ಕನ್ನಡದ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಅನಾವರಣ – ದೇಶ-ವಿದೇಶಗಳಿಂದ ಶ್ರೋತೃಗಳ ಅಭೂತಪೂರ್ವ ಸ್ಪಂದನೆ
ಕನ್ನಡದ ಬಗ್ಗೆ ಮಾತನಾಡಲು ದಿನದ 24 ಗಂಟೆಗಳೂ ಸಾಲದು ಎಂಬ ಮಾತನ್ನು ಅಕ್ಷರಶಃ ಸತ್ಯವಾಗಿಸಿದ ಹೆಗ್ಗಳಿಕೆ ರೇಡಿಯೋ ಶಿವಮೊಗ್ಗ 90.8 ಎಫ್.ಎಂಗೆ ಸಲ್ಲುತ್ತದೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1ರ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 2ರ ಬೆಳಗ್ಗೆ 6 ಗಂಟೆಯವರೆಗೆ ಸತತ 24 ಗಂಟೆಗಳ ಕಾಲ ನಿರಂತರ ನೇರಪ್ರಸಾರ ಕಾರ್ಯಕ್ರಮ ಆಯೋಜಿಸುವ ಮೂಲಕ ರೇಡಿಯೋ ಶಿವಮೊಗ್ಗ ಮಾಧ್ಯಮ ಕ್ಷೇತ್ರದಲ್ಲಿ ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.
ಕನ್ನಡ ನಾಡಿನ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ರಾಜಮನೆತನಗಳು, ಜನಪದ, ಕಲೆ, ಸಿನಿಮಾ, ಕ್ರೀಡೆ ಸೇರಿದಂತೆ ಕನ್ನಡದ ವೈವಿಧ್ಯಮಯ ವಿಷಯಗಳನ್ನು ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮ ರೂಪಿಸಲಾಗಿತ್ತು. ದೇಶದ ವಿವಿಧ ರಾಜ್ಯಗಳಿಂದ ಮಾತ್ರವಲ್ಲದೆ ಐರ್ಲೆಂಡ್, ಅಮೆರಿಕಾ ಮತ್ತು ಇಂಗ್ಲೆಂಡ್ನಿಂದಲೂ ಕನ್ನಡಾಭಿಮಾನಿಗಳು ಸಂದೇಶಗಳನ್ನು ಕಳುಹಿಸಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೆಹಲಿ, ಕಾಶ್ಮೀರ, ಕೇರಳದ ಕಾಸರಗೋಡು, ಅಸ್ಸಾಂ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹಾಗೂ ಕರ್ನಾಟಕದ ಹಾಸನ, ಬೆಂಗಳೂರು, ಕುಣಿಗಲ್, ಬಾಗಲಕೋಟೆ, ಕುಂದಾಪುರ, ಬೆಳ್ತಂಗಡಿ, ಪುತ್ತೂರು, ಹೊಳೆನರಸೀಪುರ, ಧಾರವಾಡ, ಕಲಬುರಗಿ, ಉಡುಪಿ, ಬಳ್ಳಾರಿ, ದಾವಣಗೆರೆ, ಹಾವೇರಿ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಿಂದ ಶ್ರೋತೃಗಳು ಕರೆ ಮಾಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ವಿಶೇಷವಾಗಿ ದೃಷ್ಟಿದೋಷ ಹೊಂದಿದ್ದ ನಾಲ್ವರು ವಿಶೇಷಚೇತನರು ಇತರರ ಸಹಾಯದಿಂದ ಸಂದೇಶಗಳನ್ನು ಕಳುಹಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯೋಮಾನದವರು ಹಗಲು-ರಾತ್ರಿ ಎನ್ನದೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ವಿವಿಧ ವಿಷಯಗಳೊಂದಿಗೆ 24 ಗಂಟೆಗಳ ಕನ್ನಡ ಪಯಣ
ಬೆಳಗ್ಗೆ 6 ಗಂಟೆಗೆ ರೇಡಿಯೋ ಶಿವಮೊಗ್ಗದ ನಿರ್ದೇಶಕ ಜನಾರ್ಧನ್ ಜಿ.ಎಲ್. ಅವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ನಿರಂತರ ನೇರಪ್ರಸಾರ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಚಾಲನೆ ನೀಡಿದರು.

ನಿಲಯದ ನಿರೂಪಕ ಆರ್.ಜೆ. ಚೇತನ್ ಕುಮಾರ್ ಸಿ. ಅವರು ದಿನದ 24 ಗಂಟೆಗಳ ಕಾಲ ಶ್ರೋತೃಗಳೊಂದಿಗೆ ಕನ್ನಡದ ವಿವಿಧ ವಿಷಯಗಳನ್ನು ಹಂಚಿಕೊಂಡರು. ಇವರೊಂದಿಗೆ ವಿವಿಧ ಸಮಯಗಳಲ್ಲಿ ನಿರೂಪಕರು ಕಾರ್ಯಕ್ರಮ ನಡೆಸಿಕೊಟ್ಟರು.
- ಬೆಳಗ್ಗೆ 6ರಿಂದ 9ರವರೆಗೆ: ಆರ್.ಜೆ. ಶ್ವೇತಾ ಅವರು ಕದಂಬರ ಇತಿಹಾಸ ಮತ್ತು ಕನ್ನಡ ನಾಡಿನ ಕುರಿತು ಮಾತನಾಡಿದರು.
- ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ: ಆರ್.ಜೆ. ಮಹಾಲಕ್ಷ್ಮಿ ಅವರು ಗಂಗರ ಇತಿಹಾಸ, ಸಾಂಸ್ಕೃತಿಕ ಕೊಡುಗೆಗಳು ಮತ್ತು ಕನ್ನಡ ಸಾಹಿತ್ಯದ ಕುರಿತು ಮಾಹಿತಿ ನೀಡಿದರು.
- ಮಧ್ಯಾಹ್ನ 12ರಿಂದ 2ರವರೆಗೆ: ಆರ್.ಜೆ. ಪವಿತ್ರ ದಿನೇಶ್ ಅವರು ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಜನಪದ ಸಂಸ್ಕೃತಿಯನ್ನು ಪರಿಚಯಿಸಿದರು.
- ಮಧ್ಯಾಹ್ನ 2ರಿಂದ 3ರವರೆಗೆ: ಆರ್.ಜೆ. ದಿನೇಶ್ ಹೊಸನಗರ ಅವರು ವಚನ ಮತ್ತು ದಾಸ ಸಾಹಿತ್ಯದ ಕುರಿತು ಮಾತನಾಡಿದರು.
- ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ: ಆರ್.ಜೆ. ಅರ್ಪಿತ ಅವರು ವಿಜಯನಗರ ಸಾಮ್ರಾಜ್ಯ ಮತ್ತು ಕನ್ನಡ ಸಿನಿಮಾಗಳ ಕುರಿತು ವಿಷಯಗಳನ್ನು ಹಂಚಿಕೊಂಡರು.
- ಸಂಜೆ 6ರಿಂದ ರಾತ್ರಿ 9ರವರೆಗೆ: ಆರ್.ಜೆ. ರಕ್ಷಿತಾ ಹೊಳ್ಳ ಅವರು ಹೊಯ್ಸಳ ಸಾಮ್ರಾಜ್ಯ ಮತ್ತು ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಕುರಿತು ಮಾಹಿತಿ ನೀಡಿದರು.
- ರಾತ್ರಿ 9ರಿಂದ 12ರವರೆಗೆ: ಆರ್.ಜೆ. ಶ್ರೀಧರ್ ಅವರು ಮೈಸೂರು ಒಡೆಯರು ಮತ್ತು ಕರ್ನಾಟಕ ಏಕೀಕರಣ ಚಳವಳಿಯ ಕುರಿತು ಮಾತನಾಡಿದರು.
- ರಾತ್ರಿ 12ರಿಂದ ಬೆಳಗ್ಗೆ 6ರವರೆಗೆ: ಕಾರ್ಯಕ್ರಮ ಸಂಯೋಜನಾಧಿಕಾರಿ ಮಂಜುನಾಥ್ ಅವರು ಭಾಷೆಗಳ ಉಗಮ, ಸಿನಿಮಾ, ಸಾಹಿತ್ಯ, ಕ್ರೀಡೆ ಸೇರಿದಂತೆ ಹಲವು ವಿಷಯಗಳ ಕುರಿತು ಶ್ರೋತೃಗಳೊಂದಿಗೆ ಸಂವಾದ ನಡೆಸಿದರು.
ಪ್ರತಿ ಗಂಟೆಗೊಮ್ಮೆ ಕೇಳಲಾಗುತ್ತಿದ್ದ ಬಂಪರ್ ಪ್ರಶ್ನೆಗಳು ಮತ್ತು ಸಂವಾದದ ಮಧ್ಯೆ ಕೇಳಲಾಗುತ್ತಿದ್ದ ಕುತೂಹಲಕಾರಿ ಪ್ರಶ್ನೆಗಳು ಶ್ರೋತೃಗಳನ್ನು ಕಾರ್ಯಕ್ರಮದೊಂದಿಗೆ ನಿರಂತರವಾಗಿ ಬೆಸೆದಿದ್ದವು.
ದೇಶ-ವಿದೇಶಗಳಿಂದ ಕನ್ನಡಿಗರ ಅಭೂತಪೂರ್ವ ಸ್ಪಂದನೆ
ಐರ್ಲೆಂಡ್ನಲ್ಲಿ ವಾಸವಾಗಿರುವ ರಾಜೇಶ್ವರಿ ಅವರು ಮಾತನಾಡಿ, ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಒಟ್ಟಾಗಿ ಸೇರಿ ಹಬ್ಬಗಳನ್ನು ಆಚರಿಸುವ ಮೂಲಕ ಕನ್ನಡದ ನಂಟನ್ನು ಉಳಿಸಿಕೊಂಡಿದ್ದೇವೆ. ಕನ್ನಡ ನಮ್ಮೆಲ್ಲರನ್ನು ಬೆಸೆಯುವ ಭಾಷೆಯಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಮಾಜಿ ಸೈನಿಕರು ತಮ್ಮ ಸೇವಾವಧಿಯಲ್ಲಿ ವಿವಿಧ ಸ್ಥಳಗಳಲ್ಲಿ ಕನ್ನಡಿಗರನ್ನು ಭೇಟಿಯಾದಾಗ ಉಂಟಾಗುತ್ತಿದ್ದ ಅನುಭವಗಳು ಹಾಗೂ ವಿದೇಶಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದ ರೀತಿಯನ್ನು ವಿವರಿಸಿದರು.
ದೃಷ್ಟಿದೋಷ ಹೊಂದಿರುವ ಶಾಂತಾ ಧಾವಸ್ಕರ್ ಅವರು ಮನೆಯ ಮಕ್ಕಳ ಸಹಾಯದಿಂದ ಕಾರ್ಯಕ್ರಮದ ಪ್ರಶ್ನೆಗಳಿಗೆ ಉತ್ತರ ಕಳುಹಿಸುತ್ತಿದ್ದರು. ಮಕ್ಕಳು ಮಲಗಿದ ನಂತರ ಉತ್ತರಿಸಲು ಸಾಧ್ಯವಾಗದಿದ್ದರೂ ಕಾರ್ಯಕ್ರಮವನ್ನು ಕೇಳುವುದನ್ನು ಮುಂದುವರಿಸುವುದಾಗಿ ದೂರವಾಣಿ ಮೂಲಕ ತಿಳಿಸಿದ್ದು ಎಲ್ಲರ ಗಮನ ಸೆಳೆಯಿತು.
ಉಡುಪಿಯ ಅಂಧ ಶ್ರೋತೃ ಕೃಷ್ಣಪ್ಪ ಅವರು ರಾತ್ರಿ 12 ಗಂಟೆಯವರೆಗೆ ಕಾರ್ಯಕ್ರಮ ಆಲಿಸಿ, ಆರೋಗ್ಯದ ಸಮಸ್ಯೆಯಿಂದಾಗಿ ಅನಿವಾರ್ಯವಾಗಿ ವಿಶ್ರಾಂತಿ ಪಡೆಯಬೇಕಾಗಿದೆ ಎಂದು ತಿಳಿಸಿದರು.
ಹಾಸನದ ಶಾಂತಿನಿ ಅವರು ಹಾಸನಾಂಬ ದೇವಿಯ ದರ್ಶನಕ್ಕಾಗಿ ಸರದಿಯಲ್ಲಿ ನಿಂತಿದ್ದಾಗಲೂ ಕಾರ್ಯಕ್ರಮದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಮೊಬೈಲ್ ಸಿಗ್ನಲ್ ಸಮಸ್ಯೆ ಎದುರಾಗಬಹುದು ಎಂಬ ಆತಂಕದ ನಡುವೆಯೂ ಸಾಧ್ಯವಾದಷ್ಟು ಸಮಯ ಭಾಗವಹಿಸುತ್ತೇನೆ ಎಂದು ತಿಳಿಸಿ ಬೆಳಗ್ಗೆ 5.30ರವರೆಗೂ ಕಾರ್ಯಕ್ರಮದೊಂದಿಗೆ ಸಂಪರ್ಕದಲ್ಲಿದ್ದರು.
ಇನ್ನು ಶಾಂತಾ ಶ್ರೀರಾಮಪುರ ಮತ್ತು ಸುಬ್ರಮಣ್ಯ ಪೆತ್ತನಹಳ್ಳಿ ಸೇರಿದಂತೆ ಹಲವು ಶ್ರೋತೃಗಳು ಸುಮಾರು 24 ಗಂಟೆಗಳ ಕಾಲ ಕಾರ್ಯಕ್ರಮ ಆಲಿಸಿ, ಬಹುತೇಕ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಕನ್ನಡದ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.
ಐದು ತಿಂಗಳ ಸಿದ್ಧತೆಗೆ ಸಿಕ್ಕ ಯಶಸ್ಸು
ಈ ವಿಶೇಷ ಕಾರ್ಯಕ್ರಮಕ್ಕಾಗಿ ಆರ್.ಜೆ. ಚೇತನ್ ಕುಮಾರ್ ಅವರ ನೇತೃತ್ವದಲ್ಲಿ ಕಳೆದ ಐದು ತಿಂಗಳಿನಿಂದ ಸಿದ್ಧತೆ ನಡೆಸಲಾಗಿತ್ತು. ನವೆಂಬರ್ 1ರಂದು ಆರಂಭವಾದ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆಯಿತು.
ಕೆಲವು ಶ್ರೋತೃಗಳು ನವೆಂಬರ್ 1ರ ಬೆಳಗ್ಗೆಯಿಂದ ಪ್ರಶ್ನೆಗಳಿಗೆ ಉತ್ತರಿಸಲು ಆರಂಭಿಸಿ ನವೆಂಬರ್ 2ರ ಬೆಳಗ್ಗೆ 6 ಗಂಟೆಯವರೆಗೂ ಕಾರ್ಯಕ್ರಮದೊಂದಿಗೆ ಸಂಪರ್ಕದಲ್ಲಿದ್ದರು. ಪ್ರತಿಯೊಂದು ಗಂಟೆಯ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ತಾವೂ 24 ಗಂಟೆಗಳ ಕನ್ನಡ ಸಂಭ್ರಮದ ಭಾಗವಾದರು.
ಶ್ರೋತೃಗಳಾದ ಭಾರತೀ ಪ್ರಕಾಶ್, ಕುಸುಮ ಸೇರಿದಂತೆ ಹಲವರು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. 24 ಗಂಟೆಗಳ ಕಾಲ ನಿದ್ದೆ ಮಾಡದೆ ಕಾರ್ಯಕ್ರಮ ಆಲಿಸುವ ಮೂಲಕ ಕನ್ನಡದ ಅಪರೂಪದ ಸಂಗತಿಗಳು, ಇತಿಹಾಸ ಮತ್ತು ಹಲವು ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು ಎಂದು ಸಂತಸ ಹಂಚಿಕೊಂಡರು.
ಕಾರ್ಯಕ್ರಮದ ಸಂದರ್ಭದಲ್ಲಿ ಕನ್ನಡ ಏಕೀಕರಣ ಗೀತೆಗಳು ಹಾಗೂ ಕನ್ನಡದ ಪರಂಪರೆಯನ್ನು ಸಾರುವ ಗೀತೆಗಳನ್ನು ಪ್ರಸಾರ ಮಾಡುವ ಮೂಲಕ ಕನ್ನಡ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಾಧ್ಯಮ ಲೋಕದಲ್ಲಿ ಹೊಸ ಪ್ರಯತ್ನ
ಸಾಮಾನ್ಯ ಜನರನ್ನು ತಲುಪುವುದು, ಕನ್ನಡದ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಶ್ರೋತೃಗಳನ್ನೇ ಕಾರ್ಯಕ್ರಮದ ಸಕ್ರಿಯ ಭಾಗವಾಗಿಸುವ ಉದ್ದೇಶವನ್ನು ಈ ಪ್ರಯತ್ನ ಯಶಸ್ವಿಯಾಗಿ ಈಡೇರಿಸಿದೆ.
ಕನ್ನಡದ ಬಗ್ಗೆ ಮಾತನಾಡಲು 24 ಗಂಟೆಗಳೂ ಸಾಲದು ಎಂಬ ಮಾತನ್ನು ಕೇವಲ ಘೋಷಣೆಯಾಗಿ ಉಳಿಸದೆ, ನಿರಂತರ ನೇರಪ್ರಸಾರದ ಮೂಲಕ ಕಾರ್ಯರೂಪಕ್ಕೆ ತಂದಿರುವುದು ರೇಡಿಯೋ ಶಿವಮೊಗ್ಗ 90.8 ಎಫ್.ಎಂನ ವಿಶೇಷ ಸಾಧನೆಯಾಗಿದೆ.
ಈ ಮಹತ್ವದ ಕಾರ್ಯಕ್ರಮದ ರೂವಾರಿಗಳಾಗಿ ನಿಲಯದ ನಿರ್ದೇಶಕ ಜನಾರ್ಧನ್ ಜಿ.ಎಲ್., ರಾಜ್ಯ ಸಮುದಾಯ ಬಾನುಲಿ ಒಕ್ಕೂಟದ ಅಧ್ಯಕ್ಷ ಗುರುಪ್ರಸಾದ್, ಮಾರ್ಗದರ್ಶಿ ಪತ್ರಕರ್ತ ಹಾಲಸ್ವಾಮಿ ಆರ್.ಎಸ್., ನಿರೂಪಕ ಚೇತನ್ ಕುಮಾರ್, ಕಾರ್ಯಕ್ರಮ ಸಂಯೋಜನಾಧಿಕಾರಿ ಮಂಜುನಾಥ್ ಹಾಗೂ ಪತ್ರಕರ್ತ ಅಜೇಯ ಸಿಂಹ ಅವರು ಕಾರ್ಯನಿರ್ವಹಿಸಿದ್ದಾರೆ.
ಕನ್ನಡ ರಾಜ್ಯೋತ್ಸವವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ಕನ್ನಡದ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಯ ಮಹತ್ವವನ್ನು 24 ಗಂಟೆಗಳ ಕಾಲ ಜನರಿಗೆ ತಲುಪಿಸುವ ಮೂಲಕ ರೇಡಿಯೋ ಶಿವಮೊಗ್ಗ 90.8 ಎಫ್.ಎಂ ಮಾಧ್ಯಮ ಲೋಕದಲ್ಲಿ ಹೊಸ ಗುರುತರ ಹೆಜ್ಜೆಯನ್ನಿಟ್ಟಿದೆ. ಕನ್ನಡದ ಮೇಲಿನ ಅಭಿಮಾನ, ಭಾಷೆಯ ಮೇಲಿನ ಪ್ರೀತಿ ಮತ್ತು ಸಮುದಾಯದ ಒಗ್ಗಟ್ಟಿಗೆ ಈ ಕಾರ್ಯಕ್ರಮ ಉತ್ತಮ ನಿದರ್ಶನವಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು