್ವಚ್ಛತೆ ಹಾಗೂ ಬಿಗಿ ಭದ್ರತೆ ಒದಗಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೆ, ಪ್ರವಾಸೋದ್ಯಮ ಇಲಾಖೆಯ ಮೂಲಕ ದಸರಾವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಪ್ರಚುರಪಡಿಸಲು ವಿಶೇಷ ಉತ್ತೇಜನ ನೀಡುವ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು.
ಉದ್ಘಾಟಕರ ಆಯ್ಕೆ ಸಿಎಂ ವಿವೇಚನೆಗೆ ಈ ಬಾರಿಯ ದಸರಾ ಮಹೋತ್ಸವವನ್ನು ಉದ್ಘಾಟಿಸುವ ಗಣ್ಯರ ಹೆಸರನ್ನು ಅಂತಿಮಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಸಭೆಯು ಮುಖ್ಯಮಂತ್ರಿಗಳಿಗೆ ವಹಿಸಿದೆ.
ಈ ಮಹತ್ವದ ಪೂರ್ವಸಿದ್ಧತಾ ಸಭೆಯಲ್ಲಿ ಸಚಿವರುಗಳಾದ ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಕೆ. ವೆಂಕಟೇಶ್, ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ಶಾಸಕ ದೇವೇಗೌಡ ಸೇರಿದಂತೆ ಮೈಸೂರು ಭಾಗದ ಅನೇಕ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಜೊತೆಗೆ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್ಪಿ) ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪಾಲ್ಗೊಂಡಿದ್ದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j