ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲಿನ ಹಲ್ಲೆ ಖಂಡನೀಯ, ಕಠಿಣ ಕ್ರಮಕ್ಕೆ ಎಚ್. ಆಂಜನೇಯ ಒತ್ತಾಯ

ಪೋಟೋ ಮತ್ತು ವರದಿ, ಮಾರುತಿ

ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ
ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು
ಎಂದು ಮಾಜಿ ಸಚಿವ ಎಚ್.ಆಂಜನೇಯ ಆತಂಕ ವ್ಯಕ್ತಪಡಿಸಿದ್ದಾರೆ.

ಎಸಿ, ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು, ಗ್ರಾಮದ ಮುಖಂಡರೊಂದಿಗೆ ಐಮಂಗಲ ಸಮೀಪದ
ಹರಳಯ್ಯ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ,
ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿಕ ಮಠಕ್ಕೆ ಶ್ರೀಗಳು ಬಂದಿದ್ದಾರೆಂದು ಭಾವಿಸಿ
ಧೈರ್ಯ ಹೇಳಲು ಬಂದಿದ್ದೇನೆ. ಆದರೆ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಖಾಸಗಿ
ಆಸ್ಪತ್ರೆಗೆ ದಾಖಲಾಗಿರುವುದು ಅವರ ಆರೋಗ್ಯ ಸ್ಥಿತಿ ಕುರಿತು ಕಳವಳ ವ್ಯಕ್ತವಾಗಿದೆ
ಎಂದರು.\

ಮುರುಘ ಮಠದ ಡಾ. ಶ್ರೀ ಶಿವಮೂರ್ತಿ ಮುರುಘ ಶರಣರು ಎಲ್ಲ ಶೋಷಿತ, ದಲಿತ, ಹಿಂದುಳಿದ
ವರ್ಗಗಳಿಗೆ ಧಾರ್ಮಿಕ ಸ್ಥಾನ ನೀಡಲು ಹಲವರಿಗೆ ದೀಕ್ಷೆ ನೀಡಿ, ಜಮೀನು ಸೇರಿ ಅಗತ್ಯ
ಸಹಕಾರ ನೀಡಿದ್ದು ಸ್ಮರಣೀಯ. ಆ ಸಂದರ್ಭದಲ್ಲಿ ಹರಳಯ್ಯ ಮಠ ಸ್ಥಾಪನೆಗಾಗಿ ಜಮೀನು
ಖರೀದಿಸಲು ಹಣ ಕೊಟ್ಟಿದ್ದರು. ಆ ಹಣದಲ್ಲಿ ಭೂಮಿ ಖರೀದಿಸಿ ಮಠ, ಶಾಲೆ ನಿರ್ಮಿಸಲು ಬಸವ ಹರಳಯ್ಯ ಸ್ವಾಮೀಜಿ ಶ್ರಮಿಸಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.

ಮಠ-ಮಾನ್ಯಗಳು ಮಾಡಬೇಕಾದ ಕಾರ್ಯವನ್ನು ಅತ್ಯಂತ ಶ್ರದ್ಧೆ, ಸವಾಲುಗಳ ಮಧ್ಯೆ,‌ ಹಗಲು-ರಾತ್ರಿ ಶ್ರಮಪಟ್ಟು ಹರಳಯ್ಯ ಸ್ವಾಮೀಜಿ ಮಾಡಿದ್ದಾರೆ. ಸಮಾಜ ಕಲ್ಯಾಣ
ಸಚಿವನಾಗಿದ್ದ ವೇಳೆ ೧ ಕೋಟಿ ರೂ. ಅನುದಾನ ಕೊಡಿದ್ದೇ. ಬಳಿಕ ಅಸ್ಥಿತ್ವಕ್ಕೆ ಬಂದ
ಸರ್ಕಾರ ಹಾಗೂ ಭಕ್ತರು, ಜನರಿಗೆ ದೇಣಿಗೆ ಸಂಗ್ರಹಿಸಿ ಭವ್ಯವಾದ ಮಠ ನಿರ್ಮಿಸಿದ್ದಾರೆ.
ಸುತ್ತಮುತ್ತಲ ಬಡ ಮಕ್ಕಳಿಗಾಗಿ ಶಾಲೆ, ಸತ್ ಚಿಂತನೆ ಮೂಡಿಸಲು ಧಾರ್ಮಿಕ ಕಾರ್ಯಕ್ಕಾಗಿ
ಸಭಾಂಗಣ ನಿರ್ಮಿಸಿದ್ದಾರೆ ಎಂದರು.

ಈ ಸಂದರ್ಭ ತಗ್ಗುಗುಂಡಿ ಆಗಿದ್ದ ಅನುಪಯುಕ್ತ ಎರಡು ಗುಂಟೆ ಜಮೀನು ಗೊಂದಲದಿಂದ
ಒತ್ತುವರಿ ಆಗಿದೆ. ಈ ವಿಷಯಕ್ಕಾಗಿ ಹಲವು ಬಾರಿ ವ್ಯಕ್ತಿಯೊರ್ವ ಗಲಾಟೆ ಮಾಡಿದ್ದಾನೆ.
ಗೊತ್ತಿಲ್ಲದೆ ಎರಡು ಗುಂಟೆ ಜಾಗ ಒತ್ತುವರಿ ಆಗಿದ್ದು, ತಪ್ಪು ನನ್ನಿಂದಲೇ ಆಗಿದೆಯೆಂದು ಶ್ರೀಗಳು ಒಪ್ಪಿಕೊಂಡಿದ್ದಾರೆ. ಜತೆಗೆ ಆ ಜಾಗಕ್ಕೆ ಈಗಿನ ಮಾರುಕಟ್ಟೆ ಮೌಲ್ಯದಷ್ಟು ಹಣ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ವ್ಯಕ್ತಿ ನಿರಾಕರಿಸಿದಾಗ
ಒತ್ತುವರಿ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡನ್ನು ಸ್ವಾಮೀಜಿ ಕೆಡವಿಸಿದ್ದಾರೆ. ಆದರೂ ಆ
ವ್ಯಕ್ತಿ ದ್ವೇಷ ಮುಂದುವರಿಸಿದ್ದು ಏಕಾಏಕಿ ಮಠಕ್ಕೆ ನುಗ್ಗಿ ಸ್ವಾಮೀಜಿ ಮೇಲೆ
ಮಾರಾಣಾಂತಿಕ ಹಲ್ಲೆ ನಡೆಸಿದ್ದು, ದೂರು ಕೊಡಲು ಠಾಣೆಗೆ ತೆರಳಿರುವ ವಿಷಯ ತಿಳಿದು ಅಲ್ಲಿಗೆ ತೆರಳಿ ಕಾಲಿನಿಂದ ಸ್ವಾಮೀಜಿ ಎದೆಗೆ ಒದ್ದಿದ್ದಾನೆ ಎಂದರು.

ಧಾರ್ಮಿಕ ನೇತಾರರನ್ನು ಗೌರವಿಸುವ ನಾಡು ಭಾರತ. ಇಂತಹ ಸಂದರ್ಭ ಖಾವಿಧಾರಿಯೊಬ್ಬರ ಮೇಲೆ
ಮಾರಾಣಾಂತಿಕವಾಗಿ ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂಧಿಸಿರುವುದು ಎಚ್ಚರಿಕೆ
ಗಂಟೆಯಾಗಿದೆ. ಈ ದುಷ್ಕೃತ್ಯವನ್ನು ನಾಡಿನ ಎಲ್ಲ ಮಠಾಧೀಶರು ಖಂಡಿಸಬೇಕು, ಸ್ವಾಮೀಜಿಗೆ ನೈತಿಕವಾಗಿ ಬೆಂಬಲಿಸಬೇಕು. ಇಲ್ಲದಿದ್ದರೇ ಇಂತಹ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದರು.

ಹಲ್ಲೆ ನಡೆಸಿದ ಮೂವರನ್ನು ಮಟ್ಟಹಾಕುವ ಶಕ್ತಿ ನಮ್ಮಲ್ಲೂ ಇದೆ. ಆದರೆ, ನಾವು
ವಾಮಮಾರ್ಗದಲ್ಲಿ ಸಾಗುವವರಲ್ಲ, ಕಾನೂನು ಪರಿಪಾಲಕರು. ನಮ್ಮ ಹಕ್ಕೋತ್ತಾಯ ಬಸವ
ತತ್ವದಡಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆ
ಭೀತಿ ಹುಟ್ಟಿಸುವಂತದ್ದಾಗಿದೆ. ಈ ಕುರಿತು ತಕ್ಷಣವೇ ಎಲ್ಲ ಮಠಾಧೀಶರು, ಧರ್ಮಗಳ
ಪ್ರತಿಪಾದಕರು ಖಂಡಿಸಬೇಕು ಎಂದು ಕೋರಿದರು.

ಈಗ ಯಾವುದೇ ಕಾರಣಕ್ಕೂ ಸಂಧಾನ-ಚರ್ಚೆ ಅಗತ್ಯವಿಲ್ಲ. ಮಠದ ಸಾಮಾಜಿಕ ಕಾರ್ಯಕ್ಕಾಗಿ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಅದಕ್ಕೆ ತಗಲುವ ವೆಚ್ಚವನ್ನು ನಾನೇ‌ ಸ್ವಂತವಾಗಿ ಭರಿಸುತ್ತೇನೆ. ತಕ್ಷಣ ಅಧಿಕಾರಿಗಳು ಈ ಸಂಬಂಧ
ಕಾರ್ಯಪ್ರವೃತ್ತರಾಗಬೇಕೆಂದು ಆಂಜನೇಯ ಆಗ್ರಹಿಸಿದರಲ್ಲದೇ ಒಂದು ವೇಳೆ ಭೂಮಿ ಯಾರದ್ದಾಗಿದ್ದರೇ ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪರಿಹಾರ ನೀಡಬಹುದು. ಈ
ನಿಟ್ಟಿನಲ್ಲಿ ನಾನು ತಗಲುವ ಸಂಪೂರ್ಣ ವೆಚ್ಚ ಭರಿಸುವೆ ಎಂದು ತಿಳಿಸಿದರು.

ಐಮಂಗಲ ಸುತ್ತಮುತ್ತಲ ಗ್ರಾಮಗಳ ಬಡ ಮಕ್ಕಳಿಗೆ ಶಿಕ್ಷಣ ನೀಡುವುದು, ಅನಾಥಾಲಯ
ಸ್ಥಾಪನೆಯ ಸದುದ್ದೇಶ ಹೊಂದಿರುವ ಶ್ರೀಗಳ ಮೇಲೆ ಹಲ್ಲೆ ಇಡೀ ಧಾರ್ಮಿಕ ಮುಖಂಡರಿಗೆ
ಮಾಡಿರುವ ಅಪಮಾನ ಮತ್ತು ಅವರಲ್ಲಿ ಭೀತಿ ಸೃಷ್ಠಿಸುವಂತದ್ದಾಗಿದೆ. ಆದ್ದರಿಂದ‌ ಮಾರಾಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ತಕ್ಷಣವೇ ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಜೊತೆಗೆ ಕಠಿಣ ಶಿಕ್ಷೆ ಆಗುವ ರೀತಿ ಕಾನೂನು ಪ್ರಕ್ರಿಯೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ‌ ಸಂದರ್ಭದಲ್ಲಿ ಎಸಿ ಕಾಂತರಾಜ್, ಡಿವೈಎಸ್ಪಿ ಶಿವಕುಮಾರ್, ಸಿಪಿಐ ಗುಡ್ಡಪ್ಪ ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *