ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಅ. 17
ಕಳೆದ ತಿಂಗಳು 17ನೇ ತಾರೀಕಿನಿಂದ ದೇಶದ ಪ್ರಧಾನ ಮಂತ್ರಿ ನರೇಂಧ್ರ ಮೋದಿಯವರ ಜನ್ಮ ದಿನದಂದು ಆರಂಭವಾದ ‘ಸೇವಾ ಸಂಕಲ್ಪ’ ಅಭಿಯಾನದ ಅಂತ್ಯದ ದಿನದ ಅಂಗವಾಗಿ ಚಿತ್ರದುರ್ಗದಲ್ಲಿ ಬಿಜೆಪಿ ಜಿಲ್ಲಾ ಸಮಿತಿವತಿಯಿಂದ ಜಿಲ್ಲಾ ಮಟ್ಟದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ವಿಶೇಷ ರಂಗೋಲಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಾವಣಗೆರೆ ವಿಭಾಗದ ಪ್ರಭಾರಿಗಳಾದ ಮೇಘರಾಜ್ ಮಾತನಾಡಿ, ದೇಶಾದ್ಯಂತ ಸಮಾಜದ ವಿವಿಧ ಸ್ತರಗಳನ್ನು ತಲುಪುವ ಉದ್ದೇಶದಿಂದ ಸಂಘಟನೆಯು ರಕ್ತದಾನ ಶಿಬಿರ, ಪರಿಸರ ಜೀರ್ಣೋದ್ಧಾರ, ಸೇವಾ ಚಟುವಟಿಕೆಗಳು,
ವಿಕಲಚೇತನರಿಗೆ ಸಹಾಯ, ದೇವಸ್ಥಾನಗಳ ಜೀರ್ಣೋ ದ್ಧಾರ, ಸಮಾಜದಲ್ಲಿ ಜಾಗೃತಿ ಮೂಡಿಸುವುದು ಹಾಗೂ ಹಿರಿಯ ನಾಗರಿಕರಿಗೆ ಡಿಜಿಟಲ್ ಪಾವತಿ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಇದರ ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ವಿವಿಧ ಸುಧಾರಣಾ
ಕಾರ್ಯಕ್ರಮಗಳ ಬಗ್ಗೆ ಮಹಿಳೆಯರ ವಲಯದಲ್ಲಿ ಜಾಗೃತಿ ಮೂಡಿಸಲು ರಂಗೋಲಿ ಬಿಡಿಸುವ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು.
ಚಿತ್ರದುರ್ಗದಲ್ಲಿ ನಡೆದ ಈ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಹಿಳೆಯರೆಲ್ಲರೂ ಸೇರಿ ಚಂದ್ರಯಾನ ಯಶಸ್ಸು, ಉಜ್ವಲ ಗ್ಯಾಸ್ ಯೋಜನೆ, ಶೌಚಾಲಯ ನಿರ್ಮಾಣ ಹಾಗೂ ‘ಬೇಟಿ ಬಚಾವೋ, ಬೇಟಿ ಪಢಾವೋ’ ಮುಂತಾದ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳನ್ನು ರಂಗೋಲಿಯಲ್ಲಿ ಚಿತ್ರಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ರಂಗೋಲಿ ಕಲೆಯ ಮುಖಾಂತರ ಜನಸಾಮಾನ್ಯರಿಗೆ ತಲುಪಿಸುವ ಈ ವಿನೂತನ ಅಭಿಯಾನವು ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸಲು
ಎಲ್ಲರೂ ಬೆಂಬಲ ನೀಡಬೇಕೆಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ರೇಖಾ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಭಾರತೀಯ ಜನತಾ ಪಾರ್ಟಿ ವತಿಯಿಂದ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17 ರವರೆಗೆ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸೇವಾ ಸಂಕಲ್ಪ ಅಭಿಯಾನದಡಿ ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರಗಳು ಹಾಗೂ ರಾಷ್ಟ್ರೀಯ ರಂಗೋಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನ ಮಂತ್ರಿಯಾಗಿ ಕಳೆದ 25 ವರ್ಷಗಳ ಆಡಳಿತದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಆಡಳಿತವನ್ನು ನಿರ್ವಹಿಸಿದ್ದಾರೆ. ಈ ಕಾರ್ಯಕ್ರಮದ
ಮುಖೇನ ಸೇವಾ ಸಂಕಲ್ಪ ಅಭಿಯಾನದ ಅಡಿಯಲ್ಲಿ ಅವರಿಗೆ ಇನ್ನೂ ಹತ್ತಾರು ವರ್ಷಗಳ ಕಾಲ ಆಡಳಿತಾವಧಿಯಲ್ಲಿ ಉಜ್ವಲ ನಿರ್ಮಿಸುವ ನಿಟ್ಟಿನಲ್ಲಿ ಆಶಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ರಂಗೋಲಿ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಅಭಿಯಾನವು ದೇಶಾದ್ಯಂತ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತಿ ಮನೆಮನೆಗೂ ಮುಟ್ಟುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರೇಖಾ ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ನಾಗರಾಜ್ ಬೇದ್ರೇ, ಶಂಭು, ಕಾಂಚನ, ಸುಮಾ, ಬಸಮ್ಮ, ವೀಣಾ, ಸುಶೀಲಬಾಯಿ ಉಪಸ್ಥಿತರಿದ್ದರು.