ಹೋಮ್‌ವರ್ಕ್ ತಂದೊಡ್ಡಿದ ಸಾವು: ಶಿಕ್ಷಕಿಯ ಏಟಿಗೆ ಕುಸಿದುಬಿದ್ದು6 ವರ್ಷದ ಬಾಲಕ ದುರ್ಮರಣ; ಆರೋಪಿ ಶಿಕ್ಷಕಿ ಅರೆಸ್ಟ್.

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎಳೆ ಜೀವವೊಂದು ಶಿಕ್ಷಕಿಯ ಕ್ರೌರ್ಯಕ್ಕೆ ಬಲಿಯಾಗಿದೆ. ಹೋಮ್‌ವರ್ಕ್ ಪೂರ್ಣಗೊಳಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿ ಹೊಡೆದ ಪರಿಣಾಮ 6 ವರ್ಷದ ಯುಕೆಜಿ ವಿದ್ಯಾರ್ಥಿಯೊಬ್ಬ ತರಗತಿಯಲ್ಲೇ ಕುಸಿದುಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಘಟನೆಯ ಹಿನ್ನೆಲೆ: ಮೃತ ಬಾಲಕನನ್ನು ವಿಶಾಖಪಟ್ಟಣದ ಒನ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ‘ಲಿಟಲ್ ಗಾರ್ಡನ್ ಇಂಗ್ಲಿಷ್ ಮೀಡಿಯಂ ಶಾಲೆ’ಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಣಯ್ ತೇಜ (6) ಎಂದು ಗುರುತಿಸಲಾಗಿದೆ. ಆಗಸ್ಟ್ 20 ರಂದು ಶಾಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಹೋಮ್‌ವರ್ಕ್ ಮಾಡಿಕೊಂಡು ಬಾರದ ಹಿನ್ನೆಲೆಯಲ್ಲಿ ಕೋಪಗೊಂಡ ಶಿಕ್ಷಕಿ ಕುಸುಮಾ, ಬಾಲಕನ ಕಪಾಳಕ್ಕೆ ಹೊಡೆದು ತೀವ್ರವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ. ಇದರಿಂದ ತೀವ್ರ ಭಯ ಹಾಗೂ ಆಘಾತಕ್ಕೊಳಗಾದ ಬಾಲಕ, ನೋಡನೋಡುತ್ತಿದ್ದಂತೆಯೇ ತರಗತಿಯಲ್ಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.

ಕಠಿಣ ಕಾಯ್ದೆಯಡಿ ಶಿಕ್ಷಕಿ ಬಂಧನ: ಆರಂಭದಲ್ಲಿ ಈ ಪ್ರಕರಣವನ್ನು ಅನುಮಾನಾಸ್ಪದ ಸಾವು ಎಂದು ಪೊಲೀಸರು ದಾಖಲಿಸಿಕೊಂಡಿದ್ದರು. ಆದರೆ, ಪ್ರಾಥಮಿಕ ತನಿಖೆಯ ಬಳಿಕ ಪ್ರಕರಣದ ಗಂಭೀರತೆ ಅರಿತ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 105 ಹಾಗೂ ಬಾಲಾಪರಾಧ ನ್ಯಾಯ ಕಾಯ್ದೆ ಸೆಕ್ಷನ್ 75 (ಮಕ್ಕಳ ಮೇಲಿನ ದೌರ್ಜನ್ಯ) ಅಡಿಯಲ್ಲಿ ಕಠಿಣ ಪ್ರಕರಣ ದಾಖಲಿಸಿ ಆರೋಪಿ ಶಿಕ್ಷಕಿ ಕುಸುಮಾಳನ್ನು ಬಂಧಿಸಿದ್ದಾರೆ.

ಮುಗಿಲುಮುಟ್ಟಿದ ಪೋಷಕರ ಆಕ್ರಂದನ: ಅಡುಗೆ ಕೆಲಸ ಮಾಡುವ ಕೃಷ್ಣ ಪ್ರಸಾದ್ ಹಾಗೂ ಗೃಹಿಣಿ ಸಾಯಿ ಲಕ್ಷ್ಮೀ ದಂಪತಿಯ ಪುತ್ರನಾಗಿದ್ದ ಪ್ರಣಯ್ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ನಡೆದ ದಿನವೇ ಶಾಲೆಯ ಮುಂದೆ ಜಮಾಯಿಸಿದ ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿ, ತಪ್ಪಿತಸ್ಥ ಶಿಕ್ಷಕಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. “ನಮ್ಮ ಮುದ್ದಿನ ಮಗನನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಪೊಲೀಸರು ಕಠಿಣ ಸೆಕ್ಷನ್ ಹಾಕಿರುವುದು ನಮಗೆ ನ್ಯಾಯ ಸಿಗುವ ಭರವಸೆ ಮೂಡಿಸಿದೆ” ಎಂದು ಬಾಲಕನ ತಂದೆ ಕಣ್ಣೀರಿಟ್ಟಿದ್ದಾರೆ.

ಉನ್ನತ ಮಟ್ಟದ ತನಿಖೆಗೆ ಸಮಿತಿ ರಚನೆ: ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆಯು, ಸಮಗ್ರ ತನಿಖೆಗಾಗಿ ಮೂವರು ಅಧಿಕಾರಿಗಳ ವಿಶೇಷ ಸಮಿತಿಯೊಂದನ್ನು ರಚಿಸಿದೆ. ಪ್ರಾದೇಶಿಕ ಜಂಟಿ ನಿರ್ದೇಶಕರು, ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು ಕಂದಾಯ ವಿಭಾಗಾಧಿಕಾರಿಗಳನ್ನೊಳಗೊಂಡ ಈ ತಂಡವು ಶಾಲೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ವಿದ್ಯಾರ್ಥಿಗಳು ಹಾಗೂ ಇತರ ಶಿಕ್ಷಕರಿಂದ ಮಾಹಿತಿ ಕಲೆಹಾಕಿ ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *