ಮೈಸೂರು ರಂಗಾಯಣದಲ್ಲಿ ‘ಅನಿಕೇತನ’ ಉಚಿತ ಜಾನಪದ ಮತ್ತು ರಂಗ ತರಬೇತಿ ಶಿಬಿರಕ್ಕೆ ಚಾಲನೆ.


ಮೈಸೂರು: ನಾಲ್ವಡಿ ಸೋಷಿಯಲ್, ಕಲ್ಚರಲ್ ಆಂಡ್ ಎಜುಕೇಷನ್ ಟ್ರಸ್ಟ್ (ರಿ) ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಅನಿಕೇತನ ಎಂಬ ಹೆಸರಿನ ಅಡಿಯಲ್ಲಿ ಉಚಿತ ಜಾನಪದ ಮತ್ತು ರಂಗ ತರಬೇತಿ ಶಿಬಿರ-2026ರ ಉದ್ಘಾಟನೆಯನ್ನು ಮೈಸೂರಿನ ರಂಗಾಯಣ ಆವರಣದಲ್ಲಿರುವ ಬಿ.ವಿ ಕಾರಾಂತ ರಂಗ ಚಾವಡಿಯಲ್ಲಿ ದಿನಾಂಕ 12/08/2026ರ ಬುಧವಾರದಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಉಧ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ಶ್ರೀಮತಿ ನಿರ್ಮಲ ಮಠಪತಿ ಇವರು ನೆರವೆರಿಸಿ, ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಾ ಶಿಬಿರದ ಆಯೋಜಕರನ್ನು ಅಭಿನಂದಿಸುತ್ತಾ ಇವತ್ತು ನಮ್ಮ ಇಲಾಖೆಯ ಸಹಭಾಗಿತ್ವದಲ್ಲಿ ಇವರು ಹಲವಾರು ವಿನೂತನ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅಭಿನಂದನಿಯ. ಕುವೆಂಪು, ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್‌ ಇವರ ಆಶಯಗಳ ಅಡಿಯಲ್ಲಿ ಸಂಸ್ಥೆಯನ್ನು ಕಟ್ಟಿ ಸಮಾಜದಲ್ಲಿ ಉತ್ತಮ ಸಂದೇಶ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಯುವಜನರ ತಂಡವನ್ನು ಕಟ್ಟಿಕೊಂಡು ಇವತ್ತು ಹಲವಾರು ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ. ಇವತ್ತು ಈ ಜನಪದ ರಂಗ ತರಬೇತಿ ಮೂಲಕ ಯುವಜನರನ್ನು ರಂಗಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಕಾರಣರಾಗುತ್ತಿದ್ದಾರೆ. ಯುವಜನರು ರಂಗಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರೋತ್ಸಾಹ ನೀಡುತ್ತಿದ್ದಾರೆ. ಇಲ್ಲಿಯ ತನಕ ತಾವು ಹಲವಾರು ಸಮಾಜಮುಖಿ ನಾಟಕಗಳನ್ನು ನೀಡುವ ಮೂಲಕ ಜನರಿಗೆ ಉತ್ತಮ ಸಂದೇಶ ನೀಡುವ ಕೆಲಸ ಮಾಡಿದ್ದಿರಾ, ಮುಂದಿನ ದಿನಗಳಲ್ಲಿ ಕೂಡ ನಿಮ್ಮಿಂದ ಮತ್ತು ನಿಮ್ಮ ತಂಡದಿಂದ ಇದೇ ತರಹದ ಒಂದು ಸಮಾಜಮುಖಿ ನಾಟಕ ಈ ಶಿಬಿರದ ಮೂಲಕ ನಿರೀಕ್ಷೆ ಮಾಡುತ್ತೇವೆ, ನಿಮ್ಮ ಈ ಶಿಬಿರಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಗೌತಮ ಟ್ರಸ್ಟ್ (ರಿ) ಮೈಸೂರು ಇದರ ಸಂಸ್ಥಾಪಕರಾದ ಶ್ರೀಯುತ. ಕೃಷ್ಣಮೂರ್ತಿ ತಲಕಾಡು ಇವರು ಮಾತನಾಡುತ್ತಾ ಶ್ರೀ.ದಿನೇಶ್ ಚಮ್ಮಾಳಿಗೆ ಇವರು ನಾಟಕ ಕಟ್ಟುವಲ್ಲಿ ಒಂದು ರೀತಿಯಲ್ಲಿ ರಾಕ್ಷಸ ಇದ್ದ ಹಾಗೆ, ಅದರಲ್ಲಿ ಪರಿಪೂರ್ಣತೆ ಬರುವ ತನಕ ಸಮಧಾನ ಇರುವುದಿಲ್ಲ. ನಾಟಕದ ಜೊತೆಯಲ್ಲೆ ನಟರು ಕೂಡ ಪರಿಪೂರ್ಣ ನಟ/ನಟಿಯರನ್ನಾಗಿ ಮಾಡುವಲ್ಲಿ ನಿಸ್ಸಿಮರು ಎಂದು ಹೇಳುತ್ತಾ, ಇವತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರನ್ನು ಸರಿಯಾದ ರೀತಿಯಲ್ಲಿ ಗೌರಸುತ್ತಿಲ್ಲ, ಸರಕಾರದ ಮೂಲಕವೇ ಇವತ್ತು ಈ ಇಲಾಖೆಗೆ ಪ್ರತಿ ವರ್ಷ ಅನುದಾನ ಮಾಡುತ್ತಿದೆ, ಇದರಿಂದಾಗಿ ಕಲಾವಿದರಿಗೆ ಗೌರವ ಧನದಲ್ಲಿ ಕಡಿಮೆ ಹಾಗೂ ಇನ್ನಿತರ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಆದುರಿಂದ ಇವತ್ತು ಅದೇಷ್ಟೋ ಕಲಾವಿದರು ಕಲೆಯ ಕಡೆಗೆ ಹಿಮ್ಮುಖ ಮಾಡುತ್ತಿದ್ದಾರೆ, ಆದುದರಿಂದ ಕಲಾವಿದರನ್ನು ಗೌರವದಿಂದ ನಡೆಸಿಕೊಂಡಲ್ಲಿ ಹೆಚ್ಚಿನ ಯುವಜನರು ರಂಗಭೂಮಿಗೆ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯು ಹೊಸ ಯೋಜನೆ ಮತ್ತು ಸೌಲಭ್ಯಗಳನ್ನು ನೀಡಬೇಕು ಎಂದು ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಇದರ ನಿವೃತ್ತ ಜಂಟಿ ನಿರ್ದೇಶಕರಾದ ಶ್ರೀಯುತ ವಿಎನ್ ಮಲ್ಲಿಕಾರ್ಜುನ ಸ್ವಾಮಿ ಇವರು ಶಿಬಿರವನ್ನು ಉದ್ಧೇಶಿಸಿ ಮಾತನಾಡುತ್ತಾ ಇವತ್ತು ರಂಗಕ್ಷೇತ್ರದಲ್ಲಿ ಆಸಕ್ತ ಕಲಾವಿದರು ಕಡಿಮೆ ಆಗುತ್ತಿದ್ದಾರೆ ಎಂದು ಭಾವಿಸುತ್ತಿದ್ದೇವೆ ಅದಕ್ಕೆ ನಿದರ್ಶನ ಇವತ್ತು ರಂಗಾಯಣದಲ್ಲಿ ತರಬೇತಿಗೆ ಬರಿತ್ತಿರುವವರ ಸಂಖ್ಯೆ, ಆದರೆ ದಿನೇಶ್‌ ಚಮ್ಮಾಳಿಗೆ ಇವರ ಶಿಬಿರ ನೋಡಿದರೆ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರ ವರೇಗೆ ಬಂದು ತರಬೇತಿ ಪಡೆಯುತ್ತಿರುವುದು ನೋಡಿದರೆ ಗೊತ್ತಾಗುತ್ತದೆ ಎಲ್ಲೊ ಒಂದಿ ಕಡೆ ಇಂತಹ ಆಸಕ್ತ ಕಲಾವಿದರನ್ನು ಹುಡುಕುವಲ್ಲಿ ಇಲಾಖೆ ಹಿಂದೆ ಬಿದ್ದಿದೆ ಎಂದು, ಆದುದರಿಂದ ನಮ್ಮ ಇಲಾಖೆ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ ಎಂದು ಹೇಳುತ್ತಾ, ಶಿಬಿರಕ್ಕೆ ಶುಭ ಹಾರೈಸಿದರು.

ಶ್ರೀ. ದಿನೇಶ್ ಚಮ್ಮಾಳಿಗೆ (ನೀನಾಸಂ), ಸಂಸ್ಥಾಪಕರು, ನಾಲ್ವಡಿ ಸೋಷಿಯಲ್, ಕಲ್ಚರಲ್ ಆಂಡ್ ಎಜುಕೇಷನ್ ಟ್ರಸ್ಟ್ (ರಿ) ಮೈಸೂರು ಇವರು ಸಂಸ್ಥೆ ಮತ್ತು ಶಿಬಿರದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮಕ್ಕೆ ಸ್ವಾಗತಿಸಿ, ವಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಹಲವಾರು ಹಿರಿಯ ನಿರ್ದೇಶಕರು, ನಟರು, ಜಾನಪದ ಕಲಾವಿದರು ಮತ್ತು ಶಿಬಿರಾರ್ಥಿಗಳು, ರಂಗಾಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *