ಚಿತ್ರದುರ್ಗ ಜಿಲ್ಲೆಯಲ್ಲಿ ಬರ ತೀವ್ರ: ರೈತರ ಸ್ಥಿತಿ ಪರಿಶೀಲಿಸಿದ ಬಿಜೆಪಿ ರೈತ ಮೋರ್ಚಾ, ಸರ್ಕಾರದ ವಿರುದ್ಧ ವಾಗ್ದಾಳಿ.

ಚಿತ್ರದುರ್ಗ ಜು. 11

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ತಲೆದೋರಿದ್ದು, ಬಿತ್ತನೆ ಕಾರ್ಯಗಳು ಸಮರ್ಪಕವಾಗಿ ನಡೆಯದೆ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಮತ್ತು ಜಿಲ್ಲಾ ರೈತ ಮೋರ್ಚಾದ ಜಂಟಿ ತಂಡವು ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳ ಹಳ್ಳಿಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದೆ. ರೈತ ಮೋರ್ಚಾದ ಪ್ರಮುಖರು, ಜಿಲ್ಲೆಯಲ್ಲಿ ಕೇವಲ ಶೇಕಡಾ 6 ರಿಂದ 7 ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಆದರೆ, ಅಧಿಕಾರಿಗಳು ಶೇಕಡಾ 20 ರಷ್ಟು ಬಿತ್ತನೆಯಾಗಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದು ಸರ್ಕಾರದ ಅಧಿಕಾರಿಗಳಿಂದ ಕೆಲಸ ಪ್ರಗತಿ ಸಾಧಿಸಲು ಯಾವುದೇ ಯೋಜನೆಗಳಿಲ್ಲದಿರುವುದನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ. ಅಧಿಕಾರಿಗಳು ಕಚೇರಿಗಳಲ್ಲೇ ಕುಳಿತು ವರದಿ ತಯಾರಿಸುತ್ತಿದ್ದಾರೆ ವಿನಃ ರೈತರ ಅಳಲನ್ನು ಕೇಳುತ್ತಿಲ್ಲ ಎಂದು ಅವರು ಆರೋಪಿಸಿದರು.

ಕ್ಷೇತ್ರ ಭೇಟಿಯ ಪ್ರಮುಖ ಅಂಶಗಳು ಕಂಡು ಬಂದಿದ್ದು, ಇದರಲ್ಲಿ ಜಿಲ್ಲೆಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಕೆರೆಗಳು ಒಣಗುತ್ತಿವೆ. ಜನ ಜಾನುವಾರುಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈಗಾಗಲೇ ಬಿತ್ತನೆಯಾಗಿರುವ ಅಲ್ಪಸ್ವಲ್ಪ ಬೆಳೆಗಳು ಕೂಡ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಂದಾಯ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದರೂ, ಯಾವುದೇ ತಾಲೂಕುಗಳಿಗೆ ಭೇಟಿ ನೀಡಿ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿಲ್ಲ. ಕೇವಲ ಅಧಿಕಾರಿಗಳ ಸಭೆ ನಡೆಸಿ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಿ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಮೊಳಕಾಲ್ಮೂರು ತಾಲೂಕಿನ ಶಾಸಕರಾದ ಗೋಪಾಲಕೃಷ್ಣ ಅವರು ಒಮ್ಮೆಯೂ ಬರಪೀಡಿತ ಹಳ್ಳಿಗಳಿಗೆ ಭೇಟಿ ನೀಡಿಲ್ಲ ಅಥವಾ ಅಧಿಕಾರಿಗಳ ಸಭೆ ಕರೆದು ಸರ್ಕಾರಕ್ಕೆ ಒತ್ತಡ ಹೇರುವ ಪ್ರಯತ್ನ ಮಾಡಿಲ್ಲ. ರಾಜ್ಯದ ಕೃಷಿ ಸಚಿವರು ಮುಖ್ಯಮಂತ್ರಿಗಳಿಗೆ ಹೆದರಿಕೊಂಡು ಕೇವಲ ವರದಿ ನೀಡಲು ಸೀಮಿತವಾಗಿ ದ್ದಾರೆಯೇ ಹೊರತು, ಮುಂಗಾರು ಹಂಗಾಮಿನ ಬಿತ್ತನೆ ಬೀಜ ಮತ್ತು ಗೊಬ್ಬರ ನಿರ್ವಹಣೆಯ ಬಗ್ಗೆ ಯಾವುದೇ ಸಾಮಾನ್ಯ ಜ್ಞಾನ ಹೊಂದಿಲ್ಲ ಎಂದರು.

ರಾಜ್ಯದಲ್ಲಿ ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರದ ಬೇಜವಾಬ್ದಾರಿತನ ಮುಂದುವರಿದರೆ ಈ ಸಂಖ್ಯೆ ಹೆಚ್ಚಾಗುವ ಭೀತಿ ಇದೆ. ರೈತ ಮೋರ್ಚಾ ವತಿಯಿಂದ ಮೊದಲ ಹಂತವಾಗಿ ಚಿತ್ರದುರ್ಗ ಸೇರಿದಂತೆ ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ವರದಿ ಸಿದ್ಧಪಡಿಸಲಾಗುತ್ತಿದೆ. ಮುಂದಿನ ಎರಡು ವಾರಗಳಲ್ಲಿ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ರಾಜ್ಯಪಾಲರಿಗೆ ಸಲ್ಲಿಸಿ, ಮುಂದಿನ ಹೋರಾಟದ ರೂಪುರೇಷೆಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್, ಬಿಜೆಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಕಾರ್ಯದರ್ಶಿ ರಾಜೇಶ್ ಆರ್ ಬುರುಡೆಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ವೆಂಕಟೇಶ್ ಯಾದವ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ವಕ್ತಾರ ನಾಗರಾಜ್ ಬೇದ್ರೇ, ಹೂಸದುರ್ಗ ತಾಲ್ಲೂಕು ರೈತ ಮೋರ್ಚಾದ ಅಧ್ಯಕ್ಷ ಮನುಕುಮಾರ್, ಕಾರ್ಯದರ್ಶಿ ಈಶ್ವರ್, ಪ್ರಧಾನ ಕಾರ್ಯದರ್ಶಿ ರವಿಕಿರಣ ಪಾಟೀಲ್, ಹಿರಿಯೂರು ತಾಲ್ಲೂಕು ರೈತ ಮೋರ್ಚಾದ ಅಧ್ಯಕ್ಷ ಮನೋಹರ್, ಜಿಲ್ಲಾ ಕಾರ್ಯದರ್ಶಿ ಗೋವಿಂದರಾಜು, ಸೇರಿದಂತೆ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕು ಮಂಡಲದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ, ಚಳ್ಳಕೆರೆ ತಾಲ್ಲೂಕಿನ ಭುಟ್ಟಟ್ಮಿ ಸುತ್ತಲಿನ ಗ್ರಾಮ ಓಬಣ್ಣರವರ ಮನೆಗೆ ಭೇಟಿ ಹಾಗೂ ಮೊಳಕಾಲ್ಮೂರಿನ ಕಟ್ಟನಾಯಕನ ಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ರೈತರನ್ನು ಮಾತನಾಡಿಸಿದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *