ಬೆಂಗಳೂರು: ನೀಟ್ (NEET) ಪರೀಕ್ಷೆಯಲ್ಲಿ ತೇರ್ಗಡೆಯಾಗಿಯೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಯುಜಿಸಿಇಟಿಗೆ (UGCET) ಅರ್ಜಿ ಸಲ್ಲಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಇದೀಗ ಸುವರ್ಣಾವಕಾಶ ಲಭಿಸಿದೆ. ಇಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಇಎ ಹೊಸ ಅಪ್ಲಿಕೇಶನ್ ಲಿಂಕ್ ಅನ್ನು ಬಿಡುಗಡೆ ಮಾಡಿದ್ದು, ಜುಲೈ 24ರವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಯಾರು ಈವರೆಗೆ ಯುಜಿಸಿಇಟಿಗೆ ಅರ್ಜಿ ಸಲ್ಲಿಸಿಲ್ಲವೋ, ಅವರು ತಕ್ಷಣವೇ ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹೊಸ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.
ವೈದ್ಯಕೀಯ ಪ್ರವೇಶಾತಿ ಮತ್ತು ರೋಲ್ ನಂಬರ್ ಲಿಂಕ್ ರಾಜ್ಯದಲ್ಲಿ ವೈದ್ಯಕೀಯ (MBBS), ದಂತವೈದ್ಯಕೀಯ (BDS), ಆಯುರ್ವೇದ (BAMS), ಯುನಾನಿ (BUMS) ಹಾಗೂ ಹೋಮಿಯೋಪತಿ (BHMS) ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯು ಸಂಪೂರ್ಣವಾಗಿ ವಿದ್ಯಾರ್ಥಿಗಳ ನೀಟ್ ರ್‍ಯಾಂಕಿಂಗ್ ಆಧಾರದ ಮೇಲೆಯೇ ನಡೆಯಲಿದೆ.
ಈಗಾಗಲೇ ಯುಜಿಸಿಇಟಿಗೆ ಅರ್ಜಿ ಸಲ್ಲಿಸಿ, ನೀಟ್ ಮೂಲಕ ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳು ತಮ್ಮ ನೀಟ್ ರೋಲ್ ನಂಬರ್ ಲಿಂಕ್ ಮಾಡಲು ಶೀಘ್ರದಲ್ಲಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಮಾಹಿತಿ ನೀಡಿದ್ದಾರೆ. ಹೊಸದಾಗಿ ಅರ್ಜಿ ಸಲ್ಲಿಸುವವರ ದಾಖಲಾತಿ ಪರಿಶೀಲನೆ (Document Verification) ಕುರಿತ ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
ಹೊರರಾಜ್ಯದ ಅಭ್ಯರ್ಥಿಗಳಿಗೆ ಇರುವ ನಿಯಮಗಳೇನು?
- ಕರ್ನಾಟಕೇತರ ವಿದ್ಯಾರ್ಥಿಗಳು ಕೂಡ ಕೆಇಎ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯ.
- ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯ (ಹೈಯರ್ ಸೆಕೆಂಡರಿ) ಅಂಕಗಳನ್ನು ನಮೂದಿಸಿ, ಆನ್‌ಲೈನ್‌ನಲ್ಲೇ ಅಂಕಪಟ್ಟಿ ಅಪ್‌ಲೋಡ್ ಮಾಡಬಹುದು. ಇಂತಹ ಅಭ್ಯರ್ಥಿಗಳಿಗೆ ನೇರ ದಾಖಲಾತಿ ಪರಿಶೀಲನೆ ಇರುವುದಿಲ್ಲ.
- ವಿಶೇಷ ಸೂಚನೆ: ಅನಿವಾಸಿ ಭಾರತೀಯರು (NRI), OCI, PIO, ವಿದೇಶಿ ನಾಗರಿಕರು, ಎನ್‌ಆರ್‌ಐ ವಾರ್ಡ್, ಧಾರ್ಮಿಕ ಅಲ್ಪಸಂಖ್ಯಾತ ಕೋಟಾ ಹಾಗೂ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ನಿರ್ದಿಷ್ಟ ಸೀಟುಗಳ ಆಕಾಂಕ್ಷಿಗಳು ಕಡ್ಡಾಯವಾಗಿ ಸ್ಲಾಟ್ ಬುಕ್ ಮಾಡಿಕೊಳ್ಳಬೇಕು. ನಿಗದಿತ ದಿನದಂದು ಖುದ್ದಾಗಿ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು. ಇದರ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ಡಿಸಿಇಟಿ (DCET) ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ (DCET) ಬರೆದ ಅಭ್ಯರ್ಥಿಗಳಿಗೆ ಜುಲೈ 21ರಿಂದ ಸೀಟು ಹಂಚಿಕೆ ಪ್ರಕ್ರಿಯೆ ಶುರುವಾಗಲಿದೆ. ಪ್ರಮುಖ ದಿನಾಂಕಗಳ ವಿವರ ಇಲ್ಲಿದೆ:
- ಕಾಲೇಜುಗಳ ಆಯ್ಕೆ ದಾಖಲಿಸಲು ಅವಕಾಶ (Option Entry): ಜುಲೈ 21 ರಿಂದ 24 ರವರೆಗೆ
- ಅಣಕು ಸೀಟು ಹಂಚಿಕೆ ಫಲಿತಾಂಶ (Mock Allotment): ಜುಲೈ 24, ಸಂಜೆ 6:00 ಗಂಟೆಗೆ
- ಆಯ್ಕೆಗಳನ್ನು ಸೇರಿಸಲು, ಬದಲಾಯಿಸಲು ಅಥವಾ ಅಳಿಸಲು ಅವಕಾಶ: ಜುಲೈ 27ರವರೆಗೆ
- ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ: ಜುಲೈ 27, ಸಂಜೆ 6:00 ಗಂಟೆಗೆ ಪ್ರಕಟ.
- ಆರ್ಕಿಟೆಕ್ಚರ್ ಕೋರ್ಸ್: ಆರ್ಕಿಟೆಕ್ಚರ್ ಪ್ರವೇಶ ಬಯಸುವ ಅಭ್ಯರ್ಥಿಗಳು ತಮ್ಮ ನಾಟಾ (NATA) ಅಂಕಪಟ್ಟಿಯನ್ನು ಜುಲೈ 20ರ ಒಳಗೆ ಕೆಇಎ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕು.
(ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಕೆಗಾಗಿ ವಿದ್ಯಾರ್ಥಿಗಳು ಕಡ್ಡಾಯವಾಗಿ KEA ಅಧಿಕೃತ ವೆಬ್‌ಸೈಟ್ ಸಂಪರ್ಕಿಸಲು ಸೂಚಿಸಲಾಗಿದೆ.)