Vedio| ಚಿತ್ರದುರ್ಗ: ವೇದಾಂತ ಕಂಪನಿಯಿಂದ 100 ಕಾರ್ಮಿಕರ ಏಕಾಏಕಿ ವಜಾ ಆರೋಪ; ಮೇಗಳಹಳ್ಳಿ ಮೈನ್ಸ್ ಗೇಟ್ ಮುಂದೆ ಧರಣಿ.

ಭೀಮಸಮುದ್ರ:

ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203

ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಸಮೀಪದ ಮೇಗಳಹಳ್ಳಿ ಗ್ರಾಮದಲ್ಲಿರುವ ವೇದಾಂತ ಐರನ್ & ಸ್ಟೀಲ್ ಲಿಮಿಟೆಡ್‌ನ ಮೇಗಳಹಳ್ಳಿ ಮೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 80ರಿಂದ 100 ಕಾರ್ಮಿಕರನ್ನು ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಖಂಡಿಸಿ ಕಾರ್ಮಿಕರು ಬುಧವಾರ (ಸೆಪ್ಟೆಂಬರ್ 30) ಕಂಪನಿಯ ಗೇಟ್ ಮುಂದೆ ಧರಣಿ ನಡೆಸಿ, ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಒತ್ತಾಯಿಸಿದರು.

ಕಾರ್ಮಿಕರ ಪ್ರಕಾರ, 2015ರಲ್ಲಿ ಸೆನ್ಸ್ ಕಾ ಟ್ಯಾಕ್ ಪ್ರೈವೇಟ್ ಲಿಮಿಟೆಡ್‌ನ ಉಪಗುತ್ತಿಗೆದಾರರ ಮೂಲಕ ಆರು ತಿಂಗಳ ಅವಧಿಗೆ ಕೆಲಸಕ್ಕೆ ಸೇರಿಸಲಾಗಿತ್ತು. ನಂತರ ಸುಮಾರು ನಾಲ್ಕು ವರ್ಷ ಹತ್ತು ತಿಂಗಳ ಕಾಲ ಕೆಲಸ ಮುಂದುವರಿಸಿದ್ದರು. 2020ರ ಜೂನ್ 22ರಿಂದ ಸ್ಥಳೀಯ ಗುತ್ತಿಗೆದಾರರಾದ ಸಾಮ್ರಾಟ್ ಎಂಟರ್‌ಪ್ರೈಸಸ್ ಮೂಲಕ ಕೆಲಸ ನಿರ್ವಹಿಸುತ್ತಿದ್ದರು. ಹೀಗೆ ಹಲವು ವರ್ಷಗಳಿಂದ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರ್ಮಿಕರಿಗೆ 2026ರ ಸೆಪ್ಟೆಂಬರ್ 9ರಂದು ರಾತ್ರಿ 7.30ಕ್ಕೆ ವಾಟ್ಸ್‌ಆ್ಯಪ್ ಮೂಲಕ ಇನ್ನು ಮುಂದೆ ಕೆಲಸಕ್ಕೆ ಬರಬಾರದು ಎಂಬ ಸಂದೇಶ ಕಳುಹಿಸಲಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಕರ್ನಾಟಕ ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಡಾ. ಕೆ.ಎಂ. ಸಂದೇಶ್ ಅವರು ಧರಣಿಯಲ್ಲಿ ಪಾಲ್ಗೊಂಡು ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿದರು. ಹೊರರಾಜ್ಯಗಳಿಂದ ಬಂದ ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ನೀಡಿ, ಕರ್ನಾಟಕದ ಅದರಲ್ಲೂ ಚಿತ್ರದುರ್ಗ ಜಿಲ್ಲೆಯ ಗಣಿಬಾಧಿತ ಪ್ರದೇಶಗಳ ಕಾರ್ಮಿಕರನ್ನು ಕೆಲಸದಿಂದ ಹೊರಹಾಕಿರುವುದು ವಿಷಾದನೀಯ ಎಂದು ಹೇಳಿದರು.

ಕಾರ್ಮಿಕರು ಈ ಉದ್ಯೋಗವನ್ನೇ ನಂಬಿಕೊಂಡು ತಮ್ಮ ಕುಟುಂಬಗಳನ್ನು ನಿರ್ವಹಿಸುತ್ತಿದ್ದಾರೆ. ಪತ್ನಿ, ಮಕ್ಕಳು ಹಾಗೂ ಕುಟುಂಬದ ಭವಿಷ್ಯಕ್ಕಾಗಿ ಈ ಕೆಲಸವನ್ನು ಅವಲಂಬಿಸಿರುವ ಕಾರ್ಮಿಕರನ್ನು ಯಾವುದೇ ಮುನ್ಸೂಚನೆ ಇಲ್ಲದೆ ಕೆಲಸದಿಂದ ತೆಗೆದುಹಾಕಿರುವುದು ಅವರ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ತಿಳಿಸಿದರು.

ಕಾರ್ಮಿಕರಿಗೆ ಮರು ಉದ್ಯೋಗ ನೀಡುವಂತೆ ಕಾರ್ಮಿಕ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶ ರವಾನಿಸಿರುವುದಾಗಿ ತಿಳಿಸಿದ ಡಾ. ಸಂದೇಶ್, ಚಿತ್ರದುರ್ಗ ಜಿಲ್ಲಾಧಿಕಾರಿಗಳು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ಪ್ರಕರಣದಲ್ಲಿ ಆದಷ್ಟು ಬೇಗ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾರ್ಮಿಕರ ಸಮಸ್ಯೆ ಬಗೆಹರಿಯದಿದ್ದರೆ ವಿಧಾನಸೌಧದ ಮುಂದೆ ಧರಣಿ ನಡೆಸುವುದರ ಜೊತೆಗೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ಪಾಲ್ಗೊಂಡ ಕಾರ್ಮಿಕ ಲೋಕೇಶ್ ಮಾತನಾಡಿ, ಹಲವು ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಯಾವುದೇ ಕನಿಕರವಿಲ್ಲದೆ ಏಕಾಏಕಿ ಕೆಲಸದಿಂದ ತೆಗೆದುಹಾಕಿರುವುದು ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉದ್ಯೋಗವನ್ನು ನಂಬಿಕೊಂಡು ಬ್ಯಾಂಕ್ ಹಾಗೂ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದಿದ್ದು, ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬದ ಭವಿಷ್ಯಕ್ಕೆ ತೀವ್ರ ತೊಂದರೆಯಾಗುವ ಆತಂಕ ಎದುರಾಗಿದೆ ಎಂದು ತಿಳಿಸಿದರು.

ತಮ್ಮೊಂದಿಗೆ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ವಜಾಗೊಳಿಸಲಾಗಿದ್ದು, ಕೇವಲ ಒಂದು ವರ್ಷದ ಹಿಂದೆ ಕೆಲಸಕ್ಕೆ ಸೇರಿದ ಕೆಲವರು ಮುಂದುವರಿದಿದ್ದಾರೆ. ಮೇಗಳಹಳ್ಳಿ ಹಾಗೂ ಕಡ್ಲೆಗುದ್ದು ಭಾಗದ ಕಾರ್ಮಿಕರನ್ನು ಕೆಲಸದಲ್ಲಿ ಉಳಿಸಿಕೊಂಡು, ಸ್ಥಳೀಯ ಕಾರ್ಮಿಕರನ್ನು ಕೈಬಿಟ್ಟಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಕೂಡಲೇ ತಮ್ಮನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಇಲ್ಲದಿದ್ದರೆ ಧರಣಿ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಂಪನಿಯ ವ್ಯವಸ್ಥಾಪಕರು ಬುಧವಾರ ಸಂಜೆಯೊಳಗೆ ಈ ಕುರಿತು ನಿರ್ಧಾರ ಕೈಗೊಂಡು ಮಾಹಿತಿ ನೀಡಬೇಕು ಎಂದು ಕಾರ್ಮಿಕರು ಹಾಗೂ ಹೋರಾಟಗಾರರು ಆಗ್ರಹಿಸಿದರು. ಬೇಡಿಕೆ ಈಡೇರದಿದ್ದರೆ ಗುರುವಾರದಿಂದ ಕಂಪನಿಗೆ ಸಂಚರಿಸುವ ವಾಹನಗಳ ಸಂಚಾರ ಹಾಗೂ ರಸ್ತೆ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯ ಯುವ ಘಟಕದ ಅಧ್ಯಕ್ಷ ನವೀನ್ ಕುಮಾರ್, ರಾಜ್ಯ ಕಾರ್ಯದರ್ಶಿ ಅನಿಲ್ ಕುಮಾರ್, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಡಾ. ಭಾಸ್ಕರ್ ಹೆಚ್.ಕೆ., ಮಂಜುನಾಥ್, ಶಿವಪ್ಪ ಕೆ.ವಿ., ಚಿತ್ರದುರ್ಗ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್, ವಿಜಯನಗರ ಜಿಲ್ಲಾಧ್ಯಕ್ಷ ಬರಮಪ್ಪ ಎಂಟುಮನೆ, ಕುಮಾರ್ ಚಿಲೂರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಕಾರ್ಮಿಕರಾದ ಲೋಕಪ್ಪ, ವಸಂತಪ್ಪ, ಸೂರಪ್ಪ, ರಮೇಶ್, ಚಿನ್ನಸ್ವಾಮಿ, ಸುಮನ್, ಗಾಂಧಿ, ಬಸವರಾಜ್, ವೆಂಕಟೇಶ್, ಕುಮಾರ್, ಅಂಜನ್ ಮೂರ್ತಿ, ಮಣಿಕಂಠ ಸ್ವಾಮಿ ಹಾಗೂ ದಿಲೀಪ್ ಸೇರಿದಂತೆ ಹಲವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಕಂಪನಿಯ ಪರವಾಗಿ ಡೆಪ್ಯೂಟಿ ಎಚ್‌ಆರ್ ರೆಡ್, ಕರ್ನಾಟಕ ಮೈನ್ಸ್‌ನ ಶಿವಾಜಿ ಸಿಂಗ್, ಮೈನಿಂಗ್ ಮ್ಯಾನೇಜರ್ ಸೋಮಶೇಖರ್ ರೆಡ್ಡಿ ಹಾಗೂ ಕರ್ನಾಟಕ ಐರನ್ ಓರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಶೈಲ್ ಗೌಡ ಅವರ ಹೆಸರುಗಳನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಲಾಯಿತು.

Leave a Reply

Your email address will not be published. Required fields are marked *