ಚಿತ್ರದುರ್ಗದಲ್ಲಿ ಮಾದಿಗ ಕಾರ್ಯಕರ್ತರ ಸಮಾವೇಶ: ಒಳಮೀಸಲಾತಿ ಜಾರಿಗೆ ವಿಜಯೇಂದ್ರ ಆಗ್ರಹ.

ಚಿತ್ರದುರ್ಗ ಸೆ. 30

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಸ್ವಾತಂತ್ರ್ಯದ ನಂತರ ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಗಳನ್ನು ಕೈಗೊಂಡ ಏಕೈಕ ಪ್ರಧಾನಿ ನರೇಂದ್ರ ಮೋದಿ ಅವರು. ಹಾಗೆಯೇ ರಾಜ್ಯದಲ್ಲೂ ಕೂಡ ಬಿ. ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಳ ಹಾಗೂ ಒಳಮೀಸಲಾತಿ ವರ್ಗೀಕರಣದ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ. ವೈ. ವಿಜಯೇಂದ್ರ ಹೇಳಿದರು.

ಭಾರತೀಯ ಜನತಾ ಪಾರ್ಟಿ,ಚಿತ್ರದುರ್ಗ ವಿಧಾನಸಭಾ ಕ್ಷೇತ್ರ, ನಗರಮಂಡಲದವತಿಯಿಂದ ನಗರದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಮಾದಿಗ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಹಿಂದೆ ಬಿಜೆಪಿ ಸರ್ಕಾರ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಾದಿಗ ಸಮುದಾಯಕ್ಕೆ ಶೇ. 6 ರಷ್ಟು ಮೀಸಲಾತಿ ಹಾಗೂ ಅಲೆಮಾರಿ ಸಮುದಾಯಗಳು ಸೇರಿದಂತೆ ಇತರ ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿತ್ತು. ಆದರೆ, ಸುದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಶೋಷಿತ ವರ್ಗಗಳಿಗೆ ನ್ಯಾಯ ನೀಡಬೇಕು ಎಂಬ ಆಶಯ ಎಂದೂ ಇರಲಿಲ್ಲ ಎಂದು ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಹೆಸರನ್ನು ಜಪಿಸುವ ಕಾಂಗ್ರೆಸ್, ಅವರನ್ನು ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ಕೆಲಸ ಮಾಡಿತ್ತು. ಅಷ್ಟೇ ಅಲ್ಲದೆ, ಅವರ ಅಂತ್ಯಸಂಸ್ಕಾರಕ್ಕೂ ದೆಹಲಿಯಲ್ಲಿ ಜಾಗ ನೀಡಲಿಲ್ಲ. ಕಾಂಗ್ರೆಸ್ ಪಕ್ಷ ಶೋಷಿತ ಸಮುದಾಯಗಳನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆಯೇ ಹೊರತು ಅವರ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಎಚ್ಚರಿಕೆ ನೀಡಿದ ಅವರು, ಶೋಷಿತ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ, ಡಾಕ್ಟರ್, ಇಂಜಿನಿಯರ್ ಆಗುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮೀಸಲಾತಿ ತೀರ್ಮಾನಗಳನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳುವಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಅಷ್ಟೇ ಅಲ್ಲದೆ, ಎಸ್‍ಸಿಪಿ/ಟಿಎಸ್‍ಪಿ ನಿಧಿಯ ಪೈಕಿ ಸುಮಾರು 55,000 ಕೋಟಿ ಹಣವನ್ನು ಬೇರೆ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಬಿ .ವೈ . ವಿಜಯೇಂದ್ರ ದೂರಿದರು. ಅಲ್ಲದೆ, ಉಚಿತ ಗ್ಯಾರಂಟಿಗಳನ್ನು ನೆಪವಾಗಿಟ್ಟುಕೊಂಡು ಗ್ರಾಮೀಣ ಭಾಗದ ಬಸ್ ಸೌಕರ್ಯ, ವಿಕಲಚೇತನರ ಪಿಂಚಣಿ, ಉಚಿತ ಮನೆ, ಗಂಗಾ ಕಲ್ಯಾಣ ಯೋಜನೆ ಹಾಗೂ ರೈತರ ವಿದ್ಯಾನಿಧಿ ಯೋಜನೆ ಗಳಿಗೆ ಕಲ್ಲಾಕಲಾಗಿದೆ ಎಂದು ಕಿಡಿಕಾರಿದ ಅವರು. ಮಾದಿಗ ಸಮುದಾಯವು ಮೌನವಾಗಿದ್ದರೆ ಅದು ದೌರ್ಬಲ್ಯವಲ್ಲ. ಬಿಜೆಪಿ ಸರ್ಕಾರ ಕೊಟ್ಟಿದ್ದ ಹಕ್ಕನ್ನು ಉಳಿಸಿಕೊಳ್ಳಲು ಹಾಗೂ ಕಾಂಗ್ರೆಸ್ ಸರ್ಕಾರದ ನಡವಳಿ ಕೆಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಮುದಾಯದ ಪರವಾಗಿ ತಾವೂ ಹಾಗೂ ತಮ್ಮ ಪಕ್ಷ ಸದಾ ಧ್ವನಿಯಾಗಿ ನಿಲ್ಲುವುದಾಗಿ ತಿಳಿಸಿದರು.

ಸಮುದಾಯದ ಜಾಗೃತಿಗಾಗಿ ಪರಮಪೂಜ್ಯ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ವಹಿಸುತ್ತಿರುವ ಪಾತ್ರವನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು. ಬಿಜೆಪಿ ಸರ್ಕಾರ ಮಾದಿಗ ಹಾಗೂ ಇತರ ಶೋಷಿತ ಸಮುದಾಯಗಳಿಗೆ ನೀಡಿದ್ದ ಮೀಸಲಾತಿ ಹಕ್ಕುಗಳನ್ನು ಹಾಲಿ ಕಾಂಗ್ರೆಸ್ ಸರ್ಕಾರ ಕಸಿದುಕೊಳ್ಳುತ್ತಿದ್ದು, ಸಮುದಾಯವು ಒಗ್ಗೂಡಿ ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಮುಂಬರುವ ದಿನಗಳಲ್ಲಿ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಬೇಕು ಎಂದು ಬಿ .ವೈ . ವಿಜಯೇಂದ್ರ ಕರೆ ನೀಡಿದರು.

ಮಾಜಿ ಮುಖ್ಯಮಂತ್ರಿಗಳು ಸಂಸದರಾದ ಬಸವರಾಜ್ ಎಸ್. ಬೊಮ್ಮಾಯಿ ಮಾತನಾಡಿ, ರಾಜ್ಯದ ಬಡಜನರು ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳನ್ನು ಪಡೆಯಲು ಮತ್ತು ಒಳ ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಲು ನಿರಂತರ ಹೋರಾಟ ನಡೆಸುವುದು ಅಗತ್ಯವಾಗಿದೆ. ರಾಜ್ಯದ ಜನರು ಬಡತನ ಮತ್ತು ಅಭಿವೃದ್ಧಿಯ ಕೊರತೆಯಿಂದ ಬಳಲುತ್ತಿದ್ದರೆ, ಆಡಳಿತಗಾರರು ಶ್ರೀಮಂತರಾಗುತ್ತಿದ್ದಾರೆ ರಾಜ್ಯದ ಜನರ ಬೆವರ ಹರಿವಿನ ಫಲ ಕೆಲವೇ ಜನರ ಪಾಲಾಗುತ್ತಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ ಎಂದರು.

ಕಳೆದ 35 ವರ್ಷಗಳಿಂದ ಒಳ ಮೀಸಲಾತಿಗಾಗಿ ನಿರಂತರ ಮನವಿಗಳನ್ನು ಸಲ್ಲಿಸಲಾಗುತ್ತಿದ್ದರೂ ಸೂಕ್ತ ನ್ಯಾಯ ಸಿಕ್ಕಿರಲಿಲ್ಲ. ಶೋಷಿತ ಸಮುದಾಯಗಳು ತಮ್ಮ ಹಕ್ಕಿಗಾಗಿ ಬೇಡುವುದು ಬಿಟ್ಟು, ಜಾಗವನ್ನು ಖಾಲಿ ಮಾಡಲು ಧೈರ್ಯದಿಂದ ಒತ್ತಾಯಿಸಬೇಕು. ಶೋಷಿತರು ಸ್ವಾಭಿಮಾನಿಗಳಾಗಿದ್ದು, ಈ ದೇಶದ ಸಂಪತ್ತು ಮತ್ತು ಭವಿಷ್ಯದ ಮೇಲೆ ಎಲ್ಲರಂತೆ ಸಮಾನ ಹಕ್ಕನ್ನು ಹೊಂದಿದ್ದಾರೆ ಎಂದು ಅವರು ಪ್ರತಿಪಾದಿಸಿದ ಅವರು. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ದೃಢ ನಿಲುವಿನಿಂದಾಗಿ ಉಚ್ಚ ನ್ಯಾಯಾಲಯದಲ್ಲಿ ರಾಜ್ಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಅಧಿಕಾರವಿದೆ ಎಂಬ ಐತಿಹಾಸಿಕ ತೀರ್ಪು ಬರಲು ಸಾಧ್ಯವಾಯಿತು ಎಂದರು.

ಕಾಂಗ್ರೆಸ್ ಆಡಳಿತದಲ್ಲಿ ಮೀಸಲಾತಿ ವ್ಯಾಪ್ತಿಗೆ ಸತತವಾಗಿ ಜಾತಿಗಳನ್ನು ಸೇರಿಸುತ್ತಾ ಹೋಗಿದ್ದರಿಂದ ಪೈಪೋಟಿ ಹೆಚ್ಚಾಯಿತು ಆದರೆ ಮೀಸಲಾತಿ ಪ್ರಮಾಣ ಹೆಚ್ಚಾಗಲಿಲ್ಲ. ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಬದುಕಿನ ರಾಜಕಾರಣ” ಮಾಡುತ್ತೇವೆ ಎಂದು ಹೇಳುತ್ತಿದ್ದರೆ, ತಕ್ಷಣವೇ ಒಳ ಮೀಸಲಾತಿಯನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸಿ ಆದೇಶ ಹೊರಡಿಸುವ ಮೂಲಕ ಅದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿ ಕರ್ನಾಟಕದಲ್ಲಿ ಒಳ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುವವರೆಗೆ ವಿಶ್ರಮಿಸದೆ, ತಮ್ಮ ಹಕ್ಕುಗಳು ಮತ್ತು ಮಕ್ಕಳ ಭವಿಷ್ಯಕ್ಕಾಗಿ ಕ್ರಾಂತಿಕಾರಿ ಹೋರಾಟವನ್ನು ಮುಂದುವರಿಸಬೇಕೆಂದು ಬೊಮ್ಮಾಯಿ ವಿನಂತಿಸಿದರು.

ಕೇಂದ್ರದ ಮಾಜಿ ಸಚಿವರಾದ ಎ.ನಾರಾಯಣ ಸ್ವಾಮಿ ಮಾತನಾಡಿ, ಜ್ಯೋತಿರಾವ್ ಫುಲೆ ಅವರು ಸುಮಾರು 144 ವರ್ಷಗಳ ಹಿಂದೆ ಶೋಷಿತರ ಮೀಸಲಾತಿ ಪರವಾಗಿ ಧ್ವನಿ ಎತ್ತಿದ್ದರು. ಅದೇ ರೀತಿ ಸಾಹು ಮಹಾರಾಜರು 122 ವರ್ಷಗಳ ಹಿಂದೆ ತಮ್ಮ ಆಡಳಿತದಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿದ್ದರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮೀಸಲಾತಿಗೆ ಸ್ಪಷ್ಟ ರೂಪ ನೀಡಿದರು ಕರ್ನಾಟಕದಲ್ಲಿ ಮಾದಿಗ ಸಮುದಾಯವು ಒಳಮೀಸಲಾತಿಗಾಗಿ ಸುಮಾರು 35 ವರ್ಷಗಳಿಂದ ಹಾಗೂ ಆಂಧ್ರಪ್ರದೇಶದಲ್ಲಿ 48 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಕ್ಯಾಬಿನೆಟ್‍ನಲ್ಲಿ ‘ಒಳಮೀಸಲಾತಿ’ ಎಂಬ ಪದವನ್ನು ಬಳಸಿದರೂ, ಅದನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸದೆ ಅಥವಾ ಯಾವುದೇ ಹುದ್ದೆಗಳ ನೇಮಕಾತಿ ಮಾಡದೆ ಸಮುದಾಯಕ್ಕೆ ವಂಚಿಸುತ್ತಿದೆ ಎಂದು ಆರೋಪಿಸಲಾಯಿತು. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಹಾಗೂ ಮೀಸಲಾತಿ ವಿಚಾರದಲ್ಲಿ ದಿಟ್ಟ ನಿರ್ಧಾರ ತಗೊಂಡು ಬಂಡೆಯಂತೆ ನಿಂತಿದ್ದರುಸಂವಿಧಾನಬದ್ಧವಾಗಿ ಪ್ರತಿಯೊಂದು ರಾಜ್ಯದಲ್ಲೂ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಹಾಗೂ ಒಳಮೀಸಲಾತಿ ಹಂಚಿಕೆಯಾಗಬೇಕು. ಪ್ರಸ್ತುತ ಸರ್ಕಾರವು ತಕ್ಷಣವೇ ಶೋಷಿತ ವರ್ಗಗಳ ಬೇಡಿಕೆಗಳನ್ನು ಈಡೇರಿಸಬೇಕು; ಇಲ್ಲದಿದ್ದರೆ ಮಾದಿಗ ಸಮುದಾಯವು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದೆ ಮತ್ತು ಬಲವಾದ ಹೋರಾಟವನ್ನು ರೂಪಿಸಲಿದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಮಾದಾರ ಗುರು ಪೀಠದ ಡಾ. ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿಯವರು ತಮ್ಮ ಆರ್ಶಿವಚನದಲ್ಲಿ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಕೊಡುಗೆ ಅಪಾರವಾಗಿದೆ. ಶೋಷಿತ ಹಾಗೂ ಹಿಂದುಳಿದ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಒಳಮೀಸಲಾತಿ ಜಾರಿಗೆ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಗಳು ಐತಿಹಾಸಿಕ ಕೊಡುಗೆ ನೀಡಿವೆ ಮಾದಿಗ ಸಮು ದಾಯ ಸೇರಿದಂತೆ 101 ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ದಿಟ್ಟ ನಿರ್ಧಾರಗಳನ್ನು ಕೈಗೊಂಡು ಒಳಮೀಸಲಾತಿಗೆ ಹೆಚ್ಚಿನ ಶ್ರಮ ಮತ್ತು ಅನುದಾನ ನೀಡಿದ ಮೊದಲ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೋಷಿತ ಸಮುದಾಯಗಳಿಗೆ ಬರೋಬ್ಬರಿ 100 ಕೋಟಿ ರೂಪಾಯಿಗಳ ಅನುದಾನದ ಆದೇಶ ಹೊರಡಿಸುವ ಮೂಲಕ ಮಠ-ಮಾನ್ಯಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಷ್ಟೇ ಅಲ್ಲದೆ, ಸ್ವಂತ ಜಮೀನು ಹಾಗೂ ಸ್ಮಶಾನಕ್ಕೂ ಜಾಗವಿಲ್ಲದೆ ಹೋರಾಟ ಮಾಡುತ್ತಿದ್ದ ಸಮುದಾಯಕ್ಕೆ ಬೃಹತ್ ಮಠ ನಿರ್ಮಾಣ ಮಾಡಲು 83 ಎಕರೆ ಜಮೀನನ್ನು ಮಂಜೂರು ಮಾಡಿ ಭೂಮಿಪೂಜೆಗೆ ಸಂಕಲ್ಪ ತೊಟ್ಟ ಬೊಮ್ಮಾಯಿ ಅವರ ಕೊಡುಗೆಯನ್ನು ಅತ್ಯಂತ ಗೌರವದಿಂದ ಸ್ಮರಿಸಿ ಶೋಷಿತ ಸಮುದಾಯಗಳು ಹಳೆಯ ವ್ಯವಸ್ಥೆಯಿಂದ ಹೊರಬಂದು ಸಮಾಜದಲ್ಲಿ ಆರ್‍ಸಿಸಿ ಕಟ್ಟಡಗಳಂತೆ ದೃಢವಾಗಿ ಹೊರಹೊಮ್ಮಬೇಕು ಎನ್ನುವುದೇ ಮುಖ್ಯ ಉದ್ದೇಶವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಸಂಸದರಾದ ಗೋವಿಂದ ಎಂ. ಕಾರಜೋಳ ಕೇಂದ್ರದ ಮಾಜಿ ಸಚಿವರಾದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಎಸ್.ಕೆ .ಬಸವರಾಜ್ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಸಾಮರಸ್ಯ ಸಂಚಾಲಕರಾದ ವಾದಿರಾಜ್ ಬಸವರಾಜ, ಕೆ.ಟಿ.ಕುಮಾರಸ್ವಾಮಿ, ಶ್ರೀ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಹೂಡಿ ಮಂಜುನಾಥ್, ಹನುಮಂತೇಗೌಡ, ಮಾಧುರಿ ಗೀರೀಶ್ ಎ.ಮುರಳಿ, ಸಂಪತ್ ಕುಮಾರ್, ಮೀಸೆ ಮಹಾಲಿಂಗಪ್ಪ, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಪರೀಕ್ಷಾಂಗ ವಿಭಾಗದ ಮಾಜಿ ಕುಲ ಸಚಿವರಾದ ಡಾ. ಹೆಚ್.ವಿಶ್ವನಾಥ್ ಮಂಜುನಾಥ್ ಭರತ್, ಅನಿಲ್‍ಕುಮಾರ್, ಅರುಣ್‍ಕುಮಾರ್, ವೆಂಕಟೇಶ್, ಸಿದ್ದೇಶ್ರಣ್ಣ, ಅನಿತ್‍ಕುಮಾರ್, ದೇವೇಂದ್ರನಾಥ್, ವಿಶ್ವನಾಥ್, ಕಿರಣ್, ಮಂಜುನಾಥ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಯೋಜಕರಾದ ಜಿ.ಎಚ್.ಮೋಹನ್ ಸ್ವಾಗತಿಸಿದರು, ಪರಶುರಾಮ್ ವಂದಿಸಿದರು.

Leave a Reply

Your email address will not be published. Required fields are marked *