ಮಹಿಳೆ ಮತ್ತು ಶಿಶು ಆರೈಕೆ–ಆರೋಗ್ಯ ಸೇವೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು.

ಸಮಗ್ರ ಸುದ್ದಿ ಮೈಸೂರು, ಸೆಪ್ಟೆಂಬರ್ 23, 2026: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP), ಮೈಸೂರು ಇವರ ಸಹಯೋಗದಲ್ಲಿ “ಮಹಿಳೆ ಮತ್ತು ಶಿಶು ಆರೈಕೆ–ಆರೋಗ್ಯ ಸೇವೆಗಳ ಪರಿಣಾಮಕಾರಿ ಅನುಷ್ಠಾನ” ಕುರಿತು ಒಂದು ದಿನದ ಕಾರ್ಯಾಗಾರವನ್ನು ಮೈಸೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ವೈದ್ಯರ ಭವನದಲ್ಲಿ ಆಯೋಜಿಸಲಾಯಿತು.

ಕಾರ್ಯಾಗಾರವನ್ನು ಡಾ. ಪಿ. ಶಿವರಾಜು, ಕೆ.ಎ.ಎಸ್., ಅಪರ ಪ್ರಾದೇಶಿಕ ಆಯುಕ್ತರು, ಪ್ರಾದೇಶಿಕ ಆಯುಕ್ತರ ಕಾರ್ಯಾಲಯ, ಮೈಸೂರು ಅವರು ಗಿಡಕ್ಕೆ ನೀರುಣಿಸುವ ಮೂಲಕ ಹಾಗೂ ಎಚ್‌ಪಿವಿ ಲಸಿಕೆ ಕುರಿತು ಜಾಗೃತಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಪಿ. ಶಿವರಾಜು ಅವರು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಹಾಗೂ ರಕ್ಷಣೆಯ ಕ್ಷೇತ್ರದಲ್ಲಿ RLHP ಸಂಸ್ಥೆಯು ಕೈಗೊಳ್ಳುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು. ಸಮುದಾಯ ಮಟ್ಟದಲ್ಲಿ ಆರೋಗ್ಯ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಇಂತಹ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿರುವುದು ಉಪಯುಕ್ತವಾಗಿದೆ ಎಂದು ಹೇಳಿದರು.

ಸಮುದಾಯದ ಆರೋಗ್ಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಅದರ ಸಾಮಾಜಿಕ ರಚನೆ ಮತ್ತು ಸ್ಥಳೀಯ ಪರಿಸ್ಥಿತಿಗಳನ್ನು ಮೊದಲು ಅರಿತುಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ವೈದ್ಯರು, ನರ್ಸ್‌ಗಳು ಹಾಗೂ ಇತರ ಆರೋಗ್ಯ ಸಿಬ್ಬಂದಿಯ ಸೇವಾ ಮನೋಭಾವ ಮತ್ತು ಸಮರ್ಪಣೆಯನ್ನು ಅವರು ಉಲ್ಲೇಖಿಸಿದರು. ಮೈಸೂರು ಜಿಲ್ಲೆಯನ್ನು ಆರೋಗ್ಯ ಕ್ಷೇತ್ರದಲ್ಲಿ ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್ ಕುಮಾರ್ ಅವರು ಮಾತನಾಡಿ, ಹೆಣ್ಣು ಭ್ರೂಣಹತ್ಯೆ ತಡೆಗಟ್ಟುವಲ್ಲಿ ಎಲ್ಲರೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಹೆಣ್ಣು ಭ್ರೂಣಹತ್ಯೆಯಂತಹ ಪ್ರಕರಣಗಳ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು ಎಂದು ತಿಳಿಸಿದರು. ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ RLHP ನಿರ್ದೇಶಕಿ ಶ್ರೀಮತಿ ಸರಸ್ವತಿ ಅವರು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಸಮುದಾಯದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ತಲುಪಿಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ಆರೋಗ್ಯ ಸಿಬ್ಬಂದಿಗೆ ಅಗತ್ಯ ಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸುವ ಮೂಲಕ ಸೇವೆಗಳ ಗುಣಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದು ಹೇಳಿದರು.

ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಮಹಮ್ಮದ್ ಶಿರಾಜ್ ಅಹಮದ್ ಅವರು ಎಚ್‌ಪಿವಿ ಲಸಿಕೆಯ ಮಹತ್ವ, ಕಿಶೋರಾವಸ್ಥೆಯ ಗರ್ಭಧಾರಣೆ ಹಾಗೂ ಬಾಲ್ಯ ವಿವಾಹದ ಕುರಿತು ವಿವರಿಸಿದರು. ಬಾಲ್ಯ ವಿವಾಹದ ಕುರಿತು ಗ್ರಾಮೀಣ ಪ್ರದೇಶಗಳ ಜೊತೆಗೆ ನಗರ ಪ್ರದೇಶಗಳಲ್ಲಿಯೂ ವ್ಯಾಪಕ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ POCSO ಕಾಯ್ದೆಯ ಕುರಿತು ಸಾರ್ವಜನಿಕರು ಹಾಗೂ ಆರೋಗ್ಯ ಸಿಬ್ಬಂದಿಗೆ ಅರಿವು ಮೂಡಿಸುವುದು ಅಗತ್ಯ ಎಂದು ಹೇಳಿದರು. ಕಿಶೋರಾವಸ್ಥೆಯ ಗರ್ಭಧಾರಣೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಆರೋಗ್ಯ ಸೇವೆಗಳು ಹಾಗೂ MTPಗೆ ಸಂಬಂಧಿಸಿದ ಕಾನೂನುಬದ್ಧ ಮತ್ತು ವೈದ್ಯಕೀಯ ಅಂಶಗಳ ಬಗ್ಗೆಯೂ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಮೈಸೂರು ಜಿಲ್ಲೆಯ ವಿವಿಧ ಆರೋಗ್ಯ ಸಂಸ್ಥೆಗಳಿಂದ 100ಕ್ಕೂ ಹೆಚ್ಚು ಸಮುದಾಯ ಆರೋಗ್ಯ ಅಧಿಕಾರಿಗಳು (CHO), ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು/ಸಿಬ್ಬಂದಿ (PHCO) ಹಾಗೂ RLHP ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಶ್ರೀ ಶಶಿಕುಮಾರ್ ಸಂಯೋಜಕರು ನಿರೂಪಿಸಿದರು. DNO ಶ್ರೀಮತಿ ಕದ್ದಿಜ ಅವರು ವಂದನಾರ್ಪಣೆ ಸಲ್ಲಿಸಿದರು.

Leave a Reply

Your email address will not be published. Required fields are marked *