India Women vs Zimbabwe Women: ನಾಯಕಿಯಾಗಿ ಸ್ಮೃತಿ ಮಂಧಾನಗೆ ಒಲಿದ ಚೊಚ್ಚಲ ಸರಣಿ ಗೆಲುವು.

ಭಾರತ ಹಾಗೂ ಜಿಂಬಾಬ್ವೆ ಮಹಿಳಾ ತಂಡಗಳ ನಡುವೆ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 9 ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿದೆ. ಈ ಭರ್ಜರಿ ಜಯದೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ವಶಪಡಿಸಿಕೊಂಡಿದೆ. ವಿಶೇಷವೆಂದರೆ, ಸ್ಮೃತಿ ಮಂಧಾನ ಅವರು ಪೂರ್ಣ ಪ್ರಮಾಣದ ನಾಯಕಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಒಲಿದ ಮೊದಲ ಸರಣಿ ಗೆಲುವು ಇದಾಗಿದೆ.

ಅಲ್ಪ ಮೊತ್ತಕ್ಕೆ ಕುಸಿದ ಜಿಂಬಾಬ್ವೆ, ಮಿಂಚಿದ ಕನ್ನಡತಿ ನಿಕಿ: ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಜಿಂಬಾಬ್ವೆ ಮಹಿಳಾ ತಂಡ, ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಗೆ ಸಿಲುಕಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 102 ರನ್ ಕಲೆಹಾಕಿತು. ತಂಡದ ಪರ ಚಿಪೊ ಮುಗೆರಿ-ತಿರಿಪಾನೊ 32 ಎಸೆತಗಳಲ್ಲಿ 34 ರನ್ ಗಳಿಸಿದರೆ, ನಾಯಕಿ ಜೋಸೆಫಿನ್ ನ್ಕೊಮೊ 35 ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಇವರನ್ನು ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಸಂಪೂರ್ಣ ವಿಫಲರಾದರು.

ಭಾರತದ ಬೌಲಿಂಗ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕನ್ನಡಿಗತಿ ನಿಕಿ ಪ್ರಸಾದ್, ತಮ್ಮ 2 ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 7 ರನ್ ನೀಡಿ 2 ಪ್ರಮುಖ ವಿಕೆಟ್ ಕಬಳಿಸಿ ಮಿಂಚಿದರು. ಉಳಿದಂತೆ ನಂದಿನಿ ಶರ್ಮಾ, ಕ್ರಾಂತಿ ಗೌಡ್, ದೀಪ್ತಿ ಶರ್ಮಾ ಮತ್ತು ಶ್ರೀ ಚರಣಿ ತಲಾ ಒಂದು ವಿಕೆಟ್ ಪಡೆದು ಎದುರಾಳಿಯನ್ನು ನಿಯಂತ್ರಿಸಿದರು.

ಶಫಾಲಿ, ಮಂಧಾನ ಸ್ಫೋಟಕ ಆಟ: 103 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಶಫಾಲಿ ವರ್ಮಾ ಮತ್ತು ನಾಯಕಿ ಸ್ಮೃತಿ ಮಂಧಾನ ಬಿರುಗಾಳಿಯ ಆರಂಭ ಒದಗಿಸಿದರು. ಜಿಂಬಾಬ್ವೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ, ಪವರ್ ಪ್ಲೇಯಲ್ಲೇ ಪಂದ್ಯದ ಚಿತ್ರಣ ಬದಲಿಸಿತು. ಕೇವಲ 25 ಎಸೆತಗಳನ್ನು ಎದುರಿಸಿದ ಶಫಾಲಿ 55 ರನ್ ಸಿಡಿಸಿ ಗೆಲುವಿನ ಅಡಿಪಾಯ ಹಾಕಿಕೊಟ್ಟರು.

ಶಫಾಲಿ ಔಟಾದ ಬಳಿಕವೂ ರನ್ ವೇಗಕ್ಕೆ ಬ್ರೇಕ್ ಹಾಕದ ನಾಯಕಿ ಸ್ಮೃತಿ ಮಂಧಾನ, 25 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 47 ರನ್ ಚಚ್ಚಿದರು. ಅನುಷ್ಕಾ ಶರ್ಮಾ ಅಜೇಯ 1 ರನ್ ಗಳಿಸಿದರು. ಪರಿಣಾಮ ಭಾರತ ಕೇವಲ 8.5 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿ, ಭರ್ಜರಿ ಜಯೋತ್ಸವ ಆಚರಿಸಿತು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group
Join WhatsApp Group

🔵 Facebook Page
Follow Facebook Page

⚫ Twitter / X
Follow on X (Twitter)

🟣 Threads
Follow on Threads

🟠 Instagram
Follow on Instagram

🔵 Telegram
Join Telegram Channel

🟢 WhatsApp Channel
Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *